Advertisement

ಸ್ವಚ್ಛ ಬೆಂಗಳೂರು ಅಭಿಯಾನ ಆರಂಭ

11:49 AM Feb 25, 2018 | Team Udayavani |

ಬೆಂಗಳೂರು: ಬೆಂಗಳೂರನ್ನು ಸ್ವಚ್ಛಹಾಗೂ ಸುಂದರ ನಗರವನ್ನಾಗಿಸಲು ಬಿಬಿಎಂಪಿಯಿಂದ ಹಮ್ಮಿಕೊಂಡಿರುವ “ಸ್ವಚ್ಛಬೆಂಗಳೂರು’ ಅಭಿಯಾನಕ್ಕೆ ರಸ್ತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಚಾಲನೆ ನೀಡಿದರು.

Advertisement

ಶನಿವಾರ ಹೆಬ್ಟಾಳದ ಬಿಎಂಟಿಸಿ ಡಿಪೋ ಆವರಣದ ಬಳಿ ಸ್ವಚ್ಛತಾ ಕಾರ್ಯ ಆರಂಭಿಸಿದ ಜಾರ್ಜ್‌ ನೇತೃತ್ವದ ತಂಡ ರಸ್ತೆ ಸ್ವಚ್ಛಗೊಳಿಸುವ ಹಾಗೂ ಹೆಬ್ಟಾಳ ಮೇಲ್ಸೇತುವೆಗೆ ಅಂಟಿಸಲಾಗಿದ್ದ ಭಿತ್ತಿ ಪತ್ರಗಳನ್ನು ತೆರವುಗೊಳಿಸಿದರು. ಈ ವೇಳೆ ಜಾರ್ಜ್‌ ಅವರಿಗೆ ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸಾಥ್‌ ನೀಡಿದರು. 

ಮುಖ್ಯಮಂತ್ರಿಗಳ ನಿರ್ದೇಶನ ಮೇರೆಗೆ ಬಿಬಿಎಂಪಿ ವತಿಯಿಂದ ಒಂದು ವಾರ ಸ್ವಚ್ಛಬೆಂಗಳೂರು ಅಭಿಯಾನ ಹಮ್ಮಿಕೊಂಡಿದೆ. ಅದರಂತೆ ಅಭಿಯಾನದಲ್ಲಿ ಬಬಿಎಂಪಿ ಅಧಿಕಾರಿಗಳು, ಪೌರಕಾರ್ಮಿಕರು, ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು, ಕ್ರೆಡಾಯ್‌, ಗುತ್ತಿಗೆದಾರರು ಹಾಗೂ ಸ್ವಯಂ ಸೇವಕರು ಭಾಗವಹಿಸಲಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. 

ಸ್ವಚ್ಛತಾ ಕಾರ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜೆ.ಜಾರ್ಜ್‌, ನಗರವನ್ನು ಸ್ವಚ್ಛಹಾಗೂ ಸುಂದರ ನಗರವನ್ನಾಗಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಒಂದು ವಾರ ನಗರದಲ್ಲಿರುವ ಕಟ್ಟಡ ಅವಶೇಷಗಳು ಹಾಗೂ ತ್ಯಾಜ್ಯ ತೆರವುಗೊಳಿಸಲಾಗುವುದು. ಜತೆಗೆ ಸಾರ್ವಜನಿಕರಿಗೆ ಅಗತ್ಯವಾದ ಉಪಕರಣಗಳನ್ನು ಪಾಲಿಕೆಯಿಂದ ನೀಡಲಾಗುವುದು ಎಂದರು. 

ನಗರದ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಬಿಬಿಎಂಪಿಯಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಹೊಸ ರೂಪ ಪಡೆದುಕೊಳ್ಳಲಿದೆ. ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಂದು ಮರ ಕಡಿದರೂ, ಅದಕ್ಕೆ ಪರ್ಯಾಯವಾಗಿ ನಗರದ ವಿವಿಧೆಡೆ 100 ಗಿಡಗಳನ್ನು ನೆಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

Advertisement

ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸುವ ಕೆಲವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಈಗಾಗಲೇ ಕೆರೆ ಅಂಗಳದಲ್ಲಿನ ಕಟ್ಟಡ ಅವಶೇಷಗಳು ಹಾಗೂ ತ್ಯಾಜ್ಯ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಅದರಂತೆ ಮುಂದಿನ 45 ದಿನಗಳಲ್ಲಿ ಕೆರೆಯ ಅಂಗಳವನ್ನು ಸ್ವಚ್ಛಗೊಳಿಸಲಾಗುವುದು. ಜತೆಗೆ ಕೆರೆಯಲ್ಲಿನ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಏರಿಯೇಟರ್ ಅಳವಡಿಸುವ ಕಾರ್ಯಕ್ಕೆ ಬಿಡಿಎ ಮುಂದಾಗಿದೆ ಎಂದು ಜಾರ್ಜ್‌ ತಿಳಿಸಿದರು. 

ನಗರದಲ್ಲಿ ಎಂಟು ದಿನಗಳ ಕಾಲ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿರುವ ಫ್ಲೆಕ್ಸ್‌, ಬಂಟಿಂಗ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಲಾಗುವುದು. ಒಂದೊಮ್ಮೆ ಮತ್ತೆ ಅವುಗಳನ್ನು ಅಳವಡಿಸಿ ನಗರದ ಅಂದವನ್ನು ಹಾಳ ಮಾಡಲು ಮುಂದಾದರೆ, ಕಠಿಣ ಕ್ರಮಕೈಗೊಳ್ಳಲಾಗುವುದು. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ 

ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿ, ಜನರೊಂದಿಗೆ ಸಂಪರ್ಕದಲ್ಲಿದ್ದರೆ ಸೀರೆ-ಉಡುಗೊರೆ ಹಂಚುವ ಅಗತ್ಯವಿಲ್ಲ. ನಾವು ಜನರ ಸಮಸ್ಯೆ ಪರಿಹರಿಸುವಲ್ಲಿ ನಿರತವಾಗಿರುವುದರಿಂದ ನಾವು ಈ ರೀತಿ ಮಾಡುವ ಅಗತ್ಯವಿರುವುದಿಲ್ಲ. ರಾಜಕಾರಣಿಗಳು ಬಡವರಿಗೆ ಸೀರೆ ಕೊಡುವುದು ಒಳ್ಳೆಯದೇ. ಆದರೆ, ಕೇವಲ ಚುನಾವಣೆ ಸಂದರ್ಭಲ್ಲಿ ಹಂಚುತ್ತಿದ್ದಾರೆ. ಚುನಾವಣಾ ಆಯೋಗ ಕ್ರಮಕೈಗೊಳ್ಳಲಿದೆ.
-ಕೆ.ಜೆ.ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ

ಸ್ವಚ್ಛಬೆಂಗಳೂರು ಅಭಿಯಾನ ಕೈಗೊಳ್ಳುವ ರಸ್ತೆಗಳ ವಿವರ
ವಲಯ    ರಸ್ತೆಗಳು    ಉದ್ದ (ಕಿ.ಮೀ.ಗಳಲ್ಲಿ)
ಪೂರ್ವ    73    170
ಪಶ್ಚಿಮ    62    130
ದಕ್ಷಿಣ    59    145
ಬೊಮ್ಮನಹಳ್ಳಿ    49    220
ದಾಸರಹಳ್ಳಿ    30    95
ಮಹದೇವಪುರ    29    115
ಯಲಹಂಕ    15    75
ರಾಜರಾಜೇಶ್ವರಿನಗರ    7    50
ಒಟ್ಟು    324    1,000

Advertisement

Udayavani is now on Telegram. Click here to join our channel and stay updated with the latest news.

Next