Advertisement

ಬೆಂಬಲ ಬೆಲೆ ಇದ್ದರೂ ಬೆಳೆ ಮಾರಲು ಷರತ್ತು ಅನ್ವಯ!

01:25 PM Dec 27, 2021 | Team Udayavani |

ಸಿಂಧನೂರು: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರೂ ಕೆಲವೊಂದು ಷರತ್ತು ವಿಧಿಸಿರುವುದರಿಂದ ರೈತರಿಗೆ ಪ್ರಯೋಜನವಾಗದಂತಾಗಿದೆ. ರೈತರಿಗೆ ಕೆಲ ನಿಯಮಗಳೇ ತೊಡಕಾಗಿದ್ದು ಬೆಂಬಲ ಬೆಲೆ ಕೇಂದ್ರದತ್ತ ರೈತರು ಮುಖ ಮಾಡದಂತಾಗಿದೆ.

Advertisement

ತಾಲೂಕಿನಲ್ಲಿ ಭತ್ತ ಹೊರತುಪಡಿಸಿದರೆ ಜೋಳ ಅತಿದೊಡ್ಡ ಬೆಳೆ. 2021-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದು ವಾರ ಕಳೆದರೂ ಬರೀ ಮೂವರು ಮಾತ್ರ ಹೆಸರು ನೋಂದಾಯಿಸಿದ್ದಾರೆ. ಅತೀ ಹೆಚ್ಚು ಜೋಳ ಬೆಳೆಯುತ್ತಿರುವ ರೈತರು ಸರಕಾರದ ಷರತ್ತುಗಳಿಂದ ಪ್ರಸಕ್ತ ಸಾಲಿನಲ್ಲಿ ಖರೀದಿ ಕೇಂದ್ರಗಳಲ್ಲಿ ತಮ್ಮ ಬೆಳೆ ನೀಡಲು ಹಿಂದೇಟು ಹಾಕುವಂತಾಗಿದೆ.

ಕಳೆದ ವರ್ಷ ಷರತ್ತುಗಳ ಸಡಿಲಿಕೆಯಿಂದ ಹೆಚ್ಚಿನ ಅನುಕೂಲವಾಗಿತ್ತು. ಪ್ರಸಕ್ತ ಸಾನಲ್ಲಿ ಎಕರೆಗೆ 20 ಕ್ವಿಂಟಲ್‌ ಮಿತಿ ಹಾಕಿದ್ದರಿಂದ ರೈತರು ಚಿಂತಿತರಾಗಿದ್ದು ಷರತ್ತು ಸಡಿಲಿಕೆ ನಿರೀಕ್ಷೆಯಲ್ಲಿ ಬೆಳೆ ಶೇಖರಿಸಿಟ್ಟುಕೊಂಡು ಕಾಯುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆ

ಷರತ್ತು ವಿಧಿಸಿದ್ದರಿಂದ ಜೋಳ ಕೊಯ್ಲು ಮಾಡಿದ ಕೆಲವು ರೈತರು ಅನಿವಾರ್ಯವಾಗಿ ಮಾರುಕಟ್ಟೆಗೆ ತಂದು ಮಾರುವಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಗೆ 1,650 ರೂ. ನಿಂದ 1,700 ರೂ.ವರೆಗೆ ಮಾತ್ರ ಬೆಲೆ ಇದೆ. ಆರ್ಥಿಕವಾಗಿ ದುರ್ಬಲರಾಗಿರುವ ರೈತರು ಬೇರೆ ದಾರಿಯಿಲ್ಲದೇ ಬೆಳೆ ಮಾರಾಟ ಮಾಡುತ್ತಿದ್ದರೆ, ಕೆಲ ರೈತರು ಮಾರುಕಟ್ಟೆಗೆ ತಂದ ಜೋಳ ಬೆಲೆ ಕಡಿಮೆಯಾದ ಕಾರಣ ಮನೆಗೆ ವಾಪಸ್‌ ಒಯ್ಯುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 2,738 ರೂ. ಇದೆ. ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗೆ ಹೋಲಿಸಿದರೆ, ಕ್ವಿಂಟಲ್‌ಗೆ 1,088 ರೂ. ವ್ಯತ್ಯಾಸವಿದೆ. ಪ್ರತಿ ಚೀಲಕ್ಕೆ 1 ಸಾವಿರ ರೂ. ಕಡಿಮೆಯಾಗುತ್ತಿದೆ. ಆದರೆ ಬೆಂಬಲ ಬೆಲೆ ಇದ್ದರೂ ಬೆಳೆ ಮಾರಲಾಗದೇ ರೈತರು ಚಿಂತಿಸುವಂತಾಗಿದೆ.

Advertisement

ಅವಕಾಶ ನೀಡಲು ಹಿಂದೇಟು

ಕಳೆದ ವರ್ಷ ತಾಲೂಕಿನಲ್ಲಿ 4.3 ಲಕ್ಷ ಕ್ವಿಂಟಲ್‌ ಜೋಳ ಮಾರಾಟ ಮಾಡಿದ್ದ ರೈತರಿಗೆ ಸರ್ಕಾರ 111 ಕೋಟಿ ರೂ. ಬಿಡುಗಡೆ ಮಾಡಿತ್ತು. 2020-21ನೇ ಸಾಲಿನಲ್ಲಿ 1,800 ಹೆಕ್ಟೇರ್‌ನಲ್ಲಿ ಜೋಳ ಬೆಳೆದಿದ್ದರೆ, 2021-22ನೇ ಸಾಲಿನಲ್ಲಿ 20 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಸರ್ಕಾರ 2.10 ಲಕ್ಷ ಮೆಟ್ರಿಕ್‌ ಟನ್‌ ಖರೀದಿ ಗುರಿ ನಿಗದಿಪಡಿಸಿಕೊಂಡಿದೆ. ರಾಯಚೂರು-ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿ ಜೋಳ ಬೆಳೆಯುವುದರಿಂದ ಗುರಿಯಷ್ಟು ಖರೀದಿಯೂ ಆಗುವುದಿಲ್ಲ. ಸರ್ಕಾರ ಗರಿಷ್ಠ ಖರೀದಿ ನಿರ್ಬಂಧ ತೆಗೆಯಬೇಕೆಂಬುದು ರೈತರ ಒತ್ತಾಯ.

ಶಾಸಕರಿಂದಲೂ ಪ್ರಯತ್ನ ಭತ್ತ, ಜೋಳ ಖರೀದಿಗೆ ಹಾಕಿರುವ ಷರತ್ತು ತೆಗೆದು ಹಾಕುವಂತೆ ಈಗಾಗಲೇ ಶಾಸಕ ವೆಂಕಟರಾವ್‌ ನಾಡಗೌಡ ಬೆಳಗಾವಿ ಅಧಿವೇಶನ ದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದು, ಪ್ರತಿಫಲ ದೊರೆಯಬಹುದೆಂಬ ಆಶಾಭಾವದಲ್ಲಿ ರೈತರಿದ್ದಾರೆ.

ಹೋದ ವರ್ಷದಂತೆ ಜೋಳ ಖರೀದಿ ಮಾಡಬೇಕು. ಇಲ್ಲದ ಷರತ್ತು ಹಾಕಿದರೆ, ರೈತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಬೇಗ ಜೋಳ ಬೆಳೆದ ರೈತರ ಪರವಾಗಿ ಸರ್ಕಾರ ಕಣ್ತೆರೆಯಬೇಕು. -ಮಲ್ಲಯ್ಯ ಮಾಡಸಿರವಾರ, ವಿಎಸ್‌ಎಸ್‌ಎನ್‌ ಅಧ್ಯಕ್ಷ, ಬೂದಿಹಾಳ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next