Advertisement

ತುಳುಭಾಷೆಗೆ ಬೇಕು ಸಂವಿಧಾನ ಮಾನ್ಯತೆ

12:20 PM Dec 27, 2017 | Sharanya Alva |

ಪಂಚದ್ರಾವಿಡ ಭಾಷೆಗಳಲ್ಲಿ ತುಳು ಒಂದು ಮಾತ್ರವಲ್ಲ, ಪುರಾತನವಾದುದು. ಮೂಲ ದ್ರಾವಿಡದಿಂದ ಮೊತ್ತ ಮೊದಲು ಟಿಸಿಲೊಡೆದ ಭಾಷೆ ಎಂಬುದು ಅದರ ಹೆಗ್ಗಳಿಕೆ. ಅಷ್ಟೇ ಅಲ್ಲದೆ, ತುಳು ಭಾಷೆಯು ದ್ರಾವಿಡ ಮೂಲದ ಭಾಷಾ ವರ್ಗದಲ್ಲೇ ಅತ್ಯಂತ ಪರಿಪೂರ್ಣವಾಗಿ ಬೆಳವಣಿಗೆ
ಹೊಂದಿರುವ ಭಾಷೆ ಎಂದು ಪ್ರಖ್ಯಾತ ಭಾಷಾತಜ್ಞರಾದ ರಾಬರ್ಟ್‌ ಕಾಲ್ಡ್‌ವೆಲ್‌ ಅವರು 1875ರಷ್ಟು ಹಿಂದೆಯೇ ಸೋದಾಹರಣವಾಗಿ ಪ್ರತಿಪಾದಿಸಿದ್ದಾರೆ. ತುಳುಭಾಷೆಗೆ ಸ್ವತಂತ್ರವಾದ ಲಿಪಿಯಿದ್ದು ಪ್ರಾಚೀನ ಕಾವ್ಯಗಳನ್ನು ಇದರಲ್ಲೇ ಬರೆಯಲಾಗಿದೆ ಎಂಬುದನ್ನು ಮರೆಯಲಾಗದು. ಪ್ರಸಿದ್ಧ ಲಿಪಿಶಾಸ್ತ್ರಜ್ಞ ಎ.ಸಿ.ಬರ್ನೆಲ್‌ ಮಲಯಾಳ ಲಿಪಿಯನ್ನು “ತುಳುಲಿಪಿ’ ಎಂದೇ ಕರೆದಿರುವುದು ಗಮನಾರ್ಹ.

Advertisement

ತುಳುನಾಡಿನಿಂದ ಕೇರಳಕ್ಕೆ ಹೋದ ಅರ್ಚಕ ವರ್ಗವು ಸಂಸ್ಕೃತದ ಮಂತ್ರಗಳನ್ನು ಬರೆಯಲು ರೂಢಿಸಿಕೊಂಡ “ಆರ್ಯಎಳುತ್ತು’ ಮುಂದೆ ವಿಕಾಸಗೊಂಡು ಮಲಯಾಳ ಲಿಪಿಯಾಯಿತು. ಈಗಲೂ ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಮಂಗಳೂರು ವಿ.ವಿ. ಮತ್ತು
ಧರ್ಮಸ್ಥಳದ ಮಂಜುನಾಥೇಶ್ವರ ಸಂಸ್ಕೃತಿ ಪ್ರತಿಷ್ಠಾನದ ವಸ್ತು ಸಂಗ್ರಹಾಲಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ತುಳು ಲಿಪಿಯ ತಾಡವಾಲೆಗಳನ್ನು ನೋಡಬಹುದು. ಕಾಸರಗೋಡಿನ ಅನಂತಪುರದಲ್ಲಿ ದೊರೆತ “ತುಳುಲಿಪಿ ತುಳುಭಾಷೆ’ಯಲ್ಲಿರುವ ಶಿಲಾಶಾಸನದ ಕಾಲವನ್ನು ಕ್ರಿ.ಶ. 15ನೆಯ ಶತಮಾನವೆಂದು ವಿದ್ವಾಂಸರು ಗುರುತಿಸಿದ್ದಾರೆ. ಹದಿನಾಲ್ಕು ಸಾಲುಗಳಲ್ಲಿರುವ ಈ ಶಾಸನದಲ್ಲಿ ರಳಾಕ್ಷರದ ಬಳಕೆ, “ತಡ್ಯ ಪರಿಹಾರ’ವೆಂಬ ಮನೆತೆರಿಗೆಯ ಉಲ್ಲೇಖ, ಅಪೂರ್ವ ಶಬ್ದರೂಪಗಳು ಅಧ್ಯಯನಯೋಗ್ಯವಾಗಿವೆ. ಅಶೋಕನ ಶಾಸನದಲ್ಲಿರುವ “ಸತಿಯ ಪುತ್ತೂ’ ತುಳುವಿನ ಅಳಿಯಕಟ್ಟು ಸಂಸ್ಕೃತಿಯನ್ನು ಸೂಚಿಸುತ್ತದೆ ಎಂದೂ, ಗ್ರೀಕ್‌ ಭಾಷೆಯ ಆಕ್ಸಿರಿಂಕಸ್‌ ಪಪೈರಿಯಲ್ಲಿ ತುಳುಪದಗಳಿವೆ ಎಂದೂ ವಿದ್ವಾಂಸರು ಸಂಶೋಧಿಸಿದ್ದಾರೆ. ಕನ್ನಡದ ಹಲ್ಮಿಡಿ ಶಾಸನದಲ್ಲಿರುವ “ಪೆತ್ತಜಯನಾ’ ಎಂಬುದೂ
ತುಳುಮೂಲದ ಪದಪ್ರಯೋಗವೆನ್ನುವುದು ಗಮನಾರ್ಹ.

ಪ್ರಾಚೀನ ಲಿಖಿತ ಸಾಹಿತ್ಯ
ಡಾ. ಪಿ. ವೆಂಕಟರಾಜ ಪುಣಿಂಚತ್ತಾಯರ ಸಂಶೋಧನಾ ತಪಸ್ಸಿನ ಫಲವಾಗಿ ಪಳಂತುಳುವಿನ ಶ್ರೀಮಂತ ಸಾಹಿತ್ಯ ಪರಂಪರೆ ಬೆಳಕಿಗೆ ಬಂದಿದ್ದು ಈಗ ಇತಿಹಾಸ. ಸುಮಾರು ಕ್ರಿ.ಶ 1200ರಲ್ಲಿ ರಚನೆಯಾಗಿದೆ ಎನ್ನಲಾದ “ದೇವೀಮಹಾತ್ಮೆ ಎಂಬ ತುಳುವಿನ ಪ್ರಾಚೀನ ಗದ್ಯಕಾವ್ಯ ಹಳೆಯ ತುಳುವಿನ ಅನೇಕ ಲಕ್ಷಣಗಳಿಗೆ ತವನಿಧಿಯಾಗಿದೆ. ಅನಂತರದ ಒಂದೆರಡು ಶತಮಾನಗಳಲ್ಲಿ ರಚನೆಗೊಂಡ ವಿಷ್ಣುಭಟ್ಟನ “ಶ್ರೀಭಾಗವತಾಥೊ’ (1370), ಅರುಣಾಬ್ಜನ “ಮಹಾಭಾರತೊ’ (1383), ಅಜ್ಞಾತ ಕವಿಯ “ಕಾವೇರಿ ಕಾವ್ಯೊ’ (1391), ಹರಿಯಪ್ಪನ “ಕರ್ಣಪವೊ’ (1385) ತುಳುವಿನ ಪ್ರಾಚೀನ ಸಾಹಿತ್ಯ ಪರಂಪರೆಗೆ ಸಾಕ್ಷಿಯಾಗಿವೆ. 

ಈ ಕಾವ್ಯಗಳು ಭಾಷೆ, ಛಂದಸ್ಸು, ಸಂಸ್ಕೃತಿಗಳ ದೆಸೆಯಲ್ಲಿ ಅಪೂರ್ವವಾದ ಅನೇಕ ಸಂಗತಿಗಳನ್ನು ಅನಾವರಣಗೊಳಿಸಿವೆ. ಈ ಕಾವ್ಯಗಳಲ್ಲಿ ಉಲ್ಲೇಖಗೊಂಡ ಇನ್ನಷ್ಟು ಹಿರಿಯ ಕವಿಗಳ ಮತ್ತು ಕಾವ್ಯಗಳ ಹೆಸರುಗಳು ತುಳುವಿನಲ್ಲಿ ಆಗಲೇ ಸಮೃದ್ಧ ಸಾಹಿತ್ಯವಿತ್ತು ಎನ್ನುವುದಕ್ಕೂ ಪುರಾವೆಯಾಗಿದೆ. ಮುಖ್ಯವಾಗಿ “ತುಳು ಮಹಾಭಾರತೊ’ ಕಾವ್ಯವನ್ನು ರಚಿಸಿದ ಅರುಣಾಬ್ಜ ಕವಿಗೆ ಆಶ್ರಯವನ್ನು ನೀಡಿದ ಶಿವಾ ನೆಡುಂಬುರಾರ್‌ ಎಂಬ ಅರಸನ ಕಾಲವು ಉಡುಪಿ ತಾಲೂಕಿನ ಬೆಣಗಲ್ಲು ಸಮೀಪದ ಸಾಸ್ತಾವು ಶಾಸನದಿಂದ (ಕ್ರಿ.ಶ. 1383) ನಿರ್ಣಯ 
ವಾಗಿರುವುದರಿಂದಲೂ, ಈ ಕಾವ್ಯದ ಮೇಲೆ ಕನ್ನಡದ ಗದುಗಿನ ಭಾರತದ ಪ್ರಭಾವ ಇರುವುದರಿಂದಲೂ, ಇದುವರೆಗೆ ಕ್ಲಿಷ್ಟವಾಗಿದ್ದ ಕುಮಾರವ್ಯಾಸನ ಕಾಲನಿರ್ಣಯ ಈಗ ಸುಲಭವಾಗಿದೆ. ದಿ.ಮಂಜೇಶ್ವರ ಗೋವಿಂದ ಪೈ ಅವರು ಹೇಳಿದಂತೆ ಕುಮಾರವ್ಯಾಸನ ಕಾಲ ಕ್ರಿ.ಶ. 1230-1235 ಎಂಬುದನ್ನು ನಾವು ಸ್ವೀಕರಿಸಬಹುದಾಗಿದೆ. ಇದು ಕನ್ನಡ ಸಂಶೋಧನೆಯ ಮೇಲೆ ಬೀರಿದ ತುಳುಸಾಹಿತ್ಯದ ಬೆಳಕು!

ಮೌಖಿಕ ಸಾಹಿತ್ಯ
ತುಳುನಾಡಿನ ಭೂತಾರಾಧನೆ ಒಂದು ವಿಶಿಷ್ಟ ಸಂಸ್ಕೃತಿಯಾಗಿ ಪರಿಗಣಿತವಾಗಿದೆ. ಈ ಭೂತಗಳ ಕುರಿತಾಗಿ ಮೌಖೀಕವಾಗಿ ಹರಿದುಬಂದ “ಪಾಡ್ದನ’ಗಳೆಂಬ ಕಥನಗೀತೆಗಳು ವಿಶ್ವದ ಜಾನಪದ ವಿದ್ವಾಂಸರನ್ನು ಆಕರ್ಷಿಸಿವೆ. ಪ್ರಾಚೀನ ಮಹಾಭಾರತೊ ಕಾವ್ಯದಲ್ಲಿ “ಮಾಡಾಂಬಿ’ ಎಂಬ ಭೂತದ ಉಲ್ಲೇಖವಿದೆ. ಪ್ರಸ್ತುತ ಬ್ರಾಹ್ಮಣ, ಬಂಟ, ಬಿಲ್ಲವ, ಹರಿಜನ, ಮುಸಲ್ಮಾನ, ಬ್ಯಾರಿ ಮುಂತಾದ ವಿವಿಧವರ್ಗಗಳ ಸುಮಾರು 1435 ಭೂತಗಳ ಹೆಸರನ್ನು ಸಂಗ್ರಹಿಸಲಾಗಿದ್ದು, ಅವುಗಳ ಆರಾಧನೆ ಕುತೂಹಲಕರವಾಗಿದೆ.

Advertisement

ಅಮೆರಿಕೆಯ ಡಾ.ಪೀಟರ್‌ ಜೆ. ಕ್ಲಾಸ್‌, ಫಿನ್ ಲ್ಯಾಂಡಿನಪ್ರೊ. ಲಾರಿ ಹಾಂಕೊ, ಅನೆಲಿ ಹಾಂಕೊ ಮುಂತಾದ ವಿದೇಶಿ ವಿದ್ವಾಂಸರು ಭೂತಾರಾಧನೆಯ ಕುರಿತು ಗಂಭೀರ ಸಂಶೋಧನೆಗಳನ್ನು ನಡೆಸಿದ್ದಾರೆ. ಮುಖ್ಯವಾಗಿ ಸಿರಿಪಾಡªನದ ಕುರಿತು ಫಿನ್ ಲ್ಯಾಂಡಿನ ತುರ್ಕು ವಿ.ವಿ.ಯು ನಡೆಸಿದ ಬಹುಮಾಧ್ಯಮ ದಾಖಲೀಕರಣದಿಂದ “ಮಾನಸಿಕ ಪಠ್ಯ-ಪ್ಯಾರಿಲಾರ್ಡ್‌ ಸಿದ್ಧಾಂತ’ಕ್ಕೆ ಗರಿ ಮೂಡಿದೆ. ಸಿರಿಪಾಡªನದಲ್ಲಿ 15682 ಸಾಲುಗಳಿದ್ದು, ಇದು ಪ್ರಾಚೀನ ಗ್ರೀಕ್‌ ಮಹಾಕಾವ್ಯ ಇಲಿಯೆಡ್‌ಗಿಂತ ಐದು ಸಾಲುಗಳಷ್ಟೆ ಕಡಿಮೆ ಎಂಬುದೂ ಮಹತ್ವದ ವಿಚಾರ. ಪಾಡ್ದನಗಳ ಅಧ್ಯಯನದಿಂದ ವಿಶ್ವಜಾನಪದದಲ್ಲಿ ತುಳುಸಂಸ್ಕೃತಿಗೆ ವಿಶಿಷ್ಟ ಸ್ಥಾನ ಲಭಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಇದರೊಂದಿಗೆ ಆಟಿಕಳಂಜ, ಕರೆಂಗೋಲು, ಮಾದಿರಪದ, ಉರಲ್‌, ಓಬೇಲೆ ಮುಂತಾದ ಹಲವು ಪ್ರಭೇದದ ಜನಪದ ಗೀತೆಗಳು, ಕತೆಗಳು, ಒಗಟು ಮತ್ತು ಗಾದೆಗಳು ತುಳು  ಭಾಷೆಯ ಅಪೂರ್ವಭಂಡಾರಗಳಾಗಿವೆ.

ನಿಘಂಟು ಮತ್ತು ವ್ಯಾಕರಣ
ತುಳು ಭಾಷೆಯ ಮೊದಲ ವ್ಯಾಕರಣ ಗ್ರಂಥವನ್ನು ರೆವೆ. ಜೆ. ಬ್ರಿಗೆಲ್‌ 1872 ರಲ್ಲೇ ರಚಿಸಿದರು. 1932 ರಲ್ಲಿ ಎಸ್‌. ಯು. ಪಣಿಯಾಡಿ ಅವರ ತುಳು ವ್ಯಾಕರಣ ಕೃತಿ ಪ್ರಕಟವಾಯಿತು. ಆ ಬಳಿಕ ಡಿ.ಎನ್‌.ಶಂಕರ ಭಟ್‌, ಎಸ್‌.ಎಲ್‌.ಭಟ್‌, ರಾಮಕೃಷ್ಣ ಶೆಟ್ಟಿ, ಎಂ.ರಾಮ, ಕೆ.ವಿ.ಜಲಜಾಕ್ಷಿ,
ಪದ್ಮನಾಭ ಕೇಕುಣ್ಣಾಯ ಮುಂತಾದ ವರು ಆಂಗ್ಲಭಾಷೆಯಲ್ಲಿ ತುಳುಭಾಷೆಯ ವ್ಯಾಕರಣದ ಕುರಿತು ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ. 1886ರಲ್ಲಿ ಎ.ಮ್ಯಾನರ್‌ ಅವರ ತುಳು-ಇಂಗ್ಲಿಷ್‌ ಡಿಕ್ಷನರಿ ಮೂಲಕ ತುಳುವಿನಲ್ಲಿ ನಿಘಂಟು ರಚನೆ ಆರಂಭವಾಯಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರವು ಡಾ.ಯು.ಪಿ.ಉಪಾಧ್ಯಾಯರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ (1988-1997) ತುಳು-ಕನ್ನಡ-ಇಂಗ್ಲಿಷ್‌ ನಿಘಂಟಿನ ಆರು ಬೃಹತ್‌ ಸಂಪುಟಗಳು ಇಡೀ ಭಾರತೀಯ ನಿಘಂಟುಲೋಕದಲ್ಲೇ ಒಂದು ವಿಶಿಷ್ಟ ಪ್ರಯತ್ನವಾಗಿದೆ. 

ಮಾನ್ಯತೆಗಾಗಿ ಹೋರಾಟ
ಸಂವಿಧಾನದ ಮಾನ್ಯತೆಯಿಂದ ಅನೇಕ ಪ್ರಯೋಜನಗಳಿವೆ. ಭಾಷೆ-ಸಾಹಿತ್ಯದ ಸಂವರ್ಧನೆಗೆ ಕೇಂದ್ರ-ರಾಜ್ಯ ಸರಕಾರಗಳ ಅನುದಾನದೊಂದಿಗೆ ಶಿಕ್ಷಣ, ಆಕಾಶವಾಣಿ ಮತ್ತು ದೂರದರ್ಶನ ಗಳಲ್ಲಿ ತುಳುವಿಗೆ ಸ್ಥಾನ ದೊರೆಯುತ್ತದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ತುಳುವಿನಲ್ಲಿ ಪ್ರಶ್ನೆ ಕೇಳುವುದು, ಆಡಳಿತಸೇವಾ ಪರೀಕ್ಷೆಗಳಲ್ಲಿ ಉತ್ತರಿಸುವುದು, ತುಳು ಮಾತೃಭಾಷೆಯವರು
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಮುಂತಾದ ಹತ್ತು ಹಲವು ಸೌಲಭ್ಯಗಳು ತುಳುವಿಗೆ ಲಭಿಸುತ್ತವೆ. ಕೇಂದ್ರ ಸಂಗೀತ ಅಕಾಡೆಮಿ, ಸಾಹಿತ್ಯ ಅಕಾಡೆಮಿಗಳಿಂದ ತುಳುಭಾಷೆಯ ಸಾಹಿತ್ಯ ಮತ್ತು ಕಲಾಪ್ರಕಾರಗಳಿಗೆ ಪ್ರೋತ್ಸಾಹ ಸಾಧ್ಯವಾಗುತ್ತದೆ.

ಆದರೆ ಭಾರತದ ಸಂವಿಧಾನದ ಮಾನ್ಯತೆಯಿಂದ ನಮ್ಮ ತುಳುಭಾಷೆ ವಂಚಿತವಾಗಿರುವುದು ವಿಪರ್ಯಾಸ. ಸಂವಿಧಾನ ರಚನೆಯ ವೇಳೆಗೆ ಹದಿನಾಲ್ಕು ಭಾಷೆಗಳು ಮಾತ್ರ ಎಂಟನೆಯ ಪರಿಚ್ಛೇದಕ್ಕೆ ಒಳಪಟ್ಟಿದ್ದು, ಅನಂತರ ಸಿಂಧಿ (1967), ನೇಪಾಳಿ, ಕೊಂಕಣಿ, ಮಣಿಪುರಿ (1992), ಡೋಗ್ರಿ, ಬೋಡೊ, ಮೈಥಿಲಿ, ಸಂತಾಲಿ (2003) ಭಾಷೆಗಳು ಸೇರ್ಪಡೆಗೊಂಡು ಈಗ ಅವುಗಳ ಸಂಖ್ಯೆ ಇಪ್ಪತ್ತೆರಡಕ್ಕೆ ಏರಿದೆ. ತುಳುಭಾಷೆಯಂತೂ ಇವುಗಳ ಸಾಲಿನಲ್ಲಿ ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಪಡೆದಿದೆ.

ಪ್ರತ್ಯೇಕವಾದ ರಾಜ್ಯದ ಮುಖವಾಣಿ ಎಂಬ ಸ್ಥಾನವಿಲ್ಲದೆಯೋ, ಸಾಕಷ್ಟು ಸಂಖ್ಯೆಯ ಸಂಸದರ ಬೆಂಬಲವಿಲ್ಲದೆಯೋ ತುಳುಭಾಷೆ ಮನ್ನಣೆಯ ಮಣೆಯೇರಲು ವಿಫಲವಾಗಿದೆ. ಹಲವಾರು ವರ್ಷಗಳಿಂದ ಸಂವಿಧಾನ ಮಾನ್ಯತೆಯ ಹಕ್ಕೊತ್ತಾಯ ನಡೆದಿದೆ. ದೆಹಲಿಯಲ್ಲೂ ಬೃಹತ್‌ ಸಮಾವೇಶವನ್ನು ನಡೆಸಲಾಗಿದೆ. ಇತ್ತೀಚೆಗೆ ಧರ್ಮಸ್ಥಳಕ್ಕೆ ಭಾರತದ ಸನ್ಮಾನ್ಯ ಪ್ರಧಾನಮಂತ್ರಿಗಳು ಬಂದಾಗ ಡಾ.ವೀರೇಂದ್ರ ಹೆಗ್ಗಡೆಯವರೂ ಅವರಲ್ಲಿ ವಿಜ್ಞಾಪಿಸಿ  ಕೊಂಡಿದ್ದಾರೆ. ಮೈ ಸೂರಿನಲ್ಲಿ ನಡೆದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಈ ಕುರಿತಾದ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ.

ಮೊನ್ನೆ ಬೆಂಗಳೂರಿನಲ್ಲಿ ನಡೆದ ತುಳುವರ ಸಮಾವೇಶದಲ್ಲಿ ಸನ್ಮಾನ್ಯ ಕರ್ನಾಟಕದ ರಾಜ್ಯಪಾಲರು ಈ ಸಂಬಂಧವಾಗಿ ಪ್ರಸ್ತಾವವನ್ನು ಸಲ್ಲಿಸಿದರೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದೆಂದೂ ಭರವಸೆ ನೀಡಿದ್ದಾರೆ. ಈಗ ಚೆಂಡು ತುಳುವರ ಅಂಗಳದಲ್ಲಿದೆ. ತುಳುವರ ಸಂಘಟಿತ ಪ್ರಯತ್ನವೊಂದೇ ಬಾಕಿ ಉಳಿದಿದೆ. ತುಳು ಸಂಘಸಂಸ್ಥೆಗಳು ತಮ್ಮ ಎಲ್ಲ ಸಭೆಗಳಲ್ಲೂ ತುಳುಭಾಷೆಗೆ ಸಂವಿಧಾನದ ಮಾನ್ಯತೆ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಬೇಕಿದೆ. ಸಾಹಿತಿ ಬುದ್ಧಿಜೀವಿಗಳು ಈ ಕುರಿತು ತಮ್ಮ ಆಗ್ರಹವನ್ನು ಅಭಿವ್ಯಕ್ತಗೊಳಿಸಬೇಕಾಗಿದೆ. ಪಕ್ಷಭೇದ ಮರೆತು ನಮ್ಮ ರಾಜಕಾರಣಿಗಳು ಭಾಷೆ – ಸಂಸ್ಕೃತಿಯ ಕುರಿತಾಗಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಚುನಾವಣೆಯ ಹೊಸಿಲಿನಲ್ಲಾದರೂ ತುಳುವರು ಒಗ್ಗಟ್ಟು, ಕ್ರಿಯಾಶೀಲತೆ ಮತ್ತು ಬದ್ಧತೆಯನ್ನು ತೋರಿಸಿದರೆ, ಬಹುಕಾಲದ ಬಯಕೆ ಈಡೇರಬಹುದು.

ಡಾ.ಕಬ್ಬಿನಾಲೆ ವಸಂತ, ಭಾರದ್ವಾಜ.(ಲೇಖಕರು ತುಳು-ಕನ್ನಡ ಸಾಹಿತಿ ಮತ್ತು ಸಂಶೋಧಕರು)

Advertisement

Udayavani is now on Telegram. Click here to join our channel and stay updated with the latest news.

Next