ಪ್ರತಿಭಾವಂತ ಮತ್ತು ಪ್ರಯೋಗಶೀಲ ಕಲಾವಿದೆ ಎಂದು ಹೆಸರಾದ ವಿದುಷಿ ಅಯನಾ ಪೆರ್ಲ ಸೆ. 21ರಂದು ಮಂಗಳೂರು ಪುರಭವನದಲ್ಲಿ ಪ್ರಸ್ತುತಪಡಿಸಿದ ಶುದ್ಧ ಪಾರಂಪರಿಕ ಶೈಲಿಯ ಶಾಸ್ತ್ರೀಯ ಭರತನಾಟ್ಯ “ಮಾರ್ಗಮ…’ ಹಲವು ಸ್ಮರಣೀಯ ಅನುಭವಗಳನ್ನು ಮನಸಿನಲ್ಲಿ ಉಳಿಯುವಂತೆ ಮಾಡಿತು. ಮೊದಲನೆಯದಾಗಿ ಈ ಕಲಾವಿದೆಯ ಖಚಿತ ಅಡವುಗಳು ಮತ್ತು ಅಂಗಶುದ್ಧಿ, ನಿರ್ದುಷ್ಟವಾದ ಹಸ್ತಮುದ್ರೆಗಳು ಮತ್ತು ಅರೆಮಂಡಿ ಭಂಗಿಗಳು. ಭಾವಾಭಿನಯದಲ್ಲೂ ಕಡಿಮೆಯೇನಿಲ್ಲ ಎಂಬಂತೆ ಒಂದೂಮುಕ್ಕಾಲು ಗಂಟೆ ಕಾಲ ಪ್ರದರ್ಶನಗೊಂಡ “ಮಾರ್ಗಮ…’ ಪ್ರದರ್ಶನದ ಮೂಲಕ ಅಯನಾ ಪೆರ್ಲ ತಾನೋರ್ವ ಕ್ಷಮತೆ ಇರುವ ಕಲಾವಿದೆ ಎಂಬುದನ್ನು ತೋರಿಸಿಕೊಟ್ಟರು.ಭೂಮಿಗೀತ ಸಾಹಿತ್ಯಿಕ – ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಯನಾ ಮೊದಲಿಗೆ ಸಂಕೀರ್ಣ ಅಲರಿಪುವನ್ನು ಪ್ರದರ್ಶಿಸಿದರು. ನೃತ್ಯಗುರುಗಳಾದ ವಿ| ಶಾರದಾಮಣಿ ಶೇಖರ್ ಇದಕ್ಕೆ ಕೊರಿಯೋಗ್ರಾಫ್ ಮಾಡಿದ್ದರು. ಸಂಕೀರ್ಣ ನಡೆಗಳಿರುವ ಈ ಆರಂಭದ ನೃತ್ಯದಲ್ಲಿ ಅಯನಾ ಪ್ರಬುದ್ಧತೆಯನ್ನು ತೋರ್ಪಡಿಸಿದರು. ಅನಂತರ ವಿ| ಶ್ರೀಲತಾ ನಾಗರಾಜ್ ಕೊರಿಯೋಗ್ರಾಫ್ ಮಾಡಿದ ಜತಿಸ್ವರದಲ್ಲಿ (ರಸಾಲಿ ರಾಗ, ಆದಿ ತಾಳ) ಶಾಸ್ತ್ರೀಯವಾದ ರೀತಿಯಲ್ಲಿ ಆಂಗಿಕಗಳನ್ನು ಪ್ರದರ್ಶಿಸಿದರು.
ಬಳಿಕ ಚೆನ್ನೈಯ ಡಾ| ಜಾನಕಿ ರಂಗರಾಜನ್ ಅವರು ನೃತ್ಯ ಸಂಯೋಜಿಸಿದ, ಸುಮಾರು ಮುಕ್ಕಾಲು ತಾಸಿನ ದೀರ್ಘವಾದ “ಪದವರ್ಣಂ’ (ಕಲ್ಯಾಣಿ ರಾಗ, ರೂಪಕ ತಾಳ) ಹಲವು ಸಂಕೀರ್ಣ ಭಂಗಿ ಮತ್ತು ನಡೆಗಳನ್ನು ಒಳಗೊಂಡಿತ್ತು. ನೃತ್ತ ಮತ್ತು ಅಭಿನಯಗಳು ಸಮಪ್ರಮಾಣದಲ್ಲಿ ಬೆರೆತಿರುವ ಈ ಪದವರ್ಣಂ ಅನ್ನು ಅಯನಾ ಅಭಿನಯಿಸಿ ಶುದ್ಧ ಶಾಸ್ತ್ರೀಯ ನೃತ್ಯದ ರುಚಿ ಹಾಗೂ ಆಯಾಮಗಳನ್ನು ತೋರಿಸಿಕೊಟ್ಟರು.
ಅನಂತರ ರಾಜಶ್ರೀ ವಾರಿಯರ್ ನೃತ್ಯ ಸಂಯೋಜನೆ ಮಾಡಿದ, ಸುಬ್ಬರಾಮ ಅಯ್ಯರ್ ಅವರ ರಚನೆಯಾದ (ಸೌರಾಷ್ಟ್ರ ರಾಗ, ಆದಿ ತಾಳ) “ಪದಂ’ ಅನ್ನು ಕೈಗೆತ್ತಿಕೊಂಡು ಸಾದ್ಯಂತವಾಗಿ ಒಳ್ಳೆಯ ಅಭಿನಯವನ್ನು ತೋರಿಸಿದರು.
ಜಾವಳಿಗಳು ಆಹ್ಲಾದಕರ ಭಾವನೆಗಳನ್ನು ಉದ್ದೀಪಿಸುವ ರಚನೆಗಳು. ನಾದಮಾಧುರ್ಯ, ಶೃಂಗಾರಭಾವ, ಚುರುಕುನಡೆಗಳಿರುವ ಈ ರಚನೆಗಳು ತುಸು ಆಮೋದವನ್ನು ಉಂಟುಮಾಡುತ್ತವೆ. ಅಯನಾ ಆಯ್ದುಕೊಂಡ ಬೇಹಾಗ್ ರಾಗದ ರೂಪಕ ತಾಳದ ಜಾವಳಿ ರಂಜಿಸಿತು.
ಕೊನೆಯಲ್ಲಿ ಲಾಲ್‌ಗುಡಿ ಜಯರಾಮನ್ ಅವರ ರಚನೆ ಹಾಗೂ ರಮಾ ವೈದ್ಯನಾಥನ್ ಅವರ ನೃತ್ಯಸಂಯೋಜನೆಯ ತಿಲ್ಲಾನವನ್ನು (ಮಧು ವಂತಿ ರಾಗ, ಆದಿ ತಾಳ) ಅಯನಾ ಅತ್ಯಂತ ಕೌಶಲ್ಯಪೂರ್ಣವಾಗಿ ಅಭಿನಯಿಸಿದರು.
ವಿ| ಶಾರದಾಮಣಿ ಶೇಖರ್ ನಟುವಾಂಗದಲ್ಲಿ, ರಜನಿ ಚಿಪ್ಳೂಣಕರ್ ಹಾಡುಗಾರಿಕೆಯಲ್ಲಿ, ವಿ| ರಾಜನ್ ಪಯ್ಯನ್ನೂರು ಮೃದಂಗದಲ್ಲಿ ಮತ್ತು ಮಣಿಪಾಲದ ಪವನ ಬಿ. ಆಚಾರ್ ವೀಣೆಯಲ್ಲಿ ಸಹಕಾರ ನೀಡಿ ಇಡೀಪ್ರದರ್ಶನವನ್ನು ಎತ್ತಿ ಹಿಡಿದರು.
ರಾಧಾಕೃಷ್ಣ