Advertisement

ಇನ್ನು ಮುಂದೆ ಟಿವಿ ತರಗತಿ : ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ

01:41 AM Jul 23, 2020 | Hari Prasad |

ಬೆಂಗಳೂರು: ಕೋವಿಡ್ 19 ಕಾರಣ ಶಾಲೆ ತೆರೆಯುವುದು ಅನಿಶ್ಚಿತವಾಗಿದ್ದು, ರಾಜ್ಯ ಪಠ್ಯಕ್ರಮದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟಿವಿ ಮೂಲಕವೇ ತರಗತಿ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಇದಕ್ಕಾಗಿ ಟಿವಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

8ರಿಂದ 10ನೇ ತರಗತಿಗೆ ಈಗಾಗಲೇ ‘ಸೇತುಬಂಧ’ ಕಾರ್ಯಕ್ರಮ ನಡೆಯುತ್ತಿದೆ. 20 ದಿನಗಳ ಈ ಕಾರ್ಯಕ್ರಮ ಮುಗಿದ ಬಳಿಕ 1ರಿಂದ 10ನೇ ತರಗತಿಯ ರಾಜ್ಯ ಪಠ್ಯಕ್ರಮದ ಎಲ್ಲ ವಿದ್ಯಾರ್ಥಿಗಳಿಗೂ ಸಾಮಾನ್ಯ ತರಗತಿಯನ್ನು ಟಿವಿ ಮೂಲಕವೇ ಆರಂಭಿಸಲಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ‘ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

ಎರಡು ಸ್ವಂತ ಚಾನೆಲ್‌ ಬಳಕೆ
ಟಿವಿ ಮೂಲಕವೇ ಸಾಮಾನ್ಯ ತರಗತಿ ಕಷ್ಟ. ಇದನ್ನು ಅರಿತ ಸಾರ್ವಜನಿಕ ಶಿಕ್ಷಣ ಇಲಾಖೆಯು ದೂರದರ್ಶನ ಜತೆಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ (ಡಿಎಸ್‌ಇಆರ್‌ಟಿ) ಸೇರಿದ 2 ಶಿಕ್ಷಣ ಚಾನೆಲ್‌ಗ‌ಳಲ್ಲಿ ಬೋಧಿಸಲು ಉದ್ದೇಶಿಸಿದೆ. ಇದಕ್ಕಾಗಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪರವಾನಿಗೆ ಪಡೆದು, ಸ್ಥಳೀಯ ಕೇಬಲ್‌ ಆಪರೇಟರ್‌ಗಳ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಸುಸಜ್ಜಿತ ಸ್ಟುಡಿಯೋ
ಡಿಎಸ್‌ಇಆರ್‌ಟಿಯಲ್ಲಿ ಸುಸಜ್ಜಿತ ಸ್ಟುಡಿಯೋ ಇದ್ದು, ‘ಸೇತುಬಂಧ’ದ ಪೂರ್ತಿ ರೆಕಾರ್ಡಿಂಗ್‌ ಇಲ್ಲಿಯೇ ನಡೆಯುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ತರಗತಿಯನ್ನು ಇಲ್ಲಿಯೇ ರೆಕಾರ್ಡಿಂಗ್‌ ಮಾಡಬಹುದಾದ ಸಾಮರ್ಥ್ಯವನ್ನೂ ಹೊಂದಿದೆ. ಆದರೆ ಆಂಗ್ಲ ಮಾಧ್ಯಮ ಮತ್ತು ಉಳಿದ ತರಗತಿಗಳ ಬೋಧನ ವಿಷಯಗಳನ್ನು ರೆಕಾರ್ಡ್‌ ಮಾಡುವಷ್ಟು ಸಾಮರ್ಥ್ಯ ಇಲ್ಲಿಲ್ಲ.

Advertisement

ಬಾಡಿಗೆ ರೂಪದಲ್ಲಿ ಸ್ಟುಡಿಯೋಗಳು ಲಭ್ಯವಾದರೆ ಆಂಗ್ಲ ಮಾಧ್ಯಮದ ತರಗತಿಗಳನ್ನು ರೆಕಾರ್ಡ್‌ ಮಾಡಿ ಯೂಟ್ಯೂಬ್‌ ಚಾನೆಲ್‌ಗ‌ಳಲ್ಲಾದರೂ ಪ್ರಸಾರ ಮಾಡಬಹುದಾಗಿದೆ. ಆದರೆ 1ರಿಂದ 10ನೇ ತರಗತಿಯ ಮಕ್ಕಳಿಗೆ ತರಗತಿ ನಡೆಸಲು ಕನಿಷ್ಠ ನಾಲ್ಕೈದು ಸ್ಟುಡಿಯೋಗಳು ಬೇಕಾಗುತ್ತವೆ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಂ. ಆರ್‌. ಮಾರುತಿ ಅವರು ಮಾಹಿತಿ ನೀಡಿದರು.

ಶೀಘ್ರ ಸಮಗ್ರ ವೇಳಾಪಟ್ಟಿ
ಎಲ್ಲ ತರಗತಿಗಳಿಗೆ ಟಿವಿ ತರಗತಿ ನಡೆಸಲು ಹೆಚ್ಚಿನ ಸಿದ್ಧತೆ ಅಗತ್ಯ. ದೂರದರ್ಶನದಿಂದ ಈಗ ನಿತ್ಯ 4 ಗಂಟೆ ಸಿಗುತ್ತಿದೆ. ಉಳಿದ ಸಮಯವನ್ನು ಬೇರೆ ಚಾನೆಲ್‌ಗ‌ಳಿಂದ ಹೊಂದಾಣಿಕೆ ಮಾಡ ಬೇಕಾಗುತ್ತದೆ ಮತ್ತು ಅದರಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕಾಗುತ್ತದೆ. ಮಕ್ಕಳನ್ನು ಟಿವಿ ಮುಂದೆ ಕೂರಿಸಿ ತರಗತಿಯನ್ನು ಪ್ರಾಮಾಣಿಕವಾಗಿ ಎದುರಿಸುವಂತೆ ಮಾಡುವ ಜವಾಬ್ದಾರಿ ಪಾಲಕರ ಮೇಲೂ ಇದೆ. ತರಗತಿ ಆರಂಭಕ್ಕೆ ಮುನ್ನ ಸಮಗ್ರ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳ ‘ಸೇತುಬಂಧ’ ಮುಗಿಯುತ್ತಿದ್ದಂತೆ, ಟಿವಿ ಮೂಲಕವೇ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾನ್ಯ ತರಗತಿ ಆರಂಭಿಸಲಿದ್ದೇವೆ. ಅಗತ್ಯ ಸಹಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಂದಲೂ ಪಡೆಯಲಿದ್ದೇವೆ.
– ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next