Advertisement

ಒಂದೇ ಬಾರಿಗೆ 6 ಶಿಕ್ಷಕರ ವರ್ಗ: ಶಾಸಕರಿಗೆ ದೂರು

12:17 AM Jun 27, 2019 | mahesh |

ನಗರ: ಸರಕಾರಿ ಶಾಲೆಗೆ ಮಕ್ಕಳ ಸೇರ್ಪಡೆಯನ್ನು ಹೆಚ್ಚಿಸುವ ‘ಕಲನ’ದಂತಹ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಯಶಸ್ಸು ಕಂಡ ಶತಮಾನದ ಇತಿಹಾಸವನ್ನು ಹೊಂದಿರುವ ಪುತ್ತೂರಿನ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಗೆ ಒಂದೇ ಬಾರಿಗೆ 6 ಶಿಕ್ಷಕರ ವರ್ಗಾವಣೆಯ ಸಹಿತ ಈ ಬಾರಿ 9 ಶಿಕ್ಷಕರು ಶಾಲೆಯಿಂದ ವಿಮುಖರಾಗುವ ಹೊಡೆತ ಬಿದ್ದಿದೆ.

Advertisement

ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಲ್ಲಿ 24 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಮೂವರು ಶಿಕ್ಷಕರು ಎಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದಾರೆ. ಉಳಿದ 21 ಶಿಕ್ಷಕರ ಪೈಕಿ ಒಬ್ಬರು ದೈ.ಶಿ. ಶಿಕ್ಷಕರು, ಇನ್ನೊಬ್ಬರು ಚಿತ್ರಕಲಾ ಶಿಕ್ಷಕರು. ವಿಷಯ ಬೋಧನೆಗೆ 19 ಶಿಕ್ಷಕರಿದ್ದರು. ಈಗ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಸರಕಾರದ ಮಾನದಂಡದ ಪ್ರಕಾರ 6 ಮಂದಿಗೆ ವರ್ಗಾವಣೆಯಾಗಿದ್ದು, ಮಂಗಳೂರಿನಲ್ಲಿ ನಡೆದ ಕೌನ್ಸೆಲಿಂಗ್‌ನಲ್ಲಿ ಇವರೆಲ್ಲರೂ ಬೇರೆ ಶಾಲೆಗಳಿಗೆ ವರ್ಗಾವಣೆ ಆದೇಶ ಪಡೆದುಕೊಂಡಿದ್ದಾರೆ. ಆ ಮೂಲಕ ತಾಲೂಕಿನಲ್ಲೇ ಅತಿ ಹೆಚ್ಚು 654 ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಶಾಲೆಗೆ ತೀವ್ರ ಆಘಾತ ಎದುರಾಗಿದೆ. ಈ ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ಅಧ್ಯಾಪಕರೆಲ್ಲರೂ ಸೇರಿಕೊಂಡು ಮಾಡಿದ ಕಲನ ವಿಶೇಷ ಮಕ್ಕಳ ಸೇರ್ಪಡೆ ಅಭಿಯಾನದ ಮೂಲಕ 325 ಮಕ್ಕಳು ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡಿದ್ದರು.

15 ಶಿಕ್ಷಕರು ಮಾತ್ರ
ಪ್ರಸ್ತುತ ಶಾಲೆಯ ಶಿಕ್ಷಕರಾದ ಕವಿತಾ ಡಿ.ಎಂ., ಮಾಲಿನಿ ಕೆ.ಎನ್‌., ಪೂರ್ಣಿಮಾ ನಾಯಕ್‌, ವಿನುತಾ, ವಸಂತಿ ಕುಮಾರಿ ಮತ್ತು ಉಮೇರ್‌ ತಬಸ್ಸಮ್‌ ವರ್ಗಾವಣೆಗೊಂಡಿದ್ದಾರೆ. ಶಾಲೆಯಲ್ಲಿ 15 ಶಿಕ್ಷಕರು ಮಾತ್ರ ಉಳಿದುಕೊಂಡಿರುವುದು ಅಷ್ಟೊಂದು ಮಕ್ಕಳಿಗೆ ಪಾಠ ಮಾಡಲು ಹೊರೆಯಾಗಬಹುದು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

325 ಹೊಸ ದಾಖಲಾತಿ
ಸರಕಾರಿ ಶಾಲೆಯಲ್ಲಿ ಈ ವರ್ಷ ನಡೆಸಿದ ವಿಶೇಷ ದಾಖಲಾತಿ ಪ್ರಚಾ ರಾಂದೋಲನದ ಪರಿಣಾಮವಾಗಿ 325 ಹೊಸ ವಿದ್ಯಾರ್ಥಿಗಳು ದಾಖಲಾಗಿದ್ದರು. ಹೀಗಾಗಿ ಈ ಶಾಲೆಗೆ ಶಿಕ್ಷಕರ ಪ್ರಮಾಣದಲ್ಲಿ ವಿಶೇಷ ಆದ್ಯತೆ ನೀಡಬೇಕಿತ್ತು.

ಒಮ್ಮೆಲೇ 6 ಶಿಕ್ಷಕರ ವರ್ಗ ಮಾಡಿರುವುದು ವಿಷಾದದ ಸಂಗತಿ. ಡಿಡಿಪಿಐ ಜತೆ ಮಾತನಾಡಿದ ಸಂದರ್ಭ ಸರಕಾರದ ಸುತ್ತೋಲೆಯಂತೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ ಎಂದು ಎಸ್‌ಡಿಎಂಸಿ ಕಾರ್ಯಾಧ್ಯಕ್ಷ, ನಗರಸಭೆ ಸದಸ್ಯರೂ ಆದ ಪಿ.ಜಿ. ಜಗನ್ನಿವಾಸ ರಾವ್‌ ಹೇಳಿದ್ದಾರೆ.

Advertisement

ಶಾಸಕರಿಗೆ ದೂರು
ಶಾಲೆಯಿಂದ 6 ಶಿಕ್ಷಕರನ್ನು ಒಂದೇ ಬಾರಿಗೆ ವರ್ಗಾವಣೆ ಮಾಡಿರುವ ಕುರಿತು ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಹೆತ್ತವರು ಸೇರಿಕೊಂಡು ಶಾಲಾ ಅಧ್ಯಕ್ಷರಾಗಿರುವ ಶಾಸಕ ಸಂಜೀವ ಮಠಂದೂರು ಅವರಿಗೆ ದೂರಿನ ಮನವಿ ಸಲ್ಲಿಸಿದ್ದಾರೆ. ಶಾಲೆಯ ಪ್ರಗತಿಯ ದೃಷ್ಟಿಯಿಂದ ಶಿಕ್ಷಕರನ್ನು ಉಳಿಸಿಕೊಳ್ಳುವಂತೆ ವಿನಂತಿ ಮಾಡಿದ್ದಾರೆ. ಕಾರ್ಯಾಧ್ಯಕ್ಷ ಪಿ.ಜಿ. ಜಗನ್ನಿವಾಸ್‌ ರಾವ್‌, ಪೋಷಕ ಸುರೇಶ್‌ ಪಡಂಬೈಲು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದಾರೆ. ಶಾಸಕರು ಗುರುವಾರ ಬೆಂಗಳೂರಿನಲ್ಲಿ ಇಲಾಖಾಧಿಕಾರಿಗಳ ಜತೆ ಮಾತನಾಡುವ ಭರವಸೆ ನೀಡಿದ್ದಾರೆ.

ತತ್‌ಕ್ಷಣ ಹುದ್ದೆ ಭರ್ತಿ

ಸರಕಾರದ ವರ್ಗಾವಣೆ ಮಾನದಂಡದಂತೆ ಹೆಚ್ಚುವರಿ ಶಿಕ್ಷಕರನ್ನು ಆರಿಸಲಾಗಿದೆ. ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಇನ್ನು ಮುಂದಿನ ಹಂತದಲ್ಲಿ ಕಡ್ಡಾಯ ವರ್ಗಾವಣೆ ಬರಲಿದೆ. 10 ವರ್ಷಕ್ಕಿಂತ ಹೆಚ್ಚು ಒಂದೇ ಕಡೆ ಕೆಲಸ ಮಾಡುತ್ತಿರುವವರು ವರ್ಗವಾಗಲಿದ್ದಾರೆ. ಆದರೆ ಈ ಹುದ್ದೆಗಳಿಗೆ ತತ್‌ಕ್ಷಣ ಭರ್ತಿ ಮಾಡಲಾಗುತ್ತದೆ
– ಸುಕನ್ಯಾ ಡಿ.ಎನ್‌.ಕ್ಷೇತ್ರ ಶಿಕ್ಷಣಾಧಿಕಾರಿ

ಸರಕಾರವೇ ಹಾಳು ಮಾಡುತ್ತಿದೆ

ಕಡಿಮೆ ಮಕ್ಕಳಿರುವ ಮತ್ತು ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಒಂದೇ ಮಾನದಂಡ ಅನುಸರಿಸಿರುವುದು ಸರಿಯಲ್ಲ. ಐತಿಹಾಸಿಕ ಹಿನ್ನಲೆಯುಳ್ಳ ಸರಕಾರಿ ಶಾಲೆಯನ್ನು ಸರಕಾರವೇ ಹಾಳು ಮಾಡುತ್ತಿದೆ.
– ಸುರೇಶ್‌ವಿದ್ಯಾರ್ಥಿಗಳ ಹೆತ್ತವರು

ನಿವೃತ್ತಿ ಪರಿಗಣಿಸಿಲ್ಲ
ಕೊಂಬೆಟ್ಟು ಶಾಲೆಯ ಹೆಚ್ಚುವರಿ ಶಿಕ್ಷಕರ ಪಟ್ಟಿ ತಯಾರಿಸುವ ಸಂದರ್ಭ ಹಿಂದಿನ ವರ್ಷದ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ ಲೆಕ್ಕ ಹಾಕಲಾಗಿದೆ. ನಿವೃತ್ತರ ಸಂಖ್ಯೆಯನ್ನು ಗಮನಿಸಿಕೊಂಡಿಲ್ಲ ಎಂದು ಕಾಣುತ್ತದೆ.
– ಪಿ.ಜಿ. ಜಗನ್ನಿವಾಸ ರಾವ್‌ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ
Advertisement

Udayavani is now on Telegram. Click here to join our channel and stay updated with the latest news.

Next