ಮೊನ್ನೆ ಕ್ಲಾಸ್‌ಗೆ ಹೋಗಿ ಕೂತರೆ ಅದೇಕೋ ಪಾಠ ಕೇಳಲು ಮೂಡೇ ಬರಿರ್ಲಿಲ್ಲ. ಮೊದಲ ಕ್ಲಾಸ್ ಫುಲ್ ನಿದ್ರೆ ಮಾಡೋ ಎಲ್ಲಾ ಲಕ್ಷಣ ಎದ್ದು ಕಾಣಾ ಇತ್ತು. ಇನ್ನೇನು ಮೊದಲ ಕ್ಲಾಸು ಮುಗೀತಾ ಬಂತು ಅನ್ನೋ ಹಾಗೇನೇ ಮುಂದುಗಡೆ ಕುಳಿತಿದ್ದ ಗುರು ತಿರುಗಿ, “ನಿದ್ರೆ ಬಂದು ಸಾಯ್ತಿದೆ. ಹಾಗೇ ಒಂದು ರೌಂಡ್ ಶಿಶಿಲ ಸೌತಡ್ಕ ಕಡೆ ಹೋಗ್ ಬರೋಣ’ ಎಂದ. ಅದೇನೋ ಗೊತ್ತಿಲ್ಲ ನೋಡಿ ಫ್ರೆಂಡ್ಸ್ ಎಲ್ಲರಿಗೂ ಒಟ್ಟಿಗೆ ಕ್ಲಾಸ್ ಬೋರ್ ಆಗೋದು ಮಾಮೂಲಿ. ನಾವ್ ಬೇಕೂ ಅಂತ ಬಂಕ್ ಮಾಡಿದ ಕ್ಲಾಸ್‌ಗಳಿಗಿಂತ ಸ್ನೇಹಿತರಿಗೆ ಬೇಜಾರು ಅಂತ ಅವರು ಎಳೆದುಕೊಂಡು ಹೊರಗಡೆ ಹೋದ ಕ್ಲಾಸ್‌ಗಳೇ ಜಾಸ್ತಿ ಇವೆ. ಮೊನ್ನೆಯೂ ಹಾಗೇ ಆಯ್ತು. ಗುರುರಾಜ್ ಕರೆದ ಅಂತ ನಾವೆಲ್ಲ ಬಂಕ್ ಮಾಡಿದ್ವಿ. ಹಾಗೆ ಹೀಗೆ ಅನ್ನೋ ಅಷ್ಟರಲ್ಲಿ ನಮ್ಮ ನಾಲ್ಕು ಜನರ ಎರಡು ಬೈಕ್ ತಯಾರಾಗಿಬಿಟ್ಟಿದ್ದವು.
ಸೀದಾ ಹೊರಟಿದ್ದು ನಮ್ಮ ಸವಾರಿ ಸೌತಡ್ಕ, ಶಿಶಿಲ ಕಡೆಗೆ. ಧರ್ಮಸ್ಥಳದಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಜರ್ಕಿನ್ ಏರಿಸಿಕೊಂಡು ಸುರಿಯುವ ಮಳೆಯಲ್ಲಿ ನಾವು ಹೊರಟೆವು. “ಧೋ’ ಎಂದು ಸುರಿಯುವ ಮಳೆಯನ್ನು ಕಂಡು, “ಒಮ್ಮೆ ಬೇಕಿತ್ತಾ ಈ ಹುಚ್ಚು ಸಾಹಸ?’ ಅನ್ನಿಸದೇ ಇರಲಿಲ್ಲ. ಆದರೂ ಹಠಬಿಡಲು ಮನಸ್ಸು ಕೂಡ ತಯಾರಿರಲಿಲ್ಲ.
ಧರ್ಮಸ್ಥಳದಿಂದ ಸೌತಡ್ಕ ಹೋಗುವ ರಸ್ತೆ ಪ್ರಾಯಶಃ ಡಾಂಬರು ಕಾಣದೆ ದಶಕಗಳೇ ಕಂಡಿದೆ. ರಸ್ತೆಯ ತುಂಬಾ ಎರಡೆರಡಡಿ ಹೊಂಡಗಳು. ಜೋರು ಮಳೆಯಿಂದ ಹೊಂಡದಲ್ಲಿ ನೀರು ತುಂಬಿದ್ದ ಕಾರಣ ಹೊಂಡ ಎಷ್ಟು ದೊಡ್ಡದಿದೆ ಎಂಬುದೂ ತಿಳಿಯುತ್ತಿರಲಿಲ್ಲ. ಬೈಕಿನ ಚಕ್ರ ಹೋಗಿ ಹೊಂಡದಲ್ಲಿ ಇಳಿದಾಗಲೇ ಹೊಂಡದ ಗಾತ್ರ ಬೆನ್ನಿಗೆ ಬಿದ್ದ ಪೆಟ್ಟಿನಿಂದ ತಿಳಿಯುತಿತ್ತು. ಹೀಗೆ ಸೌತಡ್ಕ ಸೇರಿ ಗಣೇಶನ ದರ್ಶನ ಮಾಡಿ “ಇನ್ಮೆàಲೆ ಕ್ಲಾಸ್ ಬೋರ್ ಹೊಡೆಸಿ ನಿನ್ನತ್ರ ಕರೆಸಿಕೊಳ್ಬೇಡ್ವಪ್ಪ’ ಅಂತ ಹೇಳಿ ವಾಪಾಸು ಹೊರಟೆವು.
ಮಧ್ಯಾಹ್ನ ಬಿಸಿ ಬಿಸಿ ನೀರಿನ ಸ್ನಾನ ಮಾಡಿ, ಬೆಳಗ್ಗಿನಿಂದ ಏನೂ ನಡೆದೇ ಇಲ್ವೇನೋ ಎಂಬಂತೆ ಕ್ಲಾಸ್ ಹೊಕ್ಕೆವು. ನಾವು ಹೋಗಿ ಬಂದು ಒಂದು ವಾರವಾದರೂ ಅದಕ್ಕೆ ಸಾಕ್ಷಿಯಾಗಿ ಉಳಿದುಕೊಂಡಿರುವುದು ಶೀತ ಮತ್ತು ಕ್ಲಾಸ್ ಬೋರ್ ಆಗದಂತೆ ನೋಡಿಕೊಳ್ಳುವ ಕೆಮ್ಮು ಮಾತ್ರ.
ರೋಹಿತ್ ಬಾಸ್ರಿ
ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಮ್ ಕಾಲೇಜು, ಉಜಿರೆ