ನವದೆಹಲಿ: ಆತ ಓದಿದ್ದು 8ನೇ ತರಗತಿ. ಆದರೆ ಆತ ಪರಿಚಯ ಮಾಡಿಕೊಡುವುದು ತಾನೊಬ್ಬ ಪೊಲೀಸ್ ಅಧಿಕಾರಿ ಎಂದು. ಪೊಲೀಸ್ ಅಧಿಕಾರಿಯಂತೆ ನಟಿಸಿ ಮಹಿಳೆಯರಿಂದ ಹಣ ಲೂಟಿ ಮಾಡಿ ಮೋಸ ಮಾಡುವ ವಂಚಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ಮೂಲ ಹೆಸರು ವಿಕಾಸ್ ಗೌತಮ್. ಫೇಸ್ ಬುಕ್ , ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ನಲ್ಲಿ ಐಪಿಎಸ್ ವಿಕಾಸ್ ಯಾದವ್ ಎಂದು ಹೆಸರನ್ನು ಬರೆದುಕೊಂಡಿದ್ದಾನೆ.
ಘಟನೆ ಹಿನ್ನೆಲೆ: ವಿಕಾಸ್ ಗೌತಮ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ವಿಕಾಸ್ ಯಾದವ್‌ಎಂದು ಹೆಸರನ್ನು ಪ್ರೊಫೈಲ್ ನಲ್ಲಿ ಹಾಕಿದ್ದಾನೆ. ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುವುದು ಹಾಗೂ ಅವರಿಂದ ಹಣ ಪಡೆದುಕೊಂಡು ವಂಚಿಸುವುದು ಈತನ ಕೆಲಸ. ಪೊಲೀಸ್ ಅಧಿಕಾರಿಯಂತೆ ನಟಿಸುವುದು ಮಾತ್ರವಲ್ಲದೆ, ಪೊಲೀಸ್ ವಾಹನದ ಮುಂದೆ ನಿಂತು ಫೋಟೋ ತೆಗೆದುಕೊಂಡ ಫೋಟೋಗಳನ್ನು ಕೂಡ ಈತ ಸೋಶಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಮಾಡುತ್ತಿದ್ದ.
ಇದನ್ನೂ ಓದಿ:ಶೋಪಿಯಾನ್ ನಲ್ಲಿ ಎನ್‌ಕೌಂಟರ್: ಪಂಡಿತ್ ಹತ್ಯೆಯಲ್ಲಿ ಭಾಗಿಯಾದವ ಸಹಿತ ಮೂವರು ಉಗ್ರರ ಹತ್ಯೆ
ಸಿಕ್ಕಿಬಿದ್ದದ್ದು ಹೇಗೆ: ಇತ್ತೀಚೆಗೆ ವಿಕಾಸ್ ದಿಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೈದ್ಯೆ ಒಬ್ಬರ ಪರಿಚಯವನ್ನು ಮಾಡಿಕೊಂಡಿದ್ದ. ಆನ್ಲೈನ್ ನಲ್ಲಿ ಚಾಟಿಂಗ್ ಮಾಡುತ್ತಾ ಇಬ್ಬರು ಆತ್ಮೀಯವಾಗಿದ್ದರು. ವಿಕಾಸ್ ಒಬ್ಬ ಪೊಲೀಸ್ ಎಂದೇ ನಂಬಿಕೊಂಡಿದ್ದ ವೈದ್ಯೆ ನಂಬಿಕೆಯಿಂದ ಆತನ ಬಳಿ ಎಲ್ಲವನ್ನು ಹಂಚಿಕೊಂಡಿದ್ದರು. ವಿಕಾಸ್ ಇದನ್ನೇ ಆಧಾರವಾಗಿಟ್ಟುಕೊಂಡು ಮಹಿಳೆಯ ಖಾತೆಯಿಂದ 25,000 ರೂ.ವನ್ನು ವಿಥ್ ಡ್ರಾ ಮಾಡಿಕೊಂಡಿದ್ದ. ಒಂದು ದಿನ ವೈದ್ಯೆಗೆ ವಿಕಾಸ್ ವಂಚಕವೆಂದು ತಿಳಿಯುತ್ತದೆ. ಕೂಡಲೇ ಆಕೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಈ ವೇಳೆ ವಿಕಾಸ್ ತನಗೆ ರಾಜಕಾರಣಿಗಳ ಪರಿಚಯವಿದೆ ಎಂದು ಬೆದರಿಕೆ ಹಾಕುತ್ತಿದ್ದ.
ಪೊಲೀಸರು ದೂರಿನ ಆಧಾರದ ಮೇಲೆ ವಿಕಾಸ್ ಗೌತಮ್ ಅಲಿಯಾಸ್ ವಿಕಾಸ್ ಯಾದವ್ ನನ್ನು ಬಂಧಿಸುತ್ತಾರೆ.
ವಿಕಾಸ್ ಗೌತಮ್ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಯಾಗಿದ್ದು, ಆರೋಪಿ 8 ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೆಲವು ಸಮಯ ವೆಲ್ಡಿಂಗ್ ಕೋರ್ಸ್ ಮಾಡಿದ್ದಾನೆ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರಿಂದರ್ ಸಿಂಗ್ ಹೇಳಿದ್ದಾರೆ.
ವಿಕಾಸ್ ಗೌತಮ್ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದ. ಆತ ಆ ಪ್ರದೇಶದಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನೋಡುತ್ತಿದ್ದ ಮತ್ತು ಅಲ್ಲಿಂದ ಐಪಿಎಸ್ ಅಧಿಕಾರಿಯಂತೆ ನಟಿಸಲು ಆರಂಭಿಸಿದ್ದ. ಇದುವರೆಗೆ ಅನೇಕ ಮಹಿಳೆಯರಿಗೆ ಈ ರೀತಿ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಹೇಲಿದ್ದಾರೆ.
ಇಷ್ಟು ಮಾತ್ರವಲ್ಲದೆ ವಿಕಾಸ್ ಒಬ್ಬ ಕ್ರಿಮಿನಲ್ ಹಿನ್ನೆಲೆವುಳ್ಳ ವ್ಯಕ್ತಿ. ಉತ್ತರ ಪ್ರದೇಶ ಮತ್ತು ಗ್ವಾಲಿಯರ್‌ನಲ್ಲಿ ವಂಚನೆ ಆರೋಪದ ಮೇಲೆ ಈತ ಜೈಲಿನಲ್ಲಿದ್ದ.