Advertisement

ಪ್ರಾಂಶುಪಾಲೆ ಹತ್ಯೆ: ವಿಫ‌ಲ ಶಿಕ್ಷಣ ವ್ಯವಸ್ಥೆ 

12:31 PM Jan 22, 2018 | Team Udayavani |

ಹರಿಯಾಣದ ಶಾಲೆಗಳು ಪದೇ ಪದೇ ಕೆಟ್ಟ ಕಾರಣಗಳಿಗಾಗಿ ಸುದ್ದಿ ಯಾಗುತ್ತಿವೆ. ಕೆಲ ಸಮಯದ ಹಿಂದೆಯಷ್ಟೇ ಗುರುಗ್ರಾಮದ ಪ್ರತಿಷ್ಠಿತ ಶಾಲೆಯೊಂದರಲ್ಲಿ 2ನೇ ತರಗತಿಯ ಬಾಲಕನನ್ನು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಇರಿದು ಕೊಂದಿರುವ ಘಟನೆಯ ನೆನಪು ಮಾಸುವ ಮೊದಲೇ ಇದೀಗ ಯಮುನಾನಗರದ ಶಾಲೆಯೊಂದರಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಸಾಯಿಸಿದ ಆಘಾತಕಾರಿ ಘಟನೆ ಸಂಭವಿಸಿದೆ. ಹರಿಯಾಣ ಎಂದಲ್ಲ ಹದಿಹರೆಯದ ಹಾಲುಗಲ್ಲದ ವಿದ್ಯಾರ್ಥಿಗಳು ಹಿಂಸಾತ್ಮಕವಾಗಿ ವರ್ತಿಸುತ್ತಿ ರುವ ಇಂತಹ ಘಟನೆಗಳು ಆಗಾಗ ವರದಿಯಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳು ಹತ್ಯೆಯಂತಹ ಭೀಕರ ಕೃತ್ಯಗಳನ್ನು ಎಸಗಲು ಹಿಂದೆ ಮುಂದೆ ನೋಡುವುದಿಲ್ಲ ಎಂದಾದರೆ ಖಂಡಿತ ಮಕ್ಕಳಿಗೆ ಅಗತ್ಯ ವಿರುವ ಸಂಸ್ಕಾರವನ್ನು ಒದಗಿಸಲು ಆಧುನಿಕ ಶಿಕ್ಷಣದಿಂದ ಸಾಧ್ಯವಾಗುತ್ತಿಲ್ಲ ಎನ್ನಬಹುದು. ಬರೀ ಅಂಕ ಮತ್ತು ಪದವಿಗಷ್ಟೇ ಪ್ರಾಮುಖ್ಯತೆ ಕೊಡುವ ಶಿಕ್ಷಣ ಮಕ್ಕಳನ್ನು ಸರ್ವಾಂಗೀಣ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ದಯನೀ ಯವಾಗಿ ವಿಫ‌ಲಗೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಹಿಂಸಾಚಾರದ ಅಂಕಿಅಂಶವನ್ನು ಕಲೆ ಹಾಕಿದಾಗ ಮಕ್ಕಳಲ್ಲಿ ಹಿಂಸಾಪ್ರವೃತ್ತಿ ಹೆಚ್ಚುತ್ತಿರುವು ಸ್ಪಷ್ಟವಾಗುತ್ತಿದೆ. 

Advertisement

ಗುರುಗ್ರಾಮದ ಶಾಲೆಯಲ್ಲಿ 16ರ ಹರೆಯದ ವಿದ್ಯಾರ್ಥಿ ಪರೀಕ್ಷೆ ಯನ್ನು ಮುಂದೂಡಬೇಕೆಂಬ ಕ್ಷುಲ್ಲಕ ಕಾರಣಕ್ಕೆ ಇನ್ನೂ ಜಗತ್ತನ್ನು ಸರಿ ಯಾಗಿ ಕಣ್ತೆರೆದು ನೋಡದ ಎಂಟ ವರ್ಷದ ಬಾಲಕನನ್ನು ಶೌಚಾಲಯ ದೊಳಗೆ ಇರಿದು ಸಾಯಿಸಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ದಿಕ್ಕುತಪ್ಪಿ ಶಾಲಾ ವ್ಯಾನಿನ ನಿರ್ವಾಹಕನನ್ನು ಬಂಧಿಸಿದ್ದೆಲ್ಲ ಬೇರೊಂದು ಕತೆ. ಯಮುನಾ ನಗರದಲ್ಲಿ ಪ್ರಾಂಶುಪಾಲೆಯನ್ನು ಸಾಯಿಸಲು ಕಾರಣ ಕೆಲ ದಿನಗಳ ಹಿಂದೆ ಅವರು ಸಹಪಾಠಿಗಳ ಎದುರೇ ವರ್ತನೆ ತಿದ್ದಿಕೊಳ್ಳುವಂತೆ ಬುದ್ಧಿ ಮಾತು ಹೇಳಿದ್ದು. ಇದನ್ನೇ ಅವಮಾನ ಎಂದು ಭಾವಿಸಿದ ವಿದ್ಯಾರ್ಥಿ ಸಾಯಿಸುವ ಮಟ್ಟಕ್ಕೆ ಹೋಗಿದ್ದಾನೆ. ಈ ಕೃತ್ಯ ಎಸಗಿದಾತ ಉದ್ಯಮಿಯೊಬ್ಬರ ಮಗ. ಅಂದೇ ಶಾಲೆಯಲ್ಲಿ ಪಾಲಕರ ಸಭೆಯೂ ಇತ್ತು ಮತ್ತು ಸಭೆಗೆ ಅವನ ಹೆತ್ತವರೂ ಬಂದಿದ್ದರೂ. ಹೆತ್ತವರು ಶಾಲೆಯಲ್ಲೇ ಇದ್ದಾರೆ ಎಂದು ಗೊತ್ತಿದ್ದೂ ಈ ಹದಿಹರೆಯದ ಯುವಕ ಮನೆಯಿಂದ ಪಿಸ್ತೂಲು ಕದ್ದು ತಂದು ಗುಂಡು ಹಾರಿಸಿದ್ದಾನೆ ಎಂದಾದರೆ ಮಕ್ಕಳಿಗೆ ಮನೆಯಲ್ಲೂ ಶಾಲೆಯಲ್ಲೂ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ ಎಂದಾಯಿತು. ಈಗಿನ ಮಕ್ಕಳು ಬೌದ್ಧಿಕವಾಗಿ ಹೆಚ್ಚು ವಿಕಸಿತಗೊಂಡಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ ಬೇಗನೇ ಪ್ರಬುದ್ಧರಾಗುತ್ತಿದ್ದಾರೆ. ಇದುವೇ ಒಂದೆಡೆಯಿಂದ ಅವರನ್ನು ಹಿಂಸಾಚಾರದಂತಹ ಕೃತ್ಯಗಳಿಗೆ ಪ್ರೇರೇಪಿಸಿ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಮಾತ್ರ ದುರದೃಷ್ಟಕರ. 

ಚಿಕ್ಕಪುಟ್ಟ ಸೋಲು ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವ ಮಾನಸಿಕ ಸಾಮರ್ಥ್ಯವೂ ಮಕ್ಕಳಲ್ಲಿ ಇಲ್ಲ. ಶಾಲೆಯ ಮೆಟ್ಟಿಲು ಹತ್ತಿದ ಕೂಡಲೇ ಗೆಲ್ಲುವುದೊಂದೇ ಗುರಿ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿರುವು ದರಿಂದ ಚಿಕ್ಕ ಪುಟ್ಟ ಸೋಲುಗಳಿಗೇ ಅವರು ಎದೆಗುಂದುತ್ತಾರೆ. ಇದರ ಪರಿಣಾಮವೇ ಪರೀಕ್ಷೆಯಲ್ಲಿ ಫೇಲಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವುದು ಅಥವ ಹಿಂಸಾತ್ಮಕ ವರ್ತನೆಯನ್ನು ರೂಢಿಸಿ ಕೊಳ್ಳುವುದು. ವಿಪರೀತ ಮುಚ್ಚಟೆಯ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಒಂದೋ ತೀರಾ ಪುಕ್ಕಲರಾಗಿರುತ್ತಾರೆ ಇಲ್ಲವೇ ಭಾರೀ ಹಠಮಾರಿ ಸ್ವಭಾವ ಹೊಂದಿರುತ್ತಾರೆ. ಮಕ್ಕಳಿಗೆ ಬದುಕನ್ನು ಬಂದಂತೆ ಎದುರಿಸುವ ಮಾನಸಿಕ ಸ್ಥೈರ್ಯವನ್ನು ತುಂಬುವಂತಹ ವಾತಾವರಣ ಈಗ ಮನೆಯಲ್ಲೂ ಶಾಲೆಯಲ್ಲೂ ಸಿಗುತ್ತಿಲ್ಲ. 

ಈಗ ವಿಶ್ವದರ್ಜೆಯ ಸೌಲಭ್ಯಗಳುಳ್ಳ ಅಂತರಾಷ್ಟ್ರೀಯ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಪೋಷಕರು ಈ ಶಾಲೆಗೆ ಮಕ್ಕಳನ್ನು ಸೇರಿಸಲು ಇನ್ನಿಲ್ಲದ ಕಷ್ಟಪಡುತ್ತಾರೆ. ಆದರೆ ಯಾರೂ ಈ ಮಾದರಿಯ ಶಾಲೆಗಳ ವಾತಾವರಣ ಹೇಗಿದೆ, ಮಗುವಿನ ಸುರಕ್ಷೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬಿ ತ್ಯಾದಿ ವಿಚಾರಗಳ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಇಂತಹ ಶಾಲೆಗಳಲ್ಲಿ ಸೀಟು ಸಿಕ್ಕಿದರೆ ಪುಣ್ಯವೆಂದು ಭಾವಿಸಿ ಕೇಳಿದಷ್ಟು ರೊಕ್ಕ ತೆತ್ತು ಮಕ್ಕಳನ್ನು ಸೇರಿಸಿ ಧನ್ಯರಾದೆವು ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. ಕನಿಷ್ಠ ತಮ್ಮ ಮಗು ಏಕೆ ಈ ಶಾಲೆಗೇ ಹೋಗಬೇಕು ಎಂಬ ಪ್ರಶ್ನೆಯನ್ನು ಯಾರೂ ಕೇಳಿಕೊಳ್ಳುವುದಿಲ್ಲ. ಇಲ್ಲಿ ಏಕೆ ಈ ಮಾತು ಬಂತೆಂದರೆ ಬಹುತೇಕ ಪ್ರತಿಷ್ಠಿತ ಎಂದು ಕರೆಸಿಕೊಳ್ಳುತ್ತಿರುವ ಶಾಲೆಗಳಲ್ಲೇ ಹತ್ಯೆ, ಅತ್ಯಾಚಾರ, ಹಲ್ಲೆಗಳಂತಹ ಕೃತ್ಯಗಳು ನಡೆದಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next