ಗುವಾಹಟಿ: ತರಗತಿಯಲ್ಲೇ ವಿದ್ಯಾರ್ಥಿಯೊಬ್ಬ ಶಿಕ್ಷಕನನ್ನು ಇರಿದು ಕೊಂದಿರುವ ಘಟನೆ ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ಶನಿವಾರ(ಜು.6ರಂದು) ನಡೆದಿದೆ.
ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಕೊಲೆಯಾದ ಶಿಕ್ಷಕ.
ರಸಾಯನಶಾಸ್ತ್ರ ವಿಷಯದ ಪಾಠವನ್ನು ಹೇಳಿಕೊಡುವ ರಾಜೇಶ್ 11ನೇ ತರಗತಿಯ 16 ವರ್ಷದ ವಿದ್ಯಾರ್ಥಿ ತನ್ನ ಪಠ್ಯ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ವಿದ್ಯಾರ್ಥಿಗೆ ಬೈಯ್ದಿದ್ದಾರೆ.
ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಪೋಷಕರನ್ನು ಕರೆದುಕೊಂಡು ಬಾ ಎಂದು ಶಿಕ್ಷಕ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿದ್ದಾರೆ. ಕೆಲ ಸಮಯದ ಬಳಿಕ ವಿದ್ಯಾರ್ಥಿ ಸಮವಸ್ತ್ರ ಬದಲಾಯಿಸಿ ತರಗತಿಗೆ ಬಂದಿದ್ದಾನೆ. ಇದರಿಂದ ಸಿಟ್ಟಾದ ಶಿಕ್ಷಕರ ರಾಜೇಶ್, ಸಿಟ್ಟಿನಲ್ಲಿ ತರಗತಿಯಿಂದ ಹೋಗು ಎಂದಿದ್ದಾರೆ. ಆದರೆ ವಿದ್ಯಾರ್ಥಿ ಏಕಾಏಕಿ ಚಾಕುವಿನಿಂದ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಶಿಕ್ಷಕರ ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.