ಅಸ್ಸಾಂ : ಚಿಕ್ಕ ಲಿಚಿ ಬೀಜವೊಂದು 16 ವರ್ಷ ವಯಸ್ಸಿನ ತರುಣೆಯನ್ನು ಬಲಿ ಪಡೆದಿರುವ ಘಟನೆ ಅಸ್ಸಾಂನ ಜೊರಹಾತ್ ಜಿಲ್ಲೆಯಲ್ಲಿ ಭಾನುವಾರ ( ಮೇ.30) ನಡೆದಿದೆ. ಪ್ರಿಯಾ ಬೊರಾ ಸಾವನ್ನಪ್ಪಿದ ದುರ್ದೈವಿ.
ಕಾಕಾಜನ್ ಸೊನಾರಿ ಗ್ರಾಮದ ನಿವಾಸಿ, 10 ನೇ ತರಗತಿ ಓದುತ್ತಿದ್ದ ಪ್ರಿಯಾ ಅವಳ ಗಂಟಲಲ್ಲಿ ಲಿಚಿ ಬೀಜ ಸಿಲುಕಿತ್ತು, ಇದರಿಂದ ಅವಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವ ಮುನ್ನವೆ ಅವಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತ ಪ್ರಿಯಾಳ ತಂದೆ ಜಿತನ್ ಬೊರಾ, ಭಾನುವಾರ ಮಾರುಕಟ್ಟೆಯಿಂದ ಲಿಚಿ ತಂದಿದ್ದೆ. ನನ್ನ ಮಗಳು ಅದರಲ್ಲಿ ಒಂದನ್ನು ಬಾಯಲ್ಲಿ ಹಾಕಿಕೊಂಡಿದ್ದಳು. ಆದರೆ,ಅದರ ಬೀಜ ಅವಳ ಗಂಟಲಿನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಅವಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಇದರಿಂದ ಗಾಬರಿಗೊಂಡ ನಾವು, ಆಕೆಯನ್ನು ಟೀಕ್ ನಲ್ಲಿರುವ ಎಫ್ ಆರ್ ಯು ಆಸ್ಪತ್ರೆಗೆ ಕರೆದುಕೊಂಡು ಹೋದೇವು. ಆದರೆ, ಮಾರ್ಗಮಧ್ಯೆದಲ್ಲೆ ನನ್ನ ಮಗಳು ಉಸಿರು ಚೆಲ್ಲಿದ್ದಳು ಎಂದು ವೈದ್ಯರು ನಮಗೆ ತಿಳಿಸಿದರು.
ಪ್ರತಿಭಾವಂತೆ :
ಇನ್ನು ಪ್ರಿಯಾಳ ಸಾವಿಗೆ ಅಕ್ಕಪಕ್ಕದ ಮನೆಯವರು ಕಂಬಿನಿ ಮಿಡಿದಿದ್ದಾರೆ. ಆಕೆ ಓದಿನಲ್ಲಿ ಪ್ರತಿಭಾವಂತೆಯಾಗಿದ್ದಳು. ಸದ್ಯ ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಆದರೆ, ವಿಧಿ ಅವಳ ಪ್ರಾಣ ಕಿತ್ತುಕೊಂಡಿತು ಎಂದು ಕಣ್ಣೀರು ಸುರಿಸಿದ್ದಾರೆ.