ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವವ್ಯಾಪಿಯಾಗಿರುವ ಕೋವಿಡ್ 19 ವೈರಸ್ ಭಾರತದಲ್ಲಿಯೂ ಕೋಲಾಹಲವನ್ನುಂಟು ಮಾಡುತ್ತಿರುವ ಈ ಸಂದರ್ಭದಲ್ಲಿ ಇದರ ವಿರುದ್ಧ ಹೋರಾಡಲು ದೇಶದ ಜನರ ಸಂಪೂರ್ಣ ಸಹಕಾರವನ್ನು ಕೋರುವ ಮೂಲಕ ಈ ಪಿಡುಗನ್ನು ಎದುರಿಸಲು ‘ಸಂಕಲ್ಪ’ ಮತ್ತು ‘ಸಂಯಮ’ಗಳೆಂಬ ಮೂಲಮಂತ್ರವನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಜನರು ತಮ್ಮನ್ನು ತಾವು ಪ್ರತ್ಯೇಕವಾಗಿರಿಸಿಕೊಳ್ಳುವ ಪ್ರಥಮ ಹಂತವಾಗಿ ಇದೇ ಮಾರ್ಚ್ 22ರ ರವಿವಾರದಂದು ದೇಶಾದ್ಯಂತ ‘ಜನತಾ ಕರ್ಫ್ಯೂ’ ವಿಧಿಸಲಾಗಿದೆ ಎಂದು ಪ್ರಧಾನಿ ಮೋದಿ ಅವರು ಇಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಮತ್ತು ಈ ದಿನದಂದು ಸಾಯಂಕಾಲ 5 ಗಂಟೆಗೆ ಸರಿಯಾಗಿ ಜನರು ತಮ್ಮ ಮನೆಗಳಲ್ಲಿಯೇ 5 ನಿಮಿಷ ನಿಂತು ಚಪ್ಪಾಳೆ ತಟ್ಟುವ ಮೂಲಕ, ಶಿಳ್ಳೆಗಳನ್ನು ಹಾಕುವ ಮೂಲಕ ಅಥವಾ ಸಂಗೀತ ಉಪಕರಣಗಳನ್ನು ಬಾರಿಸುವ ಮೂಲಕ ಈ ಕೋವಿಡ್ 19 ವೈರಸ್ ವಿರುದ್ಧ ಹಗಲು ರಾತ್ರಿ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಪಾಲನಾ ಸಿಬ್ಬಂದಿಗಳು, ಔಷಧಾಲಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು ಹೀಗೆ ಈ ಮಹಾಮಾರಿಯ ವಿರುದ್ಧ ಅಘೋಷಿತ ಸಮರ ಸಾರಿರುವ ವ್ಯಕ್ತಿಗಳಿಗೆ ಗೌರವದ ಅಭಿನಂದನೆ ಸಲ್ಲಿಸಬೇಕು ಎಂದು ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ಸರಕಾರಿ ನೌಕರರು, ಆರೋಗ್ಯ ಪಾಲನಾ ಸಿಬ್ಬಂದಿಗಳು ಸೇರಿದಂತೆ ತುರ್ತು ಸೇವೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಹೊರತುಪಡಿಸಿ ಉಳಿದವರೆಲ್ಲಾ ಆದಷ್ಟು ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಪ್ರಧಾನಿಯವರು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮತ್ತು ದೇಶಾದ್ಯಂತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂಬ ಭರವಸೆಯನ್ನು ಮೋದಿ ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ನಮ್ಮ ಜೀವವನ್ನು ಕಾಪಾಡಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಿರುವ ‘ಮೆಡಿಕಲ್ ಯೋಧ’ರು ಇವರೆಲ್ಲಾ…