ಬೆಂಗಳೂರು: ಮುಂದಿನ ವರ್ಷದ ಸಂಕ್ರಾಂತಿಯೊಳಗೆ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ. 60ರಷ್ಟು ಬರಹಗಳು ಕನ್ನಡದಲ್ಲಿಯೇ ಇರಬೇಕು ಎಂಬುದರ ಸಹಿತ 3 ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಚಳವಳಿ ನಡೆಸುವಂತೆ ಕರವೇ ಕಾರ್ಯಕರ್ತರಲ್ಲಿ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿವೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಮಾನ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ. 60ರಷ್ಟು ಬರಹಗಳು ಕನ್ನಡದಲ್ಲಿಯೇ ಇರಬೇಕು. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು, ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬೆಲ್ಲ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಜತೆಗೆ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್‌ಗಳು, ಫೈನಾನ್ಸ್‌ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ. 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ ಇಲ್ಲವೇ ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
ಹಳ್ಳಿಯಿಂದ ರಾಜಧಾನಿವರೆಗೆ ಚಳವಳಿ
ಈ 3 ಹಕ್ಕೊತ್ತಾಯಗಳ ಈಡೇರಿಕೆಗಾಗಿ ಗ್ರಾಮಮಟ್ಟದಿಂದ ರಾಜಧಾನಿಯವರೆಗೆ ದೊಡ್ಡ ಮಟ್ಟದ ಚಳವಳಿ ಹಮ್ಮಿಕೊಳ್ಳಲು ಕಾರ್ಯಕರ್ತರಿಗೆ ಕರೆ ನೀಡುತ್ತೇನೆ ಎಂದು ನಾರಾಯಣಗೌಡ ತಿಳಿಸಿದ್ದಾರೆ. ಕನ್ನಡದ ಸಮಸ್ತ ಜನತೆ ಈ ಚಳವಳಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ. ಈ ಹಕ್ಕೊತ್ತಾಯಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಸೂಕ್ತ ಕಾಯ್ದೆ ರೂಪಿಸಬೇಕು. ಶಾಸನಬದ್ಧವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸೋಣ. ಜತೆಗೆ ಮುಂದಿನ ಮಕರ ಸಂಕ್ರಾಂತಿಯೊಳಗೆ ಈ ಹಕ್ಕೊತ್ತಾಯಗಳು ಈಡೇರುವಂತೆ ನೋಡಿಕೊಳ್ಳೋಣ ಎಂದಿದ್ದಾರೆ.