ಮಕ್ಕಳಿಗೆ ಶಿಸ್ತನ್ನು ಕಲಿಸುವುದು ಹೇಗೆ ಎಂಬುದು ಎಲ್ಲ ಮನೆಗಳಲ್ಲಿ ಸಾಮಾನ್ಯ ವಾದ ಒಂದು ಪ್ರಶ್ನೆ.
ಮಕ್ಕಳಿರಲಿ, ಯಾರೇ ಇರಲಿ; ಕೆಲವು ಕೆಲಸಗಳನ್ನು ನಾವು ಹೇಳಿ ಮಾಡಿಸ ಬಹುದು. ಒತ್ತಾಯಪೂರ್ವಕವಾಗಿ ಮಾಡಿಸಬಹುದು.
ಆದರೆ ಕಲಿಕೆಯನ್ನು ಹಾಗೆ ಮಾಡಲು ಬರುವುದಿಲ್ಲ. ಅದೂ ಅಲ್ಲದೆ, ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುವುದು ದೀರ್ಘ ಕಾಲ ಬಾಳು ವಂಥದ್ದಲ್ಲ. ದೀರ್ಘಕಾಲ ಒತ್ತಡ ಹೇರು ತ್ತಿದ್ದರೆ ನಮ್ಮ ಬದುಕು, ಅವರ ಬದುಕು – ಎರಡೂ ಸರ್ವನಾಶ ವಾಗುತ್ತದೆ. ನಮ್ಮ ಜೀವನ ಒತ್ತಡ ಹೇರು ವುದರಲ್ಲಿ ಕಳೆದು ಹೋದರೆ, ಅವರ ಬದುಕು ಅದರಿಂದ ತಪ್ಪಿಸಿಕೊಳ್ಳುವುದರಲ್ಲಿ ಮುಗಿಯುತ್ತದೆ.
ಮನೆಗಳಲ್ಲಿ ಮಕ್ಕಳ ವಿಚಾರವೂ ಹೀಗೆಯೇ. ಯಾವುದೇ ವಿಚಾರವನ್ನು ನಾವು ಮಕ್ಕಳಿಗೆ ಒತ್ತಾಯ ಪೂರ್ವಕ ಹೇರಿ ಕಲಿಸಲು ಸಾಧ್ಯವಿಲ್ಲ. ಶಿಸ್ತು ಒಂದು ಸಂಸ್ಕೃತಿಯಾಗಿ ಅವರಲ್ಲಿ ಮೂಡಬೇಕು. ಮನೆಯಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನವನ್ನು ಎಲ್ಲರೂ ಜತೆಗೂಡಿ ಸೇವಿಸುವುದು ಅಂತಹ ಒಂದು ಸಂಸ್ಕೃತಿ. ಊಟದ ಹೊತ್ತಿಗೆ ಮನೆಯ ಸದಸ್ಯರಲ್ಲಿ ಯಾರಾದ ರೊಬ್ಬರು ಬರುವುದು ತಡವಾದರೆ ಇಡೀ ಕುಟುಂಬ ಅವರಿಗಾಗಿ ಕಾಯುತ್ತದೆ. ಇಡೀ ಕುಟುಂಬ ಜತೆಗೂಡುವುದು, ಎಲ್ಲರೂ ಜತೆಯಾಗಿ ಊಟ ಮಾಡು ವುದು, ತಾನು ಉಂಡ ಬಟ್ಟಲನ್ನು ತಾನೇ ತೊಳೆಯುವುದು, ಅನ್ನವನ್ನು ವ್ಯರ್ಥ ಮಾಡದಿರುವುದು, ಸರಿಯಾಗಿ ಉಣ್ಣುವ ಕ್ರಮ – ಹೀಗೆ ಹಲವು ಬಗೆಯ ಶಿಸ್ತುಗಳು ಒಂದು ಸಂಸ್ಕೃತಿಯಾಗಿ ಆ ಊಟದ ಸಮಯದಲ್ಲಿ ಆ ಮನೆಯ ಮಕ್ಕಳಲ್ಲಿ ರಕ್ತಗತವಾಗುತ್ತ ಹೋಗುತ್ತದೆ. ಇದ್ಯಾ ವುದೂ ಒತ್ತಡದಿಂದಾಗುವ ಕಲಿಕೆಯಲ್ಲ, ಯಾರೂ ಹೇಳಿ ಮೂಡಿಸುವ ಶಿಸ್ತು ಅಲ್ಲ. ತಾನಾಗಿ ಮೈ ಮತ್ತು ಮನಸ್ಸಿಗೆ ಸೇರಿಕೊಳ್ಳುವಂಥದ್ದು.
ಇವೆಲ್ಲ ಯಾವುದೇ ಒಂದು ಕೆಲಸ ವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾಡುವುದಕ್ಕೆ ಸಂಬಂಧಿಸಿದ ವಿಚಾರ ಗಳು. ಅದನ್ನು ಹಾಗೆಯೇ ಮಾಡಬೇಕು ಎಂಬ ಮನಸ್ಸು ಬರಬೇಕಾದರೆ ಸುತ್ತ ಮುತ್ತ ಶುಭ್ರವಾದ ಪೂರಕ ವಾತಾವರಣ ಇರಬೇಕು. ಪರಿಸರವನ್ನು ಶುಚಿಯಾಗಿ ಇರಿಸುವುದಕ್ಕೆ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಮನೆಯ ಎಲ್ಲರೂ ಉಂಡ ಬಟ್ಟಲುಗಳು ಸಿಂಕಿನಲ್ಲಿ ರಾಶಿ ಬಿದ್ದರೆ ಒಬ್ಬರು – ಪ್ರಾಯಃ ಅಮ್ಮ – ಅದನ್ನು ಮಾಡಬೇಕಾಗುತ್ತದೆ. ಅದರ ಬದಲು ಎಲ್ಲರೂ ಅವರವರ ತಟ್ಟೆ ಬಟ್ಟಲು ತೊಳೆದರೆ ಒಬ್ಬರ ಮೇಲೆ ಹೊರೆ ಬೀಳುವುದಿಲ್ಲ. ಈ ಕೆಲಸ ಹಂಚಿಕೊಳ್ಳುವ ಸಂಸ್ಕೃತಿ ಮಕ್ಕಳಲ್ಲೂ ಮೈಗೂಡುತ್ತದೆ.
ಗುಡಿಸಿ – ಒರೆಸು ವುದೂ ಹಾಗೆಯೇ. ಮನೆಯಲ್ಲಿ ಅಮ್ಮ ಮನೆ ಗುಡಿಸಿ, ಒರೆಸಿಯೇ ಉಪಾಹಾರ ಅಥವಾ ಊಟ ಮಾಡುತ್ತಾರೆ ಎಂದಾದರೆ ಎಲ್ಲರೂ ಅದಕ್ಕೆ ಕೈಜೋಡಿ ಸುತ್ತಾರೆ. ಆಗ ಮಕ್ಕಳೂ ಆ ಶಿಸ್ತನ್ನು ಕಲಿಯುತ್ತಾರೆ.
ಶಿಸ್ತನ್ನು ಮಕ್ಕಳಿಗೆ ಕಲಿಸುವುದು ಎಂದರೆ ಕ್ರಿಯೆಗಳ ಮೂಲಕ ಅರ್ಥ ಮಾಡಿಸುತ್ತ ಹೋಗುವುದು. ಮಕ್ಕಳು ಬಹಳ ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಇಡೀ ಮನೆ ಹೀಗೆ ಶಿಸ್ತುಬದ್ಧವಾಗಿ, ಸುಸಂಸ್ಕೃತವಾಗಿ ಇದ್ದರೆ ಅದು ತಾನಾಗಿ ಅವರಲ್ಲಿ ಮೈಗೂಡುತ್ತ ಹೋಗುತ್ತದೆ.
ಸಣ್ಣ ಸಣ್ಣ ಸಂಗತಿಗಳು ಕೂಡ ಬಹಳ ಮುಖ್ಯ. ಬೆಳಗ್ಗೆ ಎದ್ದು ಹಾಸಿಗೆ, ಬೆಡ್‌ಶೀಟ್‌ಗಳನ್ನು ಚೊಕ್ಕಟವಾಗಿ ಮಡಚಿ ಇರಿಸುವುದು, ಕುಡಿದ ಕಾಫಿ ಕಪ್ಪನ್ನು ಆ ಕೂಡಲೇ ತೊಳೆದು ಬೋರಲು ಹಾಕಿ ಡುವುದು- ಪ್ರತಿಯೊಂದರಲ್ಲೂ ನಮ್ಮನ್ನು ನಾವು ಮಾದರಿಯಾಗಿ ಇರಿಸಿ ಕೊಳ್ಳ ಬೇಕು. ಅದು ಮಕ್ಕಳು ನಮ್ಮನ್ನು ಅನು ಸರಿಸುವಂತೆ ಪ್ರೇರೇಪಿಸುತ್ತದೆ.
ನಾಗರಿಕತೆಯು ಪುಸ್ತಕ, ಕಾನೂನು, ಏಟು, ಉಪನ್ಯಾಸಕಾರರಿಂದ ವಿಕಾಸ ಗೊಂಡದ್ದು ಅಲ್ಲ. ಕುಟುಂಬಗಳು ಹೇಗೆ ಬದುಕುತ್ತವೆ ಅನ್ನುವುದೇ ನಾಗರಿಕತೆ. ಊಟದ ಮೇಜಿನಿಂದ ತೊಡಗಿ ಬಚ್ಚಲು ಮನೆಯ ವರೆಗೆ ಮನೆಯೊಳಗೆ ಪ್ರತೀ ಇಂಚು ಅವಕಾಶದಲ್ಲಿ ನಮ್ಮ ಬದುಕು ಹೇಗಿರುತ್ತದೆ ಎಂಬುದನ್ನು ಗಮನಿಸುತ್ತ ಮಕ್ಕಳು ಕಲಿಯುತ್ತಾರೆ. ನಾವು ಎಷ್ಟು ನಾಗರಿಕರಾಗಿರುತ್ತೇವೆಯೋ ಆ ಮಟ್ಟದ ನಾಗರಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಾರೆ.
– (ಸಾರ ಸಂಗ್ರಹ)