ಶಿರಸಿ: ನಗರ ಸ್ವಚ್ಛತೆಗೆ ಪೌರ ಕಾರ್ಮಿಕರು ಬೇಕು. ಮಳೆ ಇರಲಿ, ಚಳಿ ಇರಲಿ ಎಂದಿನ ಕಾಯಕ ಮಾಡದೇ ಹೋದರೆ, ಒಂದು ಪ್ರದೇಶದ ಕಸ ಒಂದು ದಿನ ತೆಗೆಯದೇ ಹೋದರೂ ಬವಣೆ ಅನುಭವಿಸಿದರಿಗೇ ಗೊತ್ತು.
ಇಂಥ ಬಡ ಕಾರ್ಮಿಕರಿಗೆ ಸೂರಿನ ಕೊರತೆಯೂ ಇತ್ತು. ನಮ್ಮ ಮನೆ ಮುಂದಿನ ಸೂರಿನ ಎದುರು ಕಸ ತೆಗೆಯುವ ಕಾರ್ಮಿಕರಿಗೆ ಮನೆ ಇರಲಿಲ್ಲ. ಅವರದ್ದೇ ಆದ ಜೋಪಡಿಗೆ ಕಷ್ಟವಿತ್ತು.
ಈಗ ಅವರಿಗೆ ಸಮುಚ್ಛಯ ಮಾದರಿ ಸೂರು ಬಹುತೇಕ ಸಿದ್ಧವಾಗಿದೆ. ನಗರದ ಮರಾಠಿಕೊಪ್ಪದಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಆರು ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಸಾಮಾನ್ಯವಾಗಿ ಶಹರಗಳಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತದೆ. ಹಾಗೇ ನೆಲಮಹಡಿ ಹಾಗೂ ಎರಡು ಅಂತಸ್ತಿನ ಮನೆಗಳ ಸಮುಚ್ಛಯ ನಿರ್ಮಿಸಿ ಪೌರಕಾರ್ಮಿಕರಿಗೆ ಒದಗಿಸಲಾಗುತ್ತಿದೆ. ಸರಕಾರದ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರು ಒಂದೇ ಕಟ್ಟಡದಲ್ಲಿ ಸ್ವಂತ ಮನೆ ಹೊಂದಲಿದ್ದಾರೆ. ಇದಕ್ಕಾಗಿ 45ಲಕ್ಷ ರೂ.ವೆಚ್ಚದ ಕಾಮಗಾರಿ ಬಹುತೇಕ ಮುಗಿದಿದೆ. ಇನ್ನು ನೆಲಕ್ಕೆ ಟೈಲ್ಸ್ ಹಾಗೂ ಬಣ್ಣ ಮಾಡುವುದು ಬಾಕಿ ಇದೆ. ಅದೂ ಕನ್ನಡ ರಾಜ್ಯೋತ್ಸವ ವೇಳೆಗೆ ಪೂರ್ಣವಾಗುವ ವಿಶ್ವಾಸವಿದೆ.
ಆರೋಗ್ಯಪೂರ್ಣ ಶಹರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರು ನಗರದಲ್ಲಿ ನಿತ್ಯ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ತೊಡಗಿರುತ್ತಾರೆ. ಶ್ರಮ ಜೀವಿಗಳಾಗಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸರಕಾರದ ಗೃಹಭಾಗ್ಯ ಯೋಜನೆಯಡಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.
ಕಳೆದೆರಡು ವರ್ಷಗಳ ಹಿಂದೆಯೇ ಸಮುಚ್ಛಯ ಮಾದರಿ ಮನೆಗಳ ನಿರ್ಮಾಣ ಯೋಜನೆ ಸಿದ್ಧವಾಗಿತ್ತು. ಟೆಂಡರ್ ಪ್ರಕ್ರಿಯೆ ಕಾಮಗಾರಿ ನಡೆದು ಇದೀಗ ಕಟ್ಟಡ ತಲೆಯೆತ್ತಿದೆ. ನೆಲಮಹಡಿ ಹಾಗೂ ಎರಡು ಅಂತಸ್ತಿನ ಕಟ್ಟಡದಲ್ಲಿ ತಲಾ ಎರಡೆರಡು ಮನೆಗಳಿವೆ.