Advertisement

ನೀರಿಗಾಗಿ ನಾಗರಿಕರ ಪರದಾಟ

01:10 PM May 06, 2017 | Team Udayavani |

ಹರಿಹರ: ಕಳೆದ ಮೂರು ತಿಂಗಳಿನಿಂದ ಕುಡಿಯಲು ನೀರಿಲ್ಲದೇ ನಾಗರಿಕರು ಪರದಾಡುತ್ತಿದ್ದರೂ ಸಮಸ್ಯೆಗೆ ಸ್ಪಂದಿಸದ, ಕಾಳಜಿಯಿಲ್ಲದ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ ಎಂದು ನಗರದ ಮಹಾಲಿಂಗಪ್ಪ ಬಡಾವಣೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಶುಕ್ರವಾರ ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಳೆದ ಮೂರು ತಿಂಗಳಿಂದಲೂ ಈ ಬಡಾವಣೆ ಹಾಗೂ ಪಕ್ಕದ ಪೊಲೀಸ್‌ ಬಡಾವಣೆ ಅಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.

ಆರಂಭದಲ್ಲಿ ಟ್ಯಾಂಕರ್‌ ಮೂಲಕ ಅಪರೂಪಕ್ಕೆ ನೀರು ಸರಬರಾಜು ಮಾಡಿದ ಅಧಿಕಾರಿಗಳು ಕಳೆದೆರಡು ತಿಂಗಳಿಂದ ಅದನ್ನೂ ನಿಲ್ಲಿಸಿದ್ದಾರೆ. ಒಂದೊಂದು ಕೊಡ ನೀರಿಗೂ ಜನರು ಪರದಾಡುತ್ತಿದ್ದಾರೆ. ಕೆಲಸ ಕಾರ್ಯಗಳನ್ನು ಬಿಟ್ಟು ನೀರು ಸಂಗ್ರಹಿಸುವುದರಲ್ಲೇ ಸಮಯ ಪೋಲಾಗುತ್ತಿದೆ.

ಹಲವು ಕಿ.ಮೀ ದೂರದ ಹಳೆ ವಾಟರ್‌ ಸಪ್ಲೆ ಕೇಂದ್ರ ಮತ್ತಿತರೆಡೆಗಳಿಂದ ಕೊಡದಲ್ಲಿ ತುಂಬಿಕೊಂಡ ತರಬೇಕಾಗಿದೆ. ಸ್ನಾನ, ಬಟ್ಟೆ ಒಗೆಯುವುದು ಮುಂತಾದ ನಿತ್ಯದ ಕೆಲಸ ಕಾಯಕಗಳಿಗೂ ನೀರಿಲ್ಲದಂತಾಗಿ ಸಂಕಷ್ಟ ಎದುರಿಸಬೇಕಾಗಿದೆ. ನಗರಸಭೆಯ ವಾರ್ಡ್‌ ಸದಸ್ಯರು, ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು. 

ನದಿಯು ಕಳೆದ ಹಲವು ವರ್ಷಗಳಿಂದ ಒಣಗುತ್ತಿದೆ. ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ತಾಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಅನುದಾನ ತಂದು ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದು, ಇದನ್ನೂ ಸಹ ಮಾಡದ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು. 

Advertisement

ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡದ್ದರಿಂದ ಈ ಸಾಲಿನ ನೀರಿನ ಕಂದಾಯವನ್ನು ಮನ್ನಾ ಮಾಡಬೇಕು. ಈ ಕುರಿತು ನಗರಸಭಾ ಸರ್ವ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ವಿಷಯ ಮಂಡಿಸಿ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿಸಿದರು. 

ಪ್ರತಿಭಟನಾಕಾರರ ಮನವೊಲಿಸಿದ ಅಧಿಕಾರಿಗಳು, ಮನವಿ ಸ್ವೀಕರಿಸಿ ಮಹಾಲಿಂಗಪ್ಪ ಬಡಾವಣೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಕೊಳವೆ ಬಾವಿಯು ಬತ್ತಿದೆ. ನಗರಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಭೆ ಇದೆ. ಆ ಸಭೆ ಮುಗಿದ ನಂತರ ಸಭೆಯಲ್ಲಿ ವಿಷಯ ಮಂಡಿಸಿ ಇಲ್ಲಿ ಕೊಳವೆ ಬಾವಿ ಕೊರೆಸಲು ಕ್ರಮಕೈಗೊಳ್ಳುತ್ತೇವೆ. ಅಲ್ಲಿವರೆಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದರು. 

ನಗರಸಭೆ ಎಇಇ ಬಿ.ಎಸ್‌ .ಪಾಟೀಲ್‌, ಎಇ ಮಹಾಂತೇಶ್‌, ನಿವಾಸಿಗಳಾದ ನ್ಯಾಯವಾದಿ ಅಬ್ದುಲ್‌ ರಹೀಂ, ಪರ್ವೇಜ್‌ ಅಹ್ಮದ್‌, ಕಮಲಮ್ಮ, ಅಬ್ದುಲ್‌ ನವಾಬ್‌, ರಹಮಾನ್‌ ಬಾಷಾ, ಶಮೀರ್‌ ಬಾನು, ರಹಮಾನ್‌ ಸಾಬ್‌, ಚಂದ್ರಮ್ಮ, ನಾಗಮ್ಮ, ಕೌಶಲ್ಯ, ನಿರ್ಮಲ, ಗೌರಮ್ಮ, ಶಷ್ಮೇರ್‌, ನೇತ್ರಾವತಿ, ಅನಸೂಯಮ್ಮ, ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next