ಬೆಂಗಳೂರು: ಜನಸಾಮಾನ್ಯರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂಬುದು ಸೇರಿದಂತೆ ಭ್ರಷ್ಟಾಚಾರ ಮುಕ್ತ ಆಡಳಿತ, ಉದ್ಯೋಗ ಖಾತ್ರಿ, ಕೃಷಿ ಸ್ವಾವಲಂಬನೆ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮೊದಲಾದ ಅಂಶಗಳನ್ನು ಪ್ರಸ್ತಾಪಿಸಿರುವ ನಾಗಕರಿಕ ಸಮಾಜ ವೇದಿಕೆಯ ಪ್ರಣಾಳಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಿಡುಗಡೆ ಮಾಡಿದರು.
ಮಂಗಳವಾರ ನಗರದ ಎಸ್‌ಸಿಎಂ ಹೌಸ್‌ನಲ್ಲಿ ಸಿವಿಲ್ ಸೊಸೈಟಿ ಫೋರಂ ವತಿಯಿಂದ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಅಂಗವಾಗಿ ಜನರ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಣದ ಆದ್ಯತೆ, ಗ್ರಾಮೀಣ ಹಾಗೂ ನಗರ ಆಡಳಿತ ವಿಕೇಂದ್ರೀಕರಣ, ಬಲಿಷ್ಠ ಲೋಕಪಾಲ್ ಹಾಗೂ ಲೋಕಯುಕ್ತ ರಚನೆ ಮಾಡಬೇಕು. ಚುನಾವಣಾ ಸುಧಾರಣೆ ತರಬೇಕು, ಕೃಷಿ ಆದ್ಯತೆಯ ವಲಯ ಆಗಬೇಕು, ವಲಸೆ ನಿಲ್ಲಿಸಲು ಕ್ರಮ ಆಗಬೇಕು ಮತ್ತು ಭೂ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬದನ್ನು ಸಮಗ್ರವಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಭವಿಷ್ಯದ ನೆಮ್ಮದಿಯ ಬದುಕಿಗೆ ಬೇಕಾದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದ ವಿಷಯಗಳು ಲೋಕಸಭಾ ಚುನಾವಣೆಯ ಪ್ರಮುಖ ವಿಷಯಗಳಾಗಬೇಕು. ಮನುಷ್ಯ ಗೌರವಯುತವಾಗಿ ಜೀವಿಸಲು ಅಗತ್ಯವಾದ ಶಿಕ್ಷಣ, ಉದ್ಯೋಗ, ಆರೋಗ್ಯ, ಆಹಾರ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳು ಪ್ರಮುಖ ವಿಷಯವಾಗಿ ಚರ್ಚೆಯಾಗಬೇಕಿದೆ ಎಂದರು. ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಮಾತನಾಡಿದರು.