ಮುಂಬಯಿ: ಸಂಘದ ಬೆಳವಣಿಗೆಯಲ್ಲಿ ಬಂಟರ ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಕೊಡುಗೆ ಅಪಾರವಾಗಿದೆ. ಪ್ರಾದೇಶಿಕ ಸಮಿತಿಗಳಿಂದ ಸಮಾಜ ಬಾಂಧವರು ಒಂದೆಡೆ ಸೇರಿ ತಮ್ಮ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆದಿರುವುದು ನಿಜವಾಗಿಯೂ ಅಭಿನಂದನೀಯ. ಇಂದಿನ ಯಾಂತ್ರಿಕ ಜೀವನದಲ್ಲಿ ಮಕ್ಕಳು ಹಳ್ಳಿ ಜೀವನದ ಪದಾರ್ಥಗಳನ್ನು ತ್ಯಜಿಸಿ ವಿಲಾಸಿ ಜೀವನದ ತಿಂಡಿ-ತಿನಸುಗಳತ್ತು ಮಾರು ಹೋಗುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಇಂದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದು ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜು. 29 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಸಂಘದ ಸಿಟಿ ಪ್ರಾದೇಶಿಕ ಸಮಿತಿಯಿಂದ ಆಯೋಜಿಸಲಾಗಿದ್ದ ಆಟಿ ತಿಂಗೊಲ್ದ ಗೌಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಾವು ಮೂಲನಂಬಿಕೆಯಿಂದ ಜೀವನ ಸಾಗಿಸಬೇಕೇ ಹೊರತು ಮೂಢನಂಬಿಕೆಯಿಂದ ಅಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ- ವಿಚಾರಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವಪೂರ್ಣದ್ದಾಗಿದೆ ಎಂದರು.
ಉದ್ಯಮಿ ರಾಘು ಪಿ. ಶೆಟ್ಟಿ ಮಾತನಾಡಿ, ಹಿಂದೆ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಔಷಧಿಯ ಗುಣವುಳ್ಳ ತಿಂಡಿ- ತಿನಸುಗಳನ್ನು, ಖಾದ್ಯ ಪದಾರ್ಥಗಳನ್ನು ಮಾಡಿ ಉಣಬಡಿಸುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಇವೆಲ್ಲವು ಕಾಣಸಿಗುವುದಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ವಿಭಾಗದವರು ಆಯೋಜಿಸಿದ ಈ ಕಾರ್ಯಕ್ರಮವು ಅಭಿನಂದನೀಯವಾಗಿದೆ ಎಂದು ನುಡಿದರು.
ಬಂಟರವಾಣಿಯ ಗೌರವ ಸಂಪಾದಕ ಅಶೋ ಕ್ ಪಕ್ಕಳ ಅವರು ಮಾತನಾಡಿ, ಆಟಿ ತಿಂಗಳು ಎಂದರೆ ಮಳೆಗಾಲದ ಕಷ್ಟದ ತಿಂಗಳು ಎಂಬ ಮಾತೊಂದಿತ್ತು. ಆದರೆ ಇಂದಿನ ಕಾಲದಲ್ಲಿ ಅದು ಬದಲಾಗಿದೆ. ಮುಂಬಯಿಯಲ್ಲಿ ಮಾಡುವ ಆಟಿಡೊಂಜಿ ಕಾರ್ಯಕ್ರಮಗಳು ಭಿನ್ನತೆಯಿಂದ ಕೂಡಿದ್ದು, ನಾವು ನಮ್ಮ ಮಕ್ಕಳೊಂದಿಗೆ ತುಳು ಭಾಷೆಯೊಂದಿಗೆ ವ್ಯವಹರಿಸಿದಾಗ ಭಾಷೆ ಯೊಂದಿಗೆ ಸಂಸ್ಕೃತಿ, ಆಚಾರ, ವಿಚಾರಗಳು ಉಳಿಯಲು ಸಾಧ್ಯವಿದೆ ಎಂದರು.
ಬಂಟರ ಸಂಘ ಪಶ್ಚಿಮ ವಿಭಾಗದ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬಿ., ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನಿತಾ ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿ ಯಮುನಾ ಶೆಟ್ಟಿ, ಸದಸ್ಯೆ ಪ್ರಮೀಳಾ ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಶೆಟ್ಟಿ ಪಾಂಗಾಳ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಸುಚಿತಾ ಶೆಟ್ಟಿ ವಂದಿಸಿದರು. ಸಮಿತಿ ಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯು ವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಂಟರ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು ಉಪಸ್ಥಿತರಿದ್ದರು.
ಆಟಿ ತಿಂಗಳ ವಿಶೇಷತೆಯನ್ನು ಸಾರುವ ಉಪೆìಲ್ ಅರಿತ ನುಪ್ಪು, ಬಂಗುಡೆ ಗಸಿ, ಇಡ್ಲಿ, ಪುಂಡಿ, ಬನ್ಸ್, ತಾರಯಿದ ಚಟ್ನಿ, ಸಾಂಬಾರ್, ಗುಂಡಪ್ಪ, ಗೆಂಡದೆಡ್ಡೆ, ಪತ್ರೊಡೆ, ನೀರ್‌ದೋಸೆ, ಸೇಮಯಿದಡ್ಡೆ, ಉಪ್ಪಡಚ್ಚಿರ್, ಕಪ್ಪರೊಟ್ಟಿ, ಚಕ್ಕುಲಿ, ಕೋರಿ ಗಸಿ, ಎಟ್ಟಿ ಸುಕ್ಕ, ಪದೆಂಗಿ ಪಾಯಸ, ಜಿಲೇಬಿ ಇನ್ನಿತರ ಖಾದ್ಯಗಳನ್ನು ಪ್ರದರ್ಶಿಸಲಾಯಿತು.