ಗಂಗಾವತಿ : ಮೂಲಸೌಕರ್ಯಗಳ ಕೊರತೆ ಮತ್ತು ಆಸ್ಪತ್ರೆಯನ್ನು ನವೀಕರಣ ಮಾಡದ ಕಾರಣ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯನ್ನು ಜಿಲ್ಲಾಡಳಿತ ಸೀಜ್ ಮಾಡಿದೆ.
ವಲಯದ ಬಹುತೇಕ ರೋಗಿಗಳ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯನ್ನು ನೀಡಿದ ಹೆಸರಿನಲ್ಲಿ ಪ್ರವೀಣ್ ಎನ್ನುವ ವೈದ್ಯರ ಹೆಸರಿದ್ದು ಇವರು ಸರ್ಕಾರಿ ವೈದ್ಯರಾಗಿರುವ ಕಾರಣ ಮತ್ತು ಸಿಟಿ ಆಸ್ಪತ್ರೆಯಲ್ಲಿ ಸರಕಾರದ ನಿಯಮಾವಳಿ ಪ್ರಕಾರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ಈಗಾಗಲೇ ಮೂಲ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ ಸಿಟಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರು ಮತ್ತು ಜುಲೈ 2021ಕ್ಕೆ ಆಸ್ಪತ್ರೆಯ ನವೀಕರಣ ಮುಗಿದಿದ್ದು ನವೀಕರಣ ಇಲ್ಲದೆ ಆಸ್ಪತ್ರೆಯನ್ನ ನಡೆಸಲಾಗುತ್ತಿತ್ತು ಆನ್ ಲೈನ್ ಮೂಲಕ ನವೀಕರಣಕ್ಕಾಗಿ ಆಸ್ಪತ್ರೆಯವರು ಅರ್ಜಿ ಸಲ್ಲಿಸಿದ್ದು ಜಿಲ್ಲಾಡಳಿತ ಈ ಆಸ್ಪತ್ರೆಯನ್ನು ಶಾಶ್ವತವಾಗಿ ಮುಚ್ಚುವಂತೆ ತಾಲೂಕು ಆಡಳಿತಕ್ಕೆ ಮತ್ತು ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿಗೆ ನೋಟಿಸ್ ನೀಡಿತ್ತು .
ಸೋಮವಾರ ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ರಾಘವೇಂದ್ರ ತಹಸೀಲ್ದಾರ್ ಯು. ನಾಗರಾಜ ನೇತೃತ್ವದಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಗೆ ಬೀಗ ಹಾಕಿ ಸೀಲ್ ಮಾಡಿದ್ದಾರೆ.
ಇದನ್ನೂ ಓದಿ :ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರ ವಿರೋಧ
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಘವೇಂದ್ರ ಉದಯವಾಣಿ ಜತೆ ಮಾತನಾಡಿ ಜಿಲ್ಲಾಡಳಿತದ ಸೂಚನೆ ಮೇರೆಗೆ ನವೀಕರಣ ಮಾಡದೇ ಇರುವ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾದ ಕಾರಣ ಸಿಟಿ ಆಸ್ಪತ್ರೆಯನ್ನು ಬೀಗ ಹಾಕಿ ಸೀಲ್ ಮಾಡಲಾಗಿದೆ. ಇಲ್ಲಿದ್ದ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆಗೆ ಬೀಗ ಹಾಕಿದ ಬಗೆ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.