Advertisement

ನಗರದ ಕಸ ನಗರದಲ್ಲೇ ವಿಲೇವಾರಿ!

04:22 PM May 12, 2019 | Team Udayavani |

ಹಾವೇರಿ: ಕಸ ವಿಲೇವಾರಿಗೆ ನಿಗದಿತ ಪ್ರತ್ಯೇಕ ಸ್ಥಳವಿದ್ದರೂ ನಗರದ ವಿವಿಧೆ ಇರುವ ಖಾಲಿ ಜಾಗ, ರಸ್ತೆ ಪಕ್ಕದಲ್ಲಿಯೇ ಕಸ ಚೆಲ್ಲಿ, ನಗರದಲ್ಲಿನ ಕಸ ನಗರದಲ್ಲಿಯೇ ವಿಲೇವಾರಿಯಾಗುತ್ತಿದೆ. ಈ ಮೂಲಕ ಕೆರೆ ನೀರು ಕೆರೆಗೆ ಚೆಲ್ಲಿ ಎಂಬ ಗಾದೆಯನ್ನು ನಗರ ಸಭೆಯವರು ವಿಭಿನ್ನವಾಗಿ ಪಾಲಿಸುತ್ತಿರುವಂತಿದೆ.

Advertisement

ನಗರದ ಪಿ.ಬಿ. ರಸ್ತೆ ಅಕ್ಕಪಕ್ಕ, ಬಸ್‌ ನಿಲ್ದಾಣ, ಹಾನಗಲ್ಲ ರಸ್ತೆ, ಜಿಲ್ಲಾಸ್ಪತ್ರೆ ಸುತ್ತಮುತ್ತ, ಎಂ.ಜಿ. ರಸ್ತೆ, ಇಜಾರಿಲಕಮಾಪುರ, ಕಾಗಿನೆಲೆ ರಸ್ತೆ, ಹುಕ್ಕೇರಿಮಠದ ರಸ್ತೆ, ದಾನೇಶ್ವರ ನಗರ ರಸ್ತೆ ಸೇರಿದಂತೆ ನಗರದ ವಿವಿಧೆಡೆ ರಾಶಿ ರಾಶಿಯಾಗಿ ಬಿದ್ದಿರುವ ಕಸದ ಗುಡ್ಡೆಗಳು ಕಣ್ಣಿಗೆ ರಾಚುತ್ತಿದ್ದು ಸುತ್ತಲಿನ ವಾತಾವರಣದಲ್ಲಿ ದುರ್ನಾತ ಬೀರುತ್ತಿವೆ.

ನಗರದ ಪಿ.ಬಿ. ರಸ್ತೆ ಅಕ್ಕಪಕ್ಕ, ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಪ್ರದೇಶದಲ್ಲಿ ಕಸವೆಲ್ಲ ಚರಂಡಿ ಶೇಖರಣೆಯಾಗಿದೆ. ಧಾರಾಕಾರ ಮಳೆ ಸುರಿದಾಗ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಖಾಲಿ ನಿವೇಶನ, ಪುರಾತನ ಕೆರೆ, ಉದ್ಯಾನವನಗಳಿಗೂ ಕಸ ವ್ಯಾಪಿಸಿದೆ. ನಾಗೇಂದ್ರನಮಟ್ಟಿ ಎಂಬುದು ನಗರಸಭೆಯ ಅಘೋಷಿತ ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಮಾರ್ಪಟ್ಟಿದೆ. ಚರಂಡಿಗಳು ಕಸದಿಂದ ತುಂಬಿಕೊಳ್ಳುತ್ತಿವೆ.

ಪೌರ ಕಾರ್ಮಿಕರು ಎಷ್ಟೇ ಶ್ರಮವಹಿಸಿದರೂ ನಗರದ ಕಸದಿಂದ ಮುಕ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ. ಸುಮಾರು 70ಸಾವಿರ ಜನಸಂಖ್ಯೆ ಹೊಂದಿರು ನಗರದ ಸ್ಥಿತಿ ಈಗಲೇ ಹೀಗಾದರೆ ಮುಂದೇನು ಎಂಬ ಆತಂಕ ನಾಗರಿಕರನ್ನು ಕಾಡುತ್ತಿದೆ. ನಗರದ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ಸಮೀಪದ ಗೌರಾಪುರ ಗುಡ್ಡದಲ್ಲಿ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಖರೀದಿಸಿದೆ. ನಗರದ ಎಲ್ಲ ಕಸವನ್ನು ಅಲ್ಲಿಗೆ ಕೊಂಡೊಯ್ಯಲು ಟ್ರ್ಯಾಕ್ಟರ್‌, ಲಾರಿಗಳನ್ನು ಮೀಸಲಿಡಲಾಗಿದೆ. ಆದರೆ, ನಿತ್ಯ ಒಂದರಿಂದ ಎರಡು ಲೋಡ್‌ ಕಸ ಮಾತ್ರ ಗೌರಾಪುರ ಗುಡ್ಡವನ್ನು ತಲುಪುತ್ತಿದೆ. ಅಲ್ಲಿಯೂ ಎಲ್ಲೆಂದರಲ್ಲಿ ಕಸವನ್ನು ಎಸೆಯಲಾಗುತ್ತಿದ್ದು, ಮಾಲಿನ್ಯ ಉಂಟಾಗುವಂತೆ ಬೆಂಕಿ ಹಾಕಿ ಸುಡಲಾಗುತ್ತಿದೆ.

ಪ್ರತಿ ತಿಂಗಳು ತ್ಯಾಜ್ಯ ವಿಲೇವಾರಿಗೆಂದು ಲಕ್ಷಾಂತರ ರೂ., ಖರ್ಚು ಮಾಡುತ್ತಿದ್ದರೂ ಕಸ ಮಾತ್ರ ನಗರದಿಂದ ಹೊರ ಹೋಗುತ್ತಿಲ್ಲ. ನಗರಸಭೆಯ ಈ ರೀತಿಯ ನಿರ್ಲಕ್ಷ್ಯ ಧೋರಣೆಯಿಂದ ಜನ ದುರ್ನಾತದ ಮಧ್ಯೆಯೇ ಬದುಕುವಂತಾಗಿದೆ. ಕಸದ ಹೆಚ್ಚಳದಿಂದ ಹಂದಿಗಳ ಉಪಟಳ ವಿಪರೀತವಾಗಿದೆ. ಕಾರಣ ಕಸದ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನತೆಯ ಆಗ್ರಹವಾಗಿದೆ.

Advertisement

ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಕಸ ತುಂಬಿಕೊಂಡು ಹೋಗಿ ಗೌರಾಪುರದ ವಿಲೇವಾರಿ ಘಟಕಕ್ಕೆ ಹಾಕುವ ಬದಲಿಗೆ ನಗರದ ಯಾವುದೋ ಖಾಲಿ ಪ್ರದೇಶದಲ್ಲಿ, ಜನಸಂಚಾರ ಕಡಿಮೆ ಇರುವ ರಸ್ತೆಗಳ ಪಕ್ಕದಲ್ಲಿಯೇ ಸುರಿಯಲಾಗುತ್ತಿದೆ. ಕಸ ವಿಲೇವಾರಿ ನಗರದಲ್ಲಿ ಸಮರ್ಪಕವಾಗಿ ಆಗದೆ ಇರುವುದರಿಂದ ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

•ಶಿವಯೋಗಿ, ನಗರ ನಿವಾಸಿ

ನಗರದ ಕಸವನ್ನು ಸಮೀಪದ ಗೌರಾಪುರದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ದು ಹಾಕಬೇಕು. ಒಂದು ವೇಳೆ ನಗರದಲ್ಲಿಯೇ ಕಸ ಹಾಕುತ್ತಿದ್ದರೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೇ ಕಸ ಒಯ್ಯುವಂತೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.

•ಪೌರಾಯುಕ್ತರು, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next