ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಸೋಮವಾರದಿಂದ ಅಧಿಕೃತ ಚಾಲನೆ ಪಡೆದುಕೊಂಡಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳಿಂದ ಪಕ್ಷದ ನಾಯಕರ ನಿವಾಸಗಳಿಗೆ ಪರೇಡ್, ದುಂಬಾಲು ಬೀಳುವುದು, ಶಿಫಾರಸು, ಪ್ರಭಾವ, ಒತ್ತಡದ ಯತ್ನಗಳು ಆರಂಭಗೊಂಡಿವೆ.
ಪಾಲಿಕೆ ಚುನಾವಣೆಗೆ ಮುನ್ನವೇ ಆಯಾ ವಾರ್ಡ್‌ಗಳಲ್ಲಿ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ತಮ್ಮದೇ ಹಲವು ಕಾರ್ಯ, ಸಾಮಾಜಿಕ ಸೇವೆ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಉತ್ಸವ, ವಾರ್ಡ್ ವ್ಯಾಪ್ತಿ ಜಾತ್ರೆ, ಆಚರಣೆ, ಉರುಸು, ಅನ್ನಸಂತರ್ಪಣೆ, ಗಣೇಶೋತ್ಸವ ಇನ್ನಿತರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ, ನೆರವು ನೀಡುವ ಮೂಲಕ ತಮ್ಮದೇ ಉಸ್ತುವಾರಿ ಇಲ್ಲವೇ ನೇತೃತ್ವ ಎಂದು ಬಿಂಬಿಸಿ ಮುಂದಿನ ಚುನಾವಣೆಗೆ ಹಾದಿ ಸುಗಮಗೊಳಿಸುವ ಯತ್ನಗಳು ನಡೆಯುತ್ತವೆ.
ಕಳೆದ ವರ್ಷದಿಂದ ಕೋವಿಡ್ ಮಹಾಮಾರಿ ವಕ್ಕರಿಸಿದ್ದರಿಂದ ಪಾಲಿಕೆ ಟಿಕೆಟ್ ಆಕಾಂಕ್ಷಿಗಳು, ಪಾಲಿಕೆ ಮಾಜಿ ಸದಸ್ಯರು ವಾರ್ಡ್ ವ್ಯಾಪ್ತಿಯಲ್ಲಿ ಆಹಾರ ಧಾನ್ಯಗಳ ಕಿಟ್ ಹಂಚಿಕೆ, ಕೋವಿಡ್ ಲಸಿಕೆ ಆಯೋಜನೆ, ಲಸಿಕೆ ಕೇಂದ್ರಗಳಿಗೆ ಭೇಟಿ, ಪಡಿತರ ಅಂಗಡಿಗಳಿಗೆ ತೆರಳಿ ಪಡಿತರ ವಿತರಣೆ ಕಾಳಜಿ ಇನ್ನಿತರ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬಂದಿದೆ. ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಆಕಾಂಕ್ಷಿಗಳು ತಮಗೆ ಟಿಕೆಟ್ ದೊರೆಯಲಿದೆ ಎಂಬ ವಿಶ್ವಾಸದಲ್ಲಿ ಹಾಗೂ ಪಕ್ಷದ ನಾಯಕರು ಅಂತಿಮ ಹಂತದಲ್ಲಿ ತಮಗೆ ಟಿಕೆಟ್ ನೀಡಿದರೆ ಹೇಗೆ ಎಂಬ ಚಿಂತನೆಯಲ್ಲಿ ಇವೆಲ್ಲವುಗಳನ್ನು ಕೈಗೊಂಡಿದ್ದಾಗಿದೆ. ಯಾವಾಗ ಚುನಾವಣೆ ಅಧಿಕೃತವಾಗಿ ಘೋಷಣೆ ಆಯಿತೋ ಅಲ್ಲಿಂದಲೇ ಟಿಕೆಟ್ ತನಗೆ ಸಿಗಬೇಕೆಂಬ ಸರ್ಕಸ್ ಶುರುವಾಗಿದೆ.
ಗಿಜಿಗುಡುತ್ತಿರುವ ನಾಯಕರ ನಿವಾಸ: ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಪ್ರತಿ ವಾರ್ಡ್‌ಗೆ 4-8 ಟಿಕೆಟ್ ಆಕಾಂಕ್ಷಿಗಳು ಇದ್ದು, ಟಿಕೆಟ್ ಪಡೆಯುವ ನಿಟ್ಟಿನಲ್ಲಿ ತಮ್ಮ ಪಕ್ಷದ ನಾಯಕರ ನಿವಾಸಗಳಿಗೆ ಬೆಂಬಲಿಗರೊಂದಿಗೆ ಪರೇಡ್ ನಡೆಸುವುದು, ಜಾತಿ-ಸಮಾಜ, ವಾರ್ಡ್ ಜನರೊಟ್ಟಿಗಿನ ಸಂಪರ್ಕ, ಪಕ್ಷ ಸೇವೆ ಇನ್ನಿತರ ವಿಚಾರಗಳೊಂದಿಗೆ ಟಿಕೆಟ್ ನೀಡುವಂತೆ ಮನವಿ ಮಾಡುವ, ಒತ್ತಡ ತರುವ ಕಾರ್ಯದಲ್ಲಿ ತೊಡಗಿದ್ದಾರೆ. ಅವಳಿನಗರದಲ್ಲಿನ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು, ಸಂಸದರು ಹಾಗೂ ಪಕ್ಷಗಳ ನಾಯಕರ ನಿವಾಸಗಳು ಇದೀಗ ಗಿಜಿಗುಡತೊಡಗಿವೆ.
ಟಿಕೆಟ್ ಆಕಾಂಕ್ಷಿಗಳು ತಂಡ ತಂಡವಾಗಿ ನಾಯಕರಿಗೆ ಮನವಿ ಸಲ್ಲಿಸುವುದು, ವಾರ್ಡ್ ನಲ್ಲಿ ತಾವು ಮಾಡಿದ ಕಾರ್ಯ, ಸೇವೆಗಳ ಚಿತ್ರಗಳ ಸಮೇತ ಬಯೋಡಾಟಾ ವರದಿ ನೀಡುವುದು, ಇಷ್ಟೊಂದು ಬೆಂಬಲಿಗರು ತಮ್ಮ ಪರವಾಗಿದ್ದಾರೆಂದು ಪರೇಡ್ ಮಾಡಿಸುವ ಎಲ್ಲ ಯತ್ನಗಳಿಗೆ ಮುಂದಾಗಿದ್ದಾರೆ. ಇದರಿಂದಾಗಿ ಅವಳಿನಗರದಲ್ಲಿನ ಪಕ್ಷಗಳ ನಾಯಕರಷ್ಟೇ ಅಲ್ಲದೆ, ಪಕ್ಷಗಳ ಮುಖಂಡರು ಹಾಗೂ ಪ್ರಮುಖ ಪದಾಧಿಕಾರಿಗಳ ಮನೆಗಳ ಮುಂದೆ ಟಿಕೆಟ್ ಆಕಾಂಕ್ಷಿಗಳ ಸರ್ಕಸ್ ನೋಡಬಹುದಾಗಿದೆ.