ಸಾಗರ: ಮನೆ ಎದುರು ದುರ್ವಾಸನೆ ಬೀರುವ ವಾತಾವರಣ ನಿರ್ಮಾಣವಾದರೂ ಅದನ್ನು ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಬಯಸುವ, ಆಧುನಿಕ ಶಿಕ್ಷಣ ಹೊಂದಿರುವವರೇ ತಮ್ಮ ಮನೆ ಅಂಗಳದಿಂದ ಒಂದಿಂಚು ಆಚೆಈಚೆ ಸ್ವಚ್ಚ ಮಾಡುವ ಕಾರ‍್ಯಕ್ಕೆ ಮುಂದಾಗದಿರುವ ಈ ಕಾಲಘಟ್ಟದಲ್ಲಿ ಮನೆಯಿಂದ ಹೆದ್ದಾರಿಯವರೆಗೂ ಗುಡಿಸಿ ಸಗಣಿಯಿಂದ ಸಾರಿಸಿ, ಕೆಂಮಣ್ಣಿನಿಂದ ಶೃಂಗರಿಸಿ ಪರಿಶಿಷ್ಟರ ಕಾಲೋನಿ ಶಿಷ್ಟರ ಸಮಾಜಕ್ಕೆ ಅತಿ ದೊಡ್ಡ ಪಾಠ ಹೇಳುವ ದೃSಶ್ಯ ತಾಲೂಕಿನ ಕೆಳದಿ ಸಮೀಪದ ಮಾಸೂರಿನಲ್ಲಿ ಆಸಕ್ತರ ಗಮನ ಸೆಳೆಯುವಂತಿದೆ.
ಸಾಗರದಿಂದ ಕೆಳದಿ ಮೂಲಕ ಸೊರಬ ಹೊರಟರೆ ನಡುವೆ ಸಿಗುವ ಊರು ಮಾಸೂರು. ಆರಂಭದಲ್ಲಿಯೇ ಪರಿಶಿಷ್ಟರ ಕಾಲೋನಿ ಸಿಗುತ್ತದೆ. ರಸ್ತೆಯ ಎರಡೂ ಬದಿಯ ಉದ್ದಕ್ಕೂ ಕೆಂಮಣ್ಣು ಲೇಪಿತ ನುಣುಪಾದ ಸ್ವಚ್ಚ ನೆಲ ಅಲ್ಲಿ ಕಂಡು ಬರುತ್ತದೆ. ವಾಹನಗಳು ಸಂಚರಿಸುವ ರಸ್ತೆಯ ಅದಿಷ್ಟೂ ಊರು ಧೂಳು ಎನ್ನುವ ಮಾತಿಲ್ಲ. ಸುಮಾರು ೩೬ಕ್ಕೂ ಹೆಚ್ಚು ಕುಟುಂಬಗಳು ವಾಸವಿರುವ ಅಲ್ಲಿ ವಿಶೇಷ ಸೌಲಭ್ಯಗಳೇನೂ ಇಲ್ಲ. ಬಾವಿಯಿಂದ ನೀರು ಹೊತ್ತು, ಕೊಟ್ಟಿಗೆಯಿಂದ ಸಗಣಿ ತಂದು ಕೈಯಲ್ಲಿ ಪೂರಕೆ ಹಿಡಿದು ಸಾರಿಸುವ ಕಾರ‍್ಯದಿಂದಲೇ ಅವರ ನಿತ್ಯದ ಬೆಳಗು ಆಗಲಿದೆ. ಊರ ರಸ್ತೆಯೂ ತಮ್ಮ ಮನೆಯ ರೀತಿಯಲ್ಲಿಯೇ ನೋಡಿಕೊಳ್ಳುತ್ತ ಬಂದಿರುವುದೂ ಈ ಊರಿನ ಹೆಗ್ಗಳಿಕೆ.
ಸುತ್ತಲ ಪರಿಸರವನ್ನು ಶುದ್ದವಾಗಿ ಕಾಪಾಡಿಕೊಂಡು ಬರಬೇಕು ಎಂಬ ಅಕಡೆಮಿಕ್ ಶಿಕ್ಷಣವನ್ನು ಅತ್ಯಂತ ಕಡಿಮೆ ಮಂದಿ ಪಡೆದಿದ್ದರೂ ಈ ಪರಿಶಿಷ್ಟ ಕುಟುಂಬಗಳ ಪರಿಸರ ಕಾಳಜಿ ಎಲ್ಲರಿಗೂ ಮಾದರಿ ಎಂದರೆ ತಪ್ಪಲ್ಲ. ಇಲ್ಲಿ ವಾಸವಾಗಿದ್ದ ಕಾಲದಿಂದಲೂ ತಮ್ಮ ಮನೆಯ ಮುಂದೆ ಸಗಣಿಯಿಂದ ಸಾರಿಸುವ ಕೆಂಮಣ್ಣಿನಿಂದ ಸೊಗಸಾಗಿಸುವ ಪದ್ಧತಿಯನ್ನು ಈ ಹಿಂದಿನಿಂದ ರೂಢಿಸಿಕೊಂಡು ಬಂದಿತ್ತು. ಆದರೆ ಈಗ ಜಾನುವಾರು ಸಾಕಣೆಯ ಕಣ್ಮರೆ, ಟಾರು ರಸ್ತೆ, ವಿಪರೀತ ವಾಹನಗಳ ಭರಾಟೆ ಕಂಡುಬಂದಿದ್ದರೂ ಇಲ್ಲಿನ ಜನ ಇಡೀ ಊರನ್ನೂ ಹಳೆಯದೇ ರೀತಿಯಲ್ಲಿ ಇಟ್ಟು ಆದರ್ಶರಾಗಿದ್ದಾರೆ.
ಇದನ್ನೂ ಓದಿ : ಡೆಡ್ ಎಂಡ್ ಮಾತ್ರ ಇರುವುದು ಎಂದು ಕಾಂಗ್ರೆಸ್ ಗೆ ಹೇಳಿದ್ದೇನೆ: ಸಿಎಂ
ಈ ಕುರಿತು ಪತ್ರಿಕೆಯ ಗಮನ ಸೆಳೆದ ಯಕ್ಷ ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ, ದೇಶದಲ್ಲಿ ಪರಿಸರ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸುವ ಕಾರ‍್ಯ ಇಲ್ಲಿ ನಿತ್ಯ ನಡೆಯುತ್ತಲೇ ಇದೆ. ತಿಳಿದವರೂ ಕೂಡ ಅದನ್ನು ಗಂಭೀರವಾಗಿ ಸ್ವೀಕರಿಸಿಲ್ಲ. ನನ್ನ ಮನೆ ಹೊರತುಪಡಿಸಿ ಊರ ಉಸಾಬರಿ ನನಗ್ಯಾಕೆ ಎನ್ನುವವರೇ ಹೆಚ್ಚು. ಇನ್ನು ಭಾಷಣ ಮಾಡುವವರಂತೂ ಕೃತಿಯಲ್ಲಿ ಅದಕ್ಕಿಂತ ಭಿನ್ನ. ಹೀಗಿರುವ ಸನ್ನಿವೇಶದಲ್ಲಿ ಮಾಸೂರು ಎನ್ನುವ ಊರ ಪರಿಶಿಷ್ಟರ ಕಾರ‍್ಯ ವಿಭಿನ್ನ ಎನ್ನಲೇಬೇಕು ಎನ್ನುತ್ತಾರೆ.
ಬೇಸಿಗೆಯಲ್ಲಿ ಸಗಣಿ ಮತ್ತು ಕೆಂಮಣ್ಣು ಆರೋಗ್ಯವನ್ನು ಸರಿದೂಗಿಸುತ್ತದೆ. ಧೂಳು ಇಲ್ಲದ ರೀತಿಯಲ್ಲಿ ಸಗಣಿಯಿಂದ ಸಾರಿಸುವ ಕಾರ‍್ಯದಿಂದ ಸುತ್ತಲು ಉತ್ತಮ ಆರೋಗ್ಯವೂ ಇದೆ. ನಾವು ನಮಗಾಗಿ ಮಾಡಿಕೊಳ್ಳುತ್ತಿರುವ ಈ ಕಾರ‍್ಯವನ್ನು ಇಲ್ಲಿ ಹಾದು ಹೋಗುವ ಕೆಲ ಜನರು ಅಭಿನಂದಿಸಿ ಹೋಗುತ್ತಿರುವುದು ನಮಗೆ ಖುಷಿ ನೀಡಿದೆ ಎನ್ನುವುದು ಸ್ಥಳೀಯರ ಮಾತು.