Advertisement

ಪೂರ್ಣಪ್ರಮಾಣದಲ್ಲಿ ಸಿಟಿ ಬಸ್ ‌ಸಂಚಾರ?

12:33 PM Nov 01, 2020 | Suhan S |

ಮಹಾನಗರ, ಅ. 31: ಕೋವಿಡ್ ಪರಿಣಾಮದಿಂದ ತತ್ತರಿಸಿದ ಸಾರಿಗೆ ಉದ್ಯಮದಲ್ಲಿ ಸದ್ಯ ಚೇತರಿಕೆಯ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ಏಳು ತಿಂಗಳಿನಿಂದ ನಿಲ್ಲಿಸಿದ್ದ ಬಹುತೇಕ ಸಿಟಿ ಬಸ್‌ಗಳು ನವೆಂಬರ್‌ ತಿಂಗಳಿನಿಂದ ರಸ್ತೆ ಗಿಳಿಸಲು ಮಾಲಕರು ಚಿಂತಿಸಿದ್ದಾರೆ.

Advertisement

ಕೋವಿಡ್ ಹಿನ್ನೆಲೆ ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳು ಮಾರ್ಚ್‌ ತಿಂಗಳಾರ್ಧದಲ್ಲಿ ತಮ್ಮ  ಸಂಚಾರ ಸ್ಥಗಿತಗೊಳಿಸಿದ್ದವು. ಲಾಕ್‌ಡೌನ್‌ ಸಡಿಲಿಕೆಯ ಬಳಿಕ ಜೂನ್‌ 1ರಿಂದ ಮತ್ತೆ ಬಸ್‌ ಸಂಚಾರ ಆರಂಭಗೊಂಡಿದ್ದರೂ ನಿರೀಕ್ಷಿತ ಪ್ರಯಾಣಿಕರು ಇರಲಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಬಸ್‌ಗಳನ್ನು ಆರ್‌ಟಿಒಗೆ ಹಸ್ತಾಂತರಿಸಲಾಗಿತ್ತು. ಇದರಿಂದಾಗಿ ಶೇ.50ರಷ್ಟು ಬಸ್‌ಗಳು ರಸ್ತೆಗಿಳಿಯಲಿಲ್ಲ. ಇದೀಗ ಬಸ್‌ ಸಂಚಾರ ಆರಂಭಗೊಂಡು 4 ತಿಂಗಳುಗಳು ಕಳೆದಿದ್ದು, ಸದ್ಯ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ತುಸು ಚೇತರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಬಸ್‌ಗಳು ನ. 1ರಿಂದ ರಸ್ತೆಗಿಳಿಯುವ ಸಾಧ್ಯತೆ ಇದೆ. ನಗರದಲ್ಲಿ ಒಟ್ಟು 325 ಸಿಟಿ ಬಸ್‌ಗಳಿದ್ದು, ನಗರದ 160 ರೂಟ್‌ಗಳಲ್ಲಿ ಸಂಚರಿಸುತ್ತವೆ. ಈಗಾಗಲೇ ಎಲ್ಲ ರೂಟ್‌ಗಳಲ್ಲಿ ಬಸ್‌ ಸಂಚಾರ ಆರಂಭಗೊಂಡಿದೆ. ಕೋವಿಡ್ ಪೂರ್ವ 10,000 ರೂ. ಸಂಗ್ರಹವಾಗುತ್ತಿದ್ದ ರೂಟ್‌ಗಳಲ್ಲಿ ಸದ್ಯ 4,000 ರೂ. ಸಂಗ್ರಹವಾಗುತ್ತಿದೆ. ಆದರೂ ರಾಜ್ಯ ಸರಕಾರ ಮಾತ್ರ ಬಸ್‌ ಮಾಲಕರ ಬೇಡಿಕೆಗೆ ಸ್ಪಂದಿಸಿಲ್ಲ. ಪ್ರಮುಖವಾಗಿ ಖಾಸಗಿ ಬಸ್‌ಗಳಿಗೆ 6 ತಿಂಗಳುಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಸಂಘದ ವತಿಯಿಂದ ಕೇಳಿಕೊಂಡಿತ್ತು. ಆದರೆ ಸರಕಾರ ಈಡೇರಿಸಲಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಸಂಚಾರ ರದ್ದುಗೊಳಿಸುವುದಿಲ್ಲ ಎನ್ನುತ್ತಾರೆ ಬಸ್‌ ಮಾಲಕರು.

ಪ್ರಯಾಣಿಕರಿದ್ದರೆ ಕಾರ್ಯಾಚರಣೆ ಕೋವಿಡ್ ಪೂರ್ವದಲ್ಲಿ ರಾತ್ರಿ ಸುಮಾರು 10 ಗಂಟೆಯವರೆಗೆ ಸಿಟಿ ಬಸ್‌ ಸಂಚಾರ ಇರುತ್ತಿತ್ತು. ರಾತ್ರಿಯಾದರೂ ನಗರದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಆದರೆ ಕೊರೊನಾ ಆಗಮನದ ಬಳಿಕ ರಾತ್ರಿ 8.30ರಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಬಹುತೇಕ ಅಂಗಡಿಗಳು ಬಾಗಿಲು ಮುಚ್ಚುತ್ತಿವೆ. ಜನರ ಓಡಾಟವೂ ಕಡಿಮೆಯಾಗಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ರಾತ್ರಿ 10 ಗಂಟೆಯವರೆಗೂ ಬಸ್‌ ಕಾರ್ಯಾಚರಣೆ ನಡೆಸಲು ಸಿದ್ಧರಿದ್ದೇವೆ ಎನ್ನುತ್ತಾರೆ ಬಸ್‌ ಮಾಲಕರು.

ಚೇತರಿಕೆ ನಿರೀಕ್ಷೆ :

ಕೋವಿಡ್ ಕಾರಣದಿಂದ ಸಿಟಿ ಬಸ್‌ ಮಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೂ ನವೆಂಬರ್‌ ತಿಂಗಳಿನಿಂದ ಬಹುತೇಕ ಸಿಟಿ ಬಸ್‌ಗಳು ರಸ್ತೆಗಳಿಯಲಿವೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಶೇ.40ರಷ್ಟು ಆದಾಯ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಚೇತರಿಕೆಯ ನಿರೀಕ್ಷೆಯಲ್ಲಿದ್ದೇವೆ.  -ದಿಲ್‌ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next