Advertisement
ಆಂಧ್ರ ಪ್ರದೇಶದ ಮಹೆಬೂಬನಗರ- ಗಿಣಿಗೇರಾ ಮಾರ್ಗದ 165 ಕಿ.ಮೀ. ಮಾರ್ಗದ ರೈಲ್ವೆ ಯೋಜನೆ ಪ್ರಯೋಜನ ಕೊನೆಗೂ ತಾಲೂಕಿಗೆ ತಲುಪಲಾರಂಭಿಸಿದೆ. ಕೊಪ್ಪಳದ ಆರಂಭಿಕ ಪಾಯಿಂಟ್ ನಿಂದ ಗಂಗಾವತಿ ದಾಟಿ ಪಕ್ಕದ ಕಾರಟಗಿ ಪಟ್ಟಣಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ರೈಲ್ವೆ ಸೌಲಭ್ಯ ಪಡೆಯಲು ಸಿಂಧನೂರು ಪ್ರಯಾಣಿಕರು ಮುಂದಾಗಿದ್ದಾರೆ. ಇದಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸಾಥ್ ನೀಡಿದ್ದರಿಂದ ಜನರಲ್ಲಿ ಉತ್ಸಾಹ ಮೂಡಿದೆ.
Related Articles
Advertisement
ಸಿಂಧನೂರಿನಿಂದ ರೈಲ್ವೆ ಸ್ಟೇಷನ್‌ಗೆ ಎರಡು ಸಿಟಿ ಬಸ್ ಬಿಡಲಾಗಿದೆ. ಬೆಳಗ್ಗೆ 5:30ಕ್ಕೆ ಕಾರಟಗಿಯಿಂದ ಹುಬ್ಬಳ್ಳಿಗೆ ರೈಲು ಹೊರಡುತ್ತದೆ. ಅದೇ ವೇಳೆ ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ರೈಲು ಬರುತ್ತದೆ. ಮಧ್ಯಾಹ್ನ ಕೂಡ ಹುಬ್ಬಳ್ಳಿಗೆ ರೈಲು ಹೊರಡುತ್ತದೆ. ಕಾರಟಗಿ ಟು ಬೆಂಗಳೂರಿನ ಯಶವಂತಪುರಕ್ಕೂ ರೈಲು ಬಿಡಲಾಗಿದೆ. ಈ ಎಲ್ಲ ರೈಲು ಮೂಲಕ ದೂರ ಊರಿಗೆ ತೆರಳಲು ಸಿಂಧನೂರಿನ ಪ್ರಯಾಣಿಕರನ್ನು ರೈಲ್ವೆ ಸ್ಟೇಷನ್‌ಗೆ ಕಳುಹಿಸಲು ಅವಕಾಶ ಒದಗಿಸಲಾಗುತ್ತಿದೆ. ಬಹುತೇಕರು ಖಾಸಗಿ ವಾಹನ ಬಳಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಪ್ರಯತ್ನಕ್ಕೆ ಆರಂಭದಲ್ಲಿ ಯಶಸ್ಸು ಸಿಗುತ್ತಿಲ್ಲವೆಂಬ ಮಾತು ಕೇಳಿಬಂದಿವೆ. ನಾಲ್ಕೈದು ದಿನದಿಂದ ಆರಂಭವಾಗಿರುವ ಈ ಸಾರಿಗೆ ಸೌಲಭ್ಯ ಖಚಿತವಾದರೆ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ ಒದಗಲಿದೆ.
ಒತ್ತಾಯಕ್ಕೆ ಸ್ಪಂದಿಸಿದ ಸಾರಿಗೆ ಸಂಸ್ಥೆ
ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ, ರಾತ್ರಿ ವೇಳೆ ಕಾರಟಗಿ ರೈಲ್ವೆ ಸ್ಟೇಷನ್‌ಗೆ ಸಿಟಿ ಬಸ್‌ಗಳನ್ನು ಓಡಿಸಬೇಕು ಎಂಬ ಬೇಡಿಕೆಗೆ ಆರಂಭಿಕವಾಗಿ ಕಲ್ಯಾಣ ಕರ್ನಾಟಕ ಸಂಸ್ಥೆ ಸ್ಪಂದಿಸಿದೆ. ಹುಬ್ಬಳ್ಳಿ, ಬೆಂಗಳೂರು ರೈಲು ಏರುವ ಪ್ರಯಾಣಿಕರನ್ನು ಸಿಂಧನೂರಿನಿಂದ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಸಿಂಧನೂರಿನಲ್ಲಿ ರೈಲ್ವೆ ನಿಲ್ದಾಣ ಆರಂಭವಾಗುವ ಮುನ್ನವೇ ಅದರ ಪ್ರಯೋಜನ ತಾಲೂಕಿನ ಜನರಿಗೆ ದೊರೆಯಲಾರಂಭಿಸಿದೆ.
ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಬಸ್ ಓಡಿಸಲಾಗುತ್ತಿದೆ. ಸ್ವಂತ ವಾಹನ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಬೇಕು. ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಬಂದರೆ, ಮುಂದಿನ ದಿನಗಳಲ್ಲಿ ರೈಲ್ವೆ ಸ್ಟೇಷನ್‌ಗೆ ನಿರಂತರವಾಗಿ ಬಸ್ ಓಡಿಸಲಾಗುವುದು. -ಶ್ರೀಕಂಠ ಕುದುರೆ, ಸಂಚಾರ ನಿರೀಕ್ಷಕರು, ಸಾರಿಗೆ ಘಟಕ ಸಿಂಧನೂರು
-ಯಮನಪ್ಪ ಪವಾರ