Advertisement

ದುಡಿಯುವ ವರ್ಗಕ್ಕೆ ಒಂದೇ ವೇತನ ಜಾರಿಯಾಗಿಲ್ಲ: ವರಲಕ್ಷ್ಮೀ

05:35 AM Aug 19, 2017 | Karthik A |

ಬೆಳ್ತಂಗಡಿ: ಒಂದೇ ದೇಶ, ಒಂದೇ ತೆರಿಗೆ ಎಂದು ಹೇಳುವ ಕೇಂದ್ರ ಸರಕಾರ ದುಡಿಯುವ ವರ್ಗಕ್ಕೆ ಮಾತ್ರ ಒಂದೇ ರೀತಿ ವೇತನ ಯಾಕೆ ಜಾರಿ ಮಾಡುತ್ತಿಲ್ಲ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮಿ ಹೇಳಿದರು. ಅವರು ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ, ಸಮೃದ್ಧ ಸಮಗ್ರ ಸೌಹಾರ್ದ ಕರ್ನಾಟಕ ಎಂಬ ಘೋಷಣೆಯಡಿ ಸಿಐಟಿಯು ಜಾಗೃತಿ ಜಾಥಾವನ್ನು ಉದ್ದೇಶಿಸಿ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಮಾತನಾಡಿದರು.

Advertisement

ಕೇಂದ್ರ ಸರಕಾರ ಪ್ರತೀ ವರ್ಷ 1 ಕೋಟಿ ಉದ್ಯೋಗ ನೀಡುವ ವಾಗ್ಧಾನದೊಂದಿಗೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕೂಡ ಒಂದೇ ಒಂದು ಉದ್ಯೋಗವನ್ನು ಸೃಷ್ಟಿ ಮಾಡದೆ ದೇಶದ ಅಸಂಖ್ಯಾಕ ನಿರುದ್ಯೋಗಿ ಯುವ ಜನರನ್ನು ವಂಚಿಸಿದೆ. ದೇಶದಲ್ಲಿ ಪ್ರತೀ ವರ್ಷ ಲಕ್ಷಾಂತರ ಉದ್ಯೋಗಿಗಳನ್ನು ಕಡಿತ ಮಾಡುವ ಮೂಲಕ ದೇಶದಲ್ಲಿ ನಿರುದ್ಯೋಗ ತಾಂಡವ ವಾಡುವಂತೆ ಮಾಡುತ್ತಿದೆ ಎಂದ ಅವರು ಅಂಗನವಾಡಿ, ಬಿಸಿಯೂಟ, ಆಶಾ ಸೇರಿದಂತೆ ಸ್ಕೀಂ ನೌಕರರನ್ನು ಕೇಂದ್ರ ಸರಕಾರ ಬೀದಿ ಪಾಲು ಮಾಡಲು ಹೊರಟಿದೆ. ಇದರಿಂದಾಗಿ ಕೋಟ್ಯಂತರ ಮಹಿಳೆಯರಿಗೆ ಉದ್ಯೋಗದ ಅಭದ್ರತೆ ಕಾಡುತ್ತಿದೆ. ಕೇರಳ ಸರಕಾರ ರಾಜ್ಯದ ಯಾವುದೇ ಭಾಗದಲ್ಲಿ ದುಡಿಯುವ ವರ್ಗಕ್ಕೆ ರೂ. 600 ವೇತನ ನೀಡುವ ಕಾನೂನನ್ನು ಜಾರಿಗೊಳಿಸಿದೆ. ಇದನ್ನು ರಾಜ್ಯ ಸರಕಾರ ಕೂಡಾ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಕೆ.ಎನ್‌. ಉಮೇಶ್‌, ಅಟೋ ರಿಕ್ಷಾ ಚಾಲಕರ ಯೂನಿಯನ್‌ನ ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಸಂತೋಷ್‌, ಡಿವೈಎಫ್‌ಐನ ಬಸವರಾಜ್‌ ಪೂಜಾರ್‌, ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಬಜಾಲ್‌, ಸಿ.ಐ.ಟಿ.ಯು. ತಾಲೂಕು ಅಧ್ಯಕ್ಷ ಶಿವಕುಮಾರ್‌, ಕಾರ್ಮಿಕ ಮುಖಂಡರಾದ ಹರಿದಾಸ್‌, ಸುಕನ್ಯಾ, ರೋಹಿಣಿ ಪೆರಾಡಿ, ಮೀನಾಕ್ಷಿ, ಜಯರಾಮ್‌ ಮಯ್ಯ, ಕೃಷ್ಣ ನೆರಿಯ, ಜಯಂತಿ ನೆಲ್ಲಿಂಗೇರಿ, ಲಲಿತಾ ಮದ್ದಡ್ಕ, ಅನಿಲ್‌ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ಅಂಬೇಡ್ಕರ್‌ ಭವನದಿಂದ ಬಸ್‌ ನಿಲ್ದಾಣದ ತನಕ ಮೆರವಣಿಗೆ ನಡೆಯಿತು. ಈ ಸಂದರ್ಭ ಕಾರ್ಮಿಕ ವರ್ಗದ ಜಾಗೃತಿಗಾಗಿ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ವಸಂತ ನಡ ಸ್ವಾಗತಿಸಿ, ಶೇಖರ್‌ ಎಲ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next