ನವದೆಹಲಿ: ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಭಟಿಸುವುದು ನಮ್ಮ ಹಕ್ಕು. ಆದರೆ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕೇಂದ್ರ ಜಾರಿಗೊಳಿಸಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ನಡುವೆಯೇ ಶಾಹಿ ಇಮಾಮ್ ವ್ಯಕ್ತಪಡಿಸಿರುವ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ.
ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕು. ಯಾರೊಬ್ಬರು ಅದನ್ನು ತಡೆಯಲು ಸಾಧ್ಯವಿಲ್ಲ. ಅಲ್ಲದೇ ಅದನ್ನು ನಿಯಂತ್ರಿಸುವುದು ಕೂಡಾ ಅಷ್ಟೇ ಮುಖ್ಯವಾಗಿದೆ. ನಮ್ಮ ಭಾವುಕತೆ, ಭಾವನೆಯನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಕೂಡಾ ಅಷ್ಟೇ ಮುಖ್ಯವಾದದ್ದು ಎಂದು ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳಿಕೆಯ ವಿಡಿಯೋವನ್ನು ಎಎನ್ ಐ ವರದಿ ಮಾಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ನಡುವೆ ವ್ಯತ್ಯಾಸವಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ಕಾನೂನು ಆಗಿ ಮಾರ್ಪಟ್ಟಿದೆ. ಆದರೆ ಎನ್ ಆರ್ ಸಿ ಘೋಷಣೆಯಾಗಿ ಉಳಿದಿದೆ. ಎನ್ ಆರ್ ಸಿ ಇನ್ನೂ ಕಾಯ್ದೆ ಆಗಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮ್ ನಿರಾಶ್ರಿತರಿಗೆ ಭಾರತದ ಪೌರತ್ವ ಸಿಗುವುದಿಲ್ಲ. ಹೀಗಾಗಿ ಭಾರತದಲ್ಲಿರುವ ಮುಸ್ಲಿಮರಿಗೆ ಸಿಎಎನಿಂದ ಯಾವುದೇ ತೊಂದರೆಯೂ ಇಲ್ಲ ಎಂದು ಶಾಹಿ ಇಮಾಮ್ ಸಲಹೆ ನೀಡಿದ್ದಾರೆ.