ಬಾಗಲಕೋಟೆ: ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಭಾರತೀಯ ಮುಸ್ಲಿಂರಿಗೆ ತೊಂದರೆ ಇಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಸುಳ್ಳು ವದಂತಿ ಹಬ್ಬಿಸುತ್ತಿವೆ. ಅದಕ್ಕೆ ಯಾರೂ ಕಿವಿಗೊಡಬಾರದು ಎಂದು ಬಿಜೆಪಿ ಮುಖ್ಯ ವಕ್ತಾರ ವಿವೇಕ ರಡ್ಡಿ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ತಿದ್ದುಪಡಿ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದೇಶದ ಭವಿಷ್ಯದ ಉದ್ದೇಶದಿಂದ ಭದ್ರತೆ ಹಿತಾಸಕ್ತಿ ಜತೆಗೆ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯಿಂದ ದೇಶದ ಯಾವುದೇ ಧರ್ಮ ಜನರಿಗೆ ತೊಂದರೆಯಾಗುವುದು. ಅಭದ್ರತೆಯೂ ಕಾಡುವುದಿಲ್ಲ. ಇದರಲ್ಲಿ ದೇಶದ ಸಾಕ್ಷಿಪ್ರಜ್ಞೆಯಿದೆ. ಸಂವಿಧಾನದ 14ನೇ ಕಲಂನಲ್ಲಿ ತಿಳಿಸಿದಂತೆ ಸಮಾನತೆ ಕಲ್ಪಿಸಲಾಗಿದೆ ಎಂದರು.
70 ವರ್ಷದಿಂದ ಆಗದ ಕಾರ್ಯ: ಈವರೆಗೆ ದೇಶವನ್ನು ಆಳಿದ ಸರ್ಕಾರಗಳು, 70 ವರ್ಷಗಳಿಂದ ಮಾಡದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಹಾಗೂ ಗೃಹ ಸಚಿವ ಅಮಿತ್ ಶಾ ಮಾಡಿದ್ದಾರೆ. ಈ ಕಾಯ್ದೆ ತಿದ್ದುಪಡಿಯಿಂದ ದೇಶದ ಜಾತ್ಯತೀತ ತತ್ವಗಳಿಗೆ ಧಕ್ಕೆ ತಂದಿಲ್ಲ. ವಿರೋಧ ಪಕ್ಷಗಳು ಸುಳ್ಳು ವದಂತಿ ಹಬ್ಬಿಸಿ, ಸಮಾಜದಲ್ಲಿ ಶಾಂತಿ ಕದಡುತ್ತಿವೆ. ಜನರಲ್ಲಿ ತಪ್ಪು ತಿಳಿವಳಿಕೆ ಹಬ್ಬಿಸುವುದೇ ವಿರೋಧ ಪಕ್ಷಗಳ ಮುಖ್ಯ ಕಾರ್ಯವಾಗಿದೆ ಎಂದು ಆರೋಪಿಸಿದರು.
ಪೌರತ್ವ ತಿದ್ದುಪಡಿಯ ಎನ್‌ಆರ್‌ಸಿ ಅಡಿ 1971ರ ದಾಖಲೆ ಪತ್ರ ನೀಡಲು ಹೇಳಿರುವುದು ಆಸ್ಸಾಂ ರಾಜ್ಯಕ್ಕೆ ಮಾತ್ರ ಸಿಮೀತವಾಗಿದೆ. ಅಲ್ಲಿ ನುಸುಳುಕೋರರ ಹಾವಳಿ ಹೆಚ್ಚಾಗಿದ್ದರಿಂದ ಈ ದಾಖಲೆ ಕೇಳಲಾಗಿದೆ. ಆಸ್ಸಾಂನಲ್ಲಿ ನುಸುಳುಕೋರರ ಹಾವಳಿ ತಪ್ಪಿಸುವುದು ಈ ದಾಖಲೆ ಕೇಳಿರುವ ಮುಖ್ಯ ಉದ್ದೇಶವಾಗಿದೆ. ಇದರಿಂದ ದೇಶದ ಅಲ್ಪ ಸಂಖ್ಯಾತರಿಗೆ ತೊಂದರೆಯಾಗಲಿದೆ ಎಂಬುದೆಲ್ಲ ಸುಳ್ಳು. ಜನ್ಮ ದಿನದ ದಾಖಲೆ ನೀಡಿದರೆ ಎಲ್ಲ ರಾಜ್ಯಗಳಲ್ಲೂ ಪೌರತ್ವ ಕಾರ್ಡ್ ನೀಡಲಾಗುತ್ತದೆ ಎಂದು ಹೇಳಿದರು.
ವಿರೋಧ ಪಕ್ಷದವರು ಮತಬ್ಯಾಂಕ್‌ಗಾಗಿ ಗಲಭೆ ಸೃಷ್ಟಿಸುತ್ತಿದ್ದಾರೆ. ಪೌರತ್ವ ಕಾಯ್ದೆ ಕುರಿತು ಸುಳ್ಳು ವದಂತಿ ಹಬ್ಬಿಸಿ, ಅನುಮಾನ, ಸಂಶಯ ಬರುವಂತೆ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ಧರ್ಮದವರು ಕಿವಿಗೊಡಬಾರದು ಎಂದು ಮನವಿ ಮಾಡಿದರು. ದೇಶದ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿ ಬದ್ಧವಾಗಿ ಮುನ್ನಡೆದಿದೆ. ಕಳೆದ 500 ವರ್ಷಗಳ ಕಾಲ ನಡೆದು ಬಂದಿರುವ ದಬ್ಟಾಳಿಕೆ ಆಡಳಿತ ಕೊನೆಗಾಣಿಸುವುದು ಬಿಜೆಪಿಯ ಗುರಿ. ಭಾರತದಿಂದ ಪಾಕಿಸ್ತಾನ ಪ್ರತ್ಯೇಕಗೊಂಡಾಗ ಲಕ್ಷಾಂತರ ಜನ ಹಿಂದೂಗಳ ಹತ್ಯೆ ಮಾಡಲಾಯಿತು. ಬಾಂಗ್ಲಾದೇಶ, ಪಾಕಿಸ್ತಾನ, ಅಪಘಾನಿಸ್ತಾನದಿಂದ ಬಂದ ಹಿಂದೂ, ಬೌದ್ಧ, ಪಾರ್ಷಿ ಧರ್ಮದ ಜನರನ್ನು ಅನಧಿಕೃತವೆಂದು ನಿರ್ಧರಿಸಲಾಗುತ್ತಿತ್ತು. 5 ವರ್ಷಗಳಿಂದ ದೇಶದಲ್ಲಿ ವಾಸವಾಗಿದ್ದರೆ, ಅವರಿಗೆ ಈ ಕಾಯ್ದೆ ಮೂಲಕ ಪೌರತ ನೀಡಿ, ಅಧಿಕೃತ ಭಾರತದ ಪ್ರಜೆಯನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ತೇರದಾಳ ಶಾಸಕ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು. ಗುಳೇದಗುಡ್ಡದ ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಮಮದಾಪುರ, ಮಹಾಂತೇಶ ಕೋಲಕಾರ, ರಾಜು ರೇವಣಕರ, ಮಾಧ್ಯಮ ವಕ್ತಾರ ಜಯಂತ ಕುರಂದವಾಡ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಅವರಾದಿ, ಮಾಜಿ ಅಧ್ಯಕ್ಷ ರಾಜು ನಾಯ್ಕರ ಮುಂತಾದವರು ಉಪಸ್ಥಿತರಿದ್ದರು.