Advertisement

ಪೌರಕಾರ್ಮಿಕರದ್ದು ಮಹತ್ವದ ಸಮಾಜ ಸೇವೆ: ಮಠಂದೂರು

11:14 PM Sep 23, 2019 | sudhir |

ಪುತ್ತೂರು: ಸಾಮಾನ್ಯ ಕಾರ್ಮಿಕರಿಗಿಂತ ಭಿನ್ನವಾದ ಕೆಲಸ ಮಾಡುವ, ಜನರ ಆರೋಗ್ಯಕ್ಕಾಗಿ ಶ್ರಮಿಸುವ ಪೌರಕಾರ್ಮಿಕರದ್ದು ಮಹ ತ್ವದ ಸಮಾಜ ಸೇವೆ. ಅವರಿಗೆ ಕೇವಲ ಅನುಕಂಪವನ್ನು ತೋರದೆ ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ನಗರಸಭೆ ವತಿಯಿಂದ ಸೋಮವಾರ ಪುರಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಯಕವೇ ಕೈಲಾಸ ಎನ್ನುವ ಧ್ಯೇಯದೊಂದಿಗೆ ಸೇವೆ ಮಾಡುವ ಪೌರ ಕಾರ್ಮಿಕರ ದಿನವನ್ನು ಆಚರಿಸುವುದರೊಂದಿಗೆ ಅವರನ್ನು ಗುರುತಿಸಿ, ಕಾಳಜಿ ತೋರುವುದು ಕಾರ್ಯ ಕ್ರಮದ ಪ್ರಮುಖ ಉದ್ದೇಶ. ಅಂತಹ ಕಾರ್ಮಿಕರು ಭಗವಂತನಿಗೂ ಪ್ರೀತಿ ಪಾತ್ರರು. ಅವರ ಜತೆ ಸಮಾಜ ಇದೆ ಎನ್ನುವ ಧೈರ್ಯ ತುಂಬಬೇಕು. ಸ್ವತ್ಛ ಭಾರತ, ಶ್ರೇಷ್ಠ ಭಾರತ ಸಂಕಲ್ಪ ಈಡೇರುವಲ್ಲಿ ಪೌರ ಕಾರ್ಮಿಕರ ಪಾಲೂ ದೊಡ್ಡದಿದೆ ಎಂದರು.

ಪೌರಕಾರ್ಮಿಕರಿಗೆ ಪುರಸ್ಕಾರ
ಯಾವುದೇ ಆಡಳಿತಾತ್ಮಕ ಕೆಲಸ ಯಶಸ್ವಿಯಾಗಿ ಸಾಗಲು ಎಲ್ಲ ವರ್ಗದ ಸಿಬಂದಿಯಲ್ಲಿ ಬಾಂಧವ್ಯ, ಪ್ರೀತಿ ವಿಶ್ವಾಸ ಮುಖ್ಯ. ಈ ನಿಟ್ಟಿನಲ್ಲಿ ಪುತ್ತೂರು ನಗರಸಭೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ರಾಜ್ಯದಲ್ಲೇ ನಗರಸಭೆ ವಿಶೇಷವಾಗಿ ಗುರುತಿಸಿಕೊಳ್ಳುವಂತೆ ಆಗಬೇಕು ಎಂದರು. ಮುಂದಿನ ಪೌರಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಪೌರಕಾರ್ಮಿಕರಿಗೆ ಶಾಸಕನ ನೆಲೆಯಲ್ಲಿ ನಗದು ಪುರಸ್ಕಾರ ನೀಡಲಿದ್ದೇನೆ. ಈ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೌರಾಯುಕ್ತರು ನಡೆಸಬೇಕು ಎಂದು ಸೂಚಿಸಿದರು.

ಸಮಸ್ಯೆ ಹೇಳಿಕೊಳ್ಳಿ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ.ಕೃಷ್ಣಮೂರ್ತಿ ಮಾತನಾಡಿ, ಆರೋಗ್ಯವಂತ ಸಮಾಜ, ಪರಿಸರ ನಿರ್ಮಾಣದಲ್ಲಿ ಪೌರಕಾರ್ಮಿಕರ ಕೊಡುಗೆ ಅಭೂತಪೂರ್ವ. ಕಾರ್ಮಿಕರು ಹಿಂಜರಿಕೆ ಇಲ್ಲದೆ ಸಮಸ್ಯೆಗಳನ್ನು ಅಧಿ ಕಾರಿಗಳಲ್ಲಿ ಹೇಳಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಪತ್ರಕರ್ತ ಸಂಶುದ್ದೀನ್‌ ಸಂಪ್ಯ ಮಾತನಾಡಿ, ಸ್ವತ್ಛತೆ ಹಾಗೂ ಆರೋಗ್ಯವಂತ ಸಮಾಜ ಇಂದು ಆಂದೋಲನದ ರೂಪ ಪಡೆದಿರುವುದರಿಂದ ಎಲ್ಲರ ಜವಾ ಬ್ದಾರಿಯೂ ಹೆಚ್ಚಿದೆ. ಮುಖ್ಯವಾಗಿ ಪೌರ ಕಾರ್ಮಿಕರು ಆರೋಗ್ಯ ಕಾಪಾಡುವ ಸೈನಿಕರು. ಪೌರಕಾರ್ಮಿಕರದ್ದು ತಿರಸ್ಕೃತ ಕೆಲಸ ಎನ್ನುವ ಕೀಳರಿಮೆ ಸರಿಯಲ್ಲ. ಇದು ದೊಡ್ಡ ಕೆಲಸ ಎಂಬುದನ್ನು ಪ್ರಧಾನಿಯೇ ಕಸ ಗುಡಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

Advertisement

ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕುರಿತೂ ಕಾಳಜಿ ವಹಿಸ ಬೇಕು. ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಘೋಷಣೆ, ಜಾಗೃತಿ ಚರ್ಚೆಗಳನ್ನು ನಡೆಸಬೇಕು. ಕಸ ವಿಂಗಡಣೆಯ ಆವಶ್ಯಕತೆಯ ಕುರಿತು ಜನರಿಗೆ ಮನವರಿಕೆ ಮಾಡಬೇಕು ಎಂದರು.

ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸಹಾಯಕ ಅಭಿಯಂತರ ಅರುಣ್‌ ಕುಮಾರ್‌ ಉಪಸ್ಥಿತರಿದ್ದರು. ಪೌರ ಕಾರ್ಮಿಕರ ಸಂಘದ ರವಿ ಸ್ವಾಗತಿಸಿ, ಪರಿಸರ ಅಭಿಯಂತರ ಗುರುಪ್ರಸಾದ್‌ ವಂದಿಸಿದರು. ನಗರಸಭಾ ಕಂದಾಯ ನಿರೀಕ್ಷಕ ರಾಧಾಕೃಷ್ಣ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next