ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “1955ರ ಪೌರತ್ವ ತಿದ್ದುಪಡಿ ವಿಧೇಯಕ’ಕ್ಕೆ (ಸಿಎಬಿ) ಬುಧವಾರ ರಾಜ್ಯಸಭೆಯ ಅನುಮೋದನೆಯೂ ದೊರಕಿದೆ. ತಿದ್ದುಪಡಿ ಮಸೂದೆ ಪರವಾಗಿ 125 ಮತ ಬಂದಿದ್ದರೆ, ವಿರೋಧವಾಗಿ 105 ಮತಗಳು ಬಂದವು. ಸೋಮವಾರವೇ ಲೋಕಸಭೆ ಈ ಮಸೂದೆಗೆ ಒಪ್ಪಿಗೆ ನೀಡಿದ್ದು, ಇನ್ನು ರಾಷ್ಟ್ರಪತಿಗಳ ಅಂಕಿತವಷ್ಟೇ ಬಾಕಿ ಉಳಿದಿದೆ.
ಲೋಕಸಭೆಯಲ್ಲಿ ಭಾರೀ ಬಹುಮತ ಹೊಂದಿರುವ ಎನ್‌ಡಿಎ ಸರ್ಕಾರ ಸೋಮವಾರ ಮಧ್ಯರಾತ್ರಿ ಅನುಮೋದನೆ ಪಡೆದಿತ್ತು. ಆದರೆ, ರಾಜ್ಯಸಭೆಯಲ್ಲಿ ಸಂಖ್ಯಾಬಲ ಕೊರತೆ ಎದುರಿಸುತ್ತಿದ್ದ ಸರ್ಕಾರ, ಮಂಗಳವಾರ ಸಮಾನ ಮನಸ್ಕ ಪಕ್ಷಗಳ ಜತೆ ಮಾತಕತೆ ನಡೆಸಿ, ಬುಧವಾರ ಮಸೂದೆ ಮಂಡಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ತಿದ್ದುಪಡಿ ಮಸೂದೆ ಮಂಡಿಸಿ, ಇದರ ಬಗ್ಗೆ ಯಾರೂ ಹೆದರಬೇಕಾಗಿಲ್ಲ ಎಂದು ಭರವಸೆ ನೀಡಿದ್ದರು.
ಬುಧವಾರ ರಾತ್ರಿ 9ರ ವೇಳೆಗೆ ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆಗೆ ಅನುಮೋದನೆ ಸಿಕ್ಕಿತು. ಲೋಕಸಭೆಯಲ್ಲಿ ಈ ವಿಧೇಯಕಕ್ಕೆ 311-80 ಅಂತರದ ಸಮ್ಮತಿ ದೊರಕಿತ್ತು. ಇನ್ನು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ 2014ರ ಡಿ. 31ಕ್ಕೂ ಮುನ್ನ ಭಾರತಕ್ಕೆ ಬಂದು ನೆಲೆಸಿರುವ ಆ ದೇಶಗಳ ಹಿಂದೂಗಳು, ಸಿಖVರು, ಜೈನರು, ಕ್ರೈಸ್ತರು ಸೇರಿದಂತೆ ಆ ದೇಶಗಳ ಎಲ್ಲ “ಅಲ್ಪಸಂಖ್ಯಾತ’ರಿಗೆ ಭಾರತೀಯ ಪೌರತ್ವ ಸಿಗಲಿದೆ.
ಇದರ ಜೊತೆಗೆ, ಆ ಮೂರೂ ದೇಶಗಳಿಂದ ನಿರಾಶ್ರಿತರಾಗಿ ಬಂದವರು ಭಾರತದಲ್ಲಿ 12 ವರ್ಷ ನೆಲೆಸಿದ್ದರೆ ಮಾತ್ರ ಇಲ್ಲಿನ ಪೌರತ್ವ ನೀಡಬೇಕೆಂದು 1955ರ ಪೌರತ್ವ ಕಾಯ್ದೆಯಲ್ಲಿದ್ದ ನಿಯಮವನ್ನು 5 ವರ್ಷಕ್ಕೆ ಇಳಿಸಿರುವ ಮಹತ್ವದ ಅಂಶಕ್ಕೂ ಸಂಸತ್ತಿನ ಅನುಮೋದನೆ ಸಿಕ್ಕಂತಾಗಿದೆ.
ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡನೆ ಮಾಡುವ ಮುನ್ನವೇ ಗುವಾಹಟಿ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು ಹಿಂಸಾಚಾರಕ್ಕೆ ತಿರುಗಿದೆ.
ಅಸ್ಸಾಂ, ಗುವಾಹಟಿ, ತ್ರಿಪುರಾಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಬೆಳಗ್ಗೆ 140 ಯೋಧರನ್ನು ಕಳುಹಿಸಿತ್ತು. ಆದರೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಐದು ಸಾವಿರ ಯೋಧರನ್ನು ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ.