ಹೊಸದಿಲ್ಲಿ: ನೆರೆರಾಷ್ಟ್ರಗಳ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಉದ್ದೇಶ ವಿರುವ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. ಮಂಡನೆಯ ಅನಂತರ ಚರ್ಚೆ ನಡೆದು ಅಂಗೀಕಾರಗೊಳ್ಳುವ ಸಾಧ್ಯತೆಯಿದೆ.
ಪಾಕಿಸ್ಥಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ 2014ರ ಡಿ.31ರೊಳಗೆ ಭಾರತಕ್ಕೆ ಬಂದು ನೆಲೆಸಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತ ಧರ್ಮೀಯರಿಗೆ ಭಾರತದ ಪೌರತ್ವ ನೀಡುವ ಉದ್ದೇಶವನ್ನು ಈ ತಿದ್ದುಪಡಿ ಒಳಗೊಂಡಿದೆ.
ವಿಧೇಯಕಕ್ಕೆ ಈಶಾನ್ಯ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ. ಅಲ್ಲಿ ಜನರು, ಸಂಘ-ಸಂಸ್ಥೆಗಳು ಕಿಡಿಕಾರಿದ್ದು, ಅಸ್ಸಾಂನಲ್ಲಿ ನೆಲೆಯೂರಿರುವ ವಿದೇಶಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು 1971ರ ಮಾ. 24ರಂದು ಕೊನೆಯ ದಿನವನ್ನಾಗಿ ಪರಿಗಣಿಸಲಾಗಿತ್ತು. ಈಗ, ಈ ವಿಧೇಯಕದಿಂದಾಗಿ, ವಲಸಿಗರ ಗಡಿಪಾರು ಪ್ರಕ್ರಿಯೆಗೆ ಸಾರ್ಥಕತೆ ಇಲ್ಲದಂತಾಗುತ್ತದೆ ಎಂದು ಹೇಳಿವೆ. ಈಶಾನ್ಯ ವಿದ್ಯಾರ್ಥಿಗಳ ಒಕ್ಕೂಟವು ಈಶಾನ್ಯ ಪ್ರಾಂತ್ಯದಲ್ಲಿ ಡಿ.10ರಂದು 11 ಗಂಟೆಗಳ ಬಂದ್‌ಗೆ ಕರೆ ಕೊಟ್ಟಿದೆ.
ದೇಶ ವಿಭಜನೆಯ ವೇಳೆ ದೂರವಾಗಿ ಅನಂತರ ಭಾರತಕ್ಕೆ ಬಂದಿರುವವರಿಗೆ ಪೌರತ್ವ ನೀಡುವುದು ಭಾರತದ ಬಾಧ್ಯತೆ. ಅದನ್ನು ಈಗ ನೆರವೇರಿಸಲಾಗುತ್ತಿದೆ.
– ರಾಮ್ ಮಾಧವ್, ಬಿಜೆಪಿ ನಾಯಕ
ಈ ಸರಕಾರ, ಧರ್ಮದ ಆಧಾರದಲ್ಲಿ ದೇಶ ಒಡೆದ ಮೊಹಮ್ಮದ್ ಅಲಿ ಜಿನ್ನಾರ ಆಶಯವನ್ನು ಸಾಕಾರಗೊಳಿಸಲು ಹೊರಟಂತಿದೆ.
– ಶಶಿ ತರೂರ್, ಕಾಂಗ್ರೆಸ್ ಸಂಸದ