Advertisement
ಈಗಾಗಲೇ ರಾಜ್ಯದ 22 ಲಕ್ಷ ಮನೆಗಳನ್ನು ಬಿಜೆಪಿ ಕಾರ್ಯಕರ್ತರು ಸಂಪರ್ಕಿಸಿದ್ದಾರೆ. ಆದರೆ ಮಿಸ್ಡ್ಕಾಲ್ ಅಭಿಯಾನದಲ್ಲಿ ನಿರೀಕ್ಷೆಯಷ್ಟು ಫಲ ಸಿಕ್ಕಿಲ್ಲ.ಪೌರತ್ವ ತಿದ್ದುಪಡಿ ಕಾಯ್ದೆಗೆ ಬಹಿರಂಗ ಸಭೆಯ ಮೂಲಕವೇ ರಾಜ್ಯದ ವಿವಿಧ ಕಡೆಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ ರಾಜ್ಯ ಬಿಜೆಪಿ ಇದ್ಯಾವುದನ್ನು ಲೆಕ್ಕಿಸದೇ ಕಾಯ್ದೆಯ ಪರವಾಗಿ ವಿವಿಧ ಆಯಾಮಗಳಲ್ಲಿ ಸಮಾಜದ ವಿವಿಧ ಸ್ತರಗಳ ಜನರನ್ನು ತಲುಪುವ ಪ್ರಯತ್ನವನ್ನು ನಡೆಸುತ್ತಲೇ ಇದೆ.
Related Articles
ಭಾರತ ಮಾತಾ ಪೂಜಾ ಕಾರ್ಯಕ್ರಮದಡಿದಲ್ಲಿ ಸಾರ್ವಜನಿಕವಾಗಿ ಭಾರತ ಮಾತೆಯ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ, ದೀಪ ಬೆಳಗಿಸಲಾಗುತ್ತದೆ. ಸಂಜೆ ಅಥವಾ ರಾತ್ರಿ ವೇಳೆಗೆ ಹೆಚ್ಚಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಿಜೆಪಿಯಿಂದ ರಾಜ್ಯದ 10,316 ಕಡೆಗಳಲ್ಲಿ ಭಾರತ ಮಾತಾ ಪೂಜಾ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖಂಡರು ಅಥವಾ ಸಿಎಎ ಬಗ್ಗೆ ಅಧ್ಯಯನ ನಡೆಸಿದವರು ಕಾಯ್ದೆಯ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದ್ದಾರೆ.
Advertisement
ನಿರೀಕ್ಷಿತ ಬೆಂಬಲ ಬಂದಿಲ್ಲಮಿಸ್ಡ್ ಕಾಲ್ ಮೂಲಕ ಸಿಎಎಗೆ ಬೆಂಬಲ ನೀಡುವ ಅಭಿಯಾನವನ್ನು ಬಿಜೆಪಿ ಅಧಿಕೃತವಾಗಿ ಆರಂಭಿಸಿತ್ತು. ಆದರೆ ನಿರೀಕ್ಷೆಯಷ್ಟು ಬೆಂಬಲ ಬಂದಿಲ್ಲ. ಜ.22ರ ವರೆಗೆ 11,70,949 ಮಿಸ್ಡ್ ಕಾಲ್ ಮಾತ್ರ ಬಂದಿರುತ್ತದೆ. ಸಹಿ ಸಂಗ್ರಹ ಅಭಿಯಾನ
ಸಿಎಎ ಪರವಾಗಿ ಒಂದು ಕೋಟಿ ಸಹಿ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸುವ ಉದ್ದೇಶದಿಂದ ಬಿಜೆಪಿ ಸಹಿ ಸಂಗ್ರಹ ಅಭಿಯಾನವನ್ನು ಈಗಾಗಲೇ ಆರಂಭಿಸಿದೆ. ಈವರೆಗೂ 6,93,481 ಜನರಿಂದ ಮಾತ್ರ ಸಹಿ ಸಂಗ್ರಹಿಸಲು ಸಾಧ್ಯವಾಗಿದೆ. ಬೆಂಗಳೂರಿನಲ್ಲಿ ಈ ಅಭಿಯಾನವನ್ನು ಇನ್ನೂ ಆರಂಭಿಸಿಯೇ ಇಲ್ಲ. ಕೆಲವೊಂದು ಜಿಲ್ಲೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಇದರ ಮುಂದುವರಿದ ಭಾಗವಾಗಿ ಸಿಎಎ ಬೆಂಬಲಿಸಿ ಕೇಂದ್ರ ಸರಕಾರಕ್ಕೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಪತ್ರ ನೀಡುವ ಅಭಿಯಾನವನ್ನು ಬಿಜೆಪಿ ರೂಪಿಸಿತ್ತು. ಈವರೆಗೆ 1,59,264 ಧನ್ಯವಾದ ಪತ್ರವನ್ನು ಕರ್ನಾಟಕದಿಂದ ಬರೆಯಲಾಗಿದೆ. ಅಭಿಯಾನದಲ್ಲಿ ಶಿವಮೊಗ್ಗ ಮುಂದೆ!
ಮನೆ ಮನೆ ಅಭಿಯಾನ, ಭಾರತ ಮಾತಾ ಪೂಜಾ ಕಾರ್ಯಕ್ರಮ, ಧನ್ಯವಾದ ಪತ್ರ, ಮಿಸ್ಡ್ಕಾಲ್ ಅಭಿಯಾನ ಹೀಗೆ ಎಲ್ಲದರಲ್ಲೂ ಶಿವಮೊಗ್ಗ ಜಿಲ್ಲಾ ಬಿಜೆಪಿ ಮುಂದಿದೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಘಟಕವು ಅಭಿಯಾನದಲ್ಲಿ ನಿರೀಕ್ಷೆಯಷ್ಟು ಸಕ್ರಿಯವಾಗಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲೂ ಮನೆ ಮನೆ ಅಭಿಯಾನ ಅಷ್ಟೇನೂ ವ್ಯಾಪಕವಾಗಿ ನಡೆದಿಲ್ಲ ಎಂಬುದು ಬಿಜೆಪಿಯ ಅಂಕಿಅಂಶಗಳಿಂದಲೇ ತಿಳಿಯುತ್ತದೆ. ಬಿಜೆಪಿ ಸಿಎಎ ಪರವಾಗಿ ರೂಪಿಸಿರುವ ಅಭಿಯಾನ ವ್ಯವಸ್ಥಿತವಾಗಿ ನಡೆಯುತ್ತಿದೆ. ಈಗಾಗಲೇ 22 ಲಕ್ಷ ಮನೆಗಳನ್ನು ತಲುಪಿದ್ದೇವೆ. ಆದಷ್ಟು ಬೇಗ 30 ಲಕ್ಷ ಮನೆಗಳನ್ನು ತಲುಪುವ ಗುರಿಯನ್ನು ಮುಟ್ಟಲಿದ್ದೇವೆ. ಸಮಾವೇಶ ಮತ್ತು ಜಾಗೃತಿ ಸಭೆಗಳು, ವಿಚಾರಗೋಷ್ಠಿಗಳು ನಡೆಯುತ್ತಲೇ ಇವೆ.
-ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ