Advertisement

ಸಹಜ ಸ್ಥಿತಿಯತ್ತ ವಿವಿಗಳು : ಪರಿಸ್ಥಿತಿ ಬಗ್ಗೆ ಕೇಂದ್ರದ ವಿವರಣೆ

09:58 AM Dec 18, 2019 | Team Udayavani |

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿಸಿ ದೇಶದ 42 ವಿಶ್ವವಿದ್ಯಾಲಯಗಳಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಗಳು ಎರಡು ವಿವಿ ಹೊರತುಪಡಿಸಿ ಬಹುತೇಕ ಕಡೆ ನಿಯಂತ್ರಣಕ್ಕೆ ಬಂದಿವೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲೀಗಢ ವಿವಿಗಳಲ್ಲಿ ಮಾತ್ರ ಪ್ರಕ್ಷುಬ್ಧತೆ ಇನ್ನೂ ಮುಂದುವರಿದಿದೆ. ಶೀಘ್ರದಲ್ಲಿಯೇ ಅಲ್ಲಿ ಶಾಂತಿ ನೆಲೆಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಲವು ವಿವಿಗಳಲ್ಲಿ ವಿದ್ಯಾರ್ಥಿಗಳು ಕಾಯ್ದೆ ವಿರುದ್ಧ ಮೌನವಾಗಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಪರಿಸ್ಥಿತಿ ಸುಧಾರಣೆ: ಪೌರತ್ವ ಕಾಯ್ದೆ ಸಂಬಂಧಿಸಿ ಅಸ್ಸಾಂ, ಪಶ್ಚಿಮ ಬಂಗಾಲಗಳಲ್ಲಿ ಹಲವು ದಿನಗಳ ಹಿಂದೆಯೇ ಆರಂಭವಾಗಿ, ಇತ್ತೀಚೆಗೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಿಂಸಾಚಾರ ಪರಿಸ್ಥಿತಿ ಬಹುತೇಕ ತಿಳಿಗೊಂಡಿದೆ. ಮಂಗಳವಾರ ಅಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದಿವೆ.

ಅಸ್ಸಾಂನಲ್ಲಿ ಸಮೂಹ ಸತ್ಯಾಗ್ರಹ ಹೆಸರಿನಲ್ಲಿ ಆಲ್‌ ಅಸ್ಸಾಂ ಸ್ಟೂಡೆಂಟ್ಸ್‌ ಸಂಘಟನೆ (ಎಎಎಸ್‌ಯು) ಪ್ರತಿಭಟನೆ ನಡೆಸಿದೆ. ಪಶ್ಚಿಮ ಬಂಗಾಲದ ಅಲ್ಲಲ್ಲಿ ರಸ್ತೆ ತಡೆ ಪ್ರಕರಣಗಳು ನಡೆದಿದ್ದು, ಪ್ರಯಾಣಿ ಕರಿಗೆ ಅನನುಕೂಲ ಉಂಟಾಗಿದೆ. ಆದರೆ ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದು ಮಾಡಿದ್ದರಿಂದ ಜನರಿಗೆ ತೊಂದರೆಯಾಯಿತು.

ನುಗ್ಗಿದ ಪೊಲೀಸರು: ಜಾಮಿಯಾ ಮಿಲಿಯಾ ಕ್ಯಾಂಪಸ್‌ಗೆ ಪೊಲೀಸರು ನುಗ್ಗಿ ನಡೆಸಿದ ದಾಳಿ ವಿವಾದ ಎಬ್ಬಿಸಿರುವಾಗಲೇ, ಕಾಯ್ದೆ ವಿರೋಧಿಸಿ ಮದ್ರಾಸ್‌ ವಿವಿ ಆವರಣದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ನುಗ್ಗಿದ್ದಾರೆ. ಹೀಗಾಗಿ ಅಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಮತ್ತೂಂದೆಡೆ, ತಮಿಳುನಾಡಿನ ವಿಪಕ್ಷ ಡಿಎಂಕೆಯು, ಪಕ್ಷದ ನಾಯಕ ಸ್ಟಾಲಿನ್‌ ನೇತೃತ್ವದಲ್ಲಿ ಚೆನ್ನೈನಲ್ಲಿ ಪೌರತ್ವ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿತು.

ಪ್ರಧಾನಿಗೆ ತಿರುಗೇಟು: ‘ಪ್ರತಿಭಟನಾಕಾರರು ಹಾಗೂ ಜನಸಾಮಾನ್ಯರ ನಡುವಿನ ವ್ಯತ್ಯಾಸವನ್ನು ಅವರು ಹಾಕಿರುವ ಬಟ್ಟೆಗಳ ಆಧಾರದಲ್ಲಿ ಅಥವಾ ಅವರು ಸೇವಿಸುವ ಆಹಾರದ ಮೇರೆಗೆ ನಿರ್ಧರಿಸುವುದು ಸರಿಯಲ್ಲ” ಎಂದು ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತ್ಯುತ್ತರ ನೀಡಿದ್ದಾರೆ.

Advertisement

ಇತ್ತೀಚೆಗೆ ಜಾರ್ಖಂಡ್‌ನ‌ಲ್ಲಿ ನಡೆದ ಚುನಾವಣ ಸಭೆಯಲ್ಲಿ ಮೋದಿ, ‘ಪೌರತ್ವ ಕಾಯ್ದೆ ವಿರೋಧಿಸಿ ವಾಹನಗಳಿಗೆ ಬೆಂಕಿ ಇಡುತ್ತಿರುವವರು ಯಾರೆಂದು ಅವರು ಹಾಕಿರುವ ಬಟ್ಟೆಯಿಂದಲೇ ತಿಳಿಯಬಹುದು’ ಎಂದು ಹೇಳಿದ್ದರು. ಬಂಗಾಲದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರಗಳನ್ನು ಕ್ಷುಲ್ಲಕ ಘಟನೆ ಎಂದು ಬಣ್ಣಿಸಿದ್ದಾರೆ.

ನಿರಾಶ್ರಿತರ ಸಂಭ್ರಮ
ಪಾಕಿಸ್ಥಾನದಿಂದ ಆಗಮಿಸಿ ಗುಜರಾತ್‌ನಲ್ಲಿ ನೆಲೆಸಿರುವ ಹಿಂದೂಗಳ ಸಮುದಾಯವೊಂದು ಮೆಹ್ಸಾನಾದಲ್ಲಿ ಸಂಭ್ರಮಾಚರಣೆ ನಡೆಸಿವೆ. ವರ್ಷಗಳ ಹಿಂದೆಯೇ ಗುಜರಾತ್‌ಗೆ ಆಗಮಿಸಿ, ಈಗ ಮೆಹ್ಸಾನಾ, ಅಹ್ಮದಾ ಬಾದ್‌, ಬನಸ್ಕಾಂತಾ ಜಿಲ್ಲೆಗಳಲ್ಲಿ ನೆಲೆಸಿರುವ ಈ ಹಿಂದೂ ಕುಟುಂಬಗಳ ಸುಮಾರು 500 ಸದಸ್ಯರು, ಮೆಹ್ಸಾನಾಕ್ಕೆ ಆಗಮಿಸಿ, ಅಲ್ಲಿನ ಬಿಜೆಪಿ ರಾಜ್ಯಸಭಾ ಸದಸ್ಯ ಜುಗಲ್‌ಜೀ ಠಾಕೂರ್‌ ನಿವಾಸದಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತನಿಖಾ ಸಮಿತಿಗೆ ‘ಸುಪ್ರೀಂ’ ನಕಾರ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಹಾಗೂ ದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಪೌರತ್ವ ವಿರೋಧಿ ಪ್ರತಿಭಟನೆಗಳ ವೇಳೆ, ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದಿರುವ ಘರ್ಷಣೆಗಳ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ತನಿಖಾ ಸಮಿತಿ ನೇಮಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸರ್ವೋತ್ಛ ನ್ಯಾಯಾಲಯ ತಳ್ಳಿಹಾಕಿದೆ.

ಅಲ್ಲದೆ, ಈ ರೀತಿಯ ಸಮಿತಿಗಳನ್ನು ಹಿಂಸಾಚಾರ ನಡೆದಿರುವ ಆಯಾ ರಾಜ್ಯಗಳ ಹೈಕೋರ್ಟ್‌ಗಳು ನೇಮಿಸುವುದು ಉಚಿತವಾಗಿದ್ದು, ಅರ್ಜಿದಾರರು ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸುವಂತೆ ಸಿಜೆಐ ಎಸ್‌.ಎ. ಬೋಬ್ಡೆ, ನ್ಯಾ| ಬಿ.ಆರ್‌. ಗವಾಯಿ ಹಾಗೂ ನ್ಯಾ| ಸೂರ್ಯಕಾಂತ್‌ ಅವರುಳ್ಳ ಪೀಠ ಸೂಚಿಸಿದೆ.

‘ಹಿಂಸಾಚಾರದ ಘಟನೆಗಳು ದೇಶದ ಅನೇಕ ಕಡೆ ಜರುಗಿವೆ. ಹಾಗಾಗಿ, ಆ ಪ್ರಕರಣಗಳ ತನಿಖೆಯನ್ನು ನಡೆಸಲು ಸಮಿತಿ ನೇಮಿಸುವುದು, ಬಿಡುವುದು ಆಯಾ ರಾಜ್ಯಗಳ ಹೈಕೋರ್ಟ್‌ಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ, ಅರ್ಜಿದಾರರು ಈ ಕುರಿತಂತೆ ಹೈಕೋರ್ಟ್‌ಗಳಲ್ಲಿ ಮನವಿ ಸಲ್ಲಿಸಬೇಕು. ಅಲ್ಲಿನ ನ್ಯಾಯ ಪೀಠಗಳು ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರಗಳ ಪ್ರತಿಕ್ರಿಯೆಗಳನ್ನು ಪಡೆದು ತನಿಖಾ ಸಮಿತಿಯ ಬಗ್ಗೆ ನಿರ್ಧರಿಸಲಿವೆ’ ಎಂದು ನ್ಯಾಯಪೀಠ ಹೇಳಿತು.

ಇದೇ ವೇಳೆ, ತೆಲಂಗಾಣದಲ್ಲಿ ಇತ್ತೀಚೆಗೆ ನಡೆದಿದ್ದ ಎನ್‌ಕೌಂಟರ್‌ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್‌ ತನಿಖಾ ಸಮಿತಿ ನೇಮಿಸಿದಂತೆಯೇ ವಿದ್ಯಾರ್ಥಿಗಳ ಪ್ರತಿಭಟನೆಗಳ ಪ್ರಕರಣಗಳಿಗೂ ತನಿಖಾ ಸಮಿತಿ ನೇಮಿಸಬೇಕು ಎಂದು ಕೇಳಲಾಗಿದ್ದ ಮನವಿಗೆ ಉತ್ತರಿಸಿದ ನ್ಯಾಯಪೀಠ, ‘ತೆಲಂಗಾಣ ಪ್ರಕರಣವನ್ನು ಈ ಪ್ರಕರಣಗಳಿಗೆ ತಳುಕು ಹಾಕಲಾಗದು’ ಎಂದಿತು.

ಇದೇ ವೇಳೆ, ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠ, ‘ನೀವು ಶಾಂತಿಯುತವಾಗಿ ಪ್ರತಿಭಟನೆ ನಡೆಸಬಹುದು. ಆದರೆ, ನಿಮಗೆ ಬಸ್‌ಗಳಿಗೆ ಬೆಂಕಿ ಇಡಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಿ ಎಂದು ಯಾರು ಹೇಳಿದ್ದರು’ ಎಂದು ತರಾಟೆಗೆ ತೆಗೆದುಕೊಂಡಿತು.

ಜಲಿಯನ್‌ ನೆನಪಿಸಿದ ಹಿಂಸಾಚಾರ: ಠಾಕ್ರೆ
ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಯು) ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವುದು ಜಲಿಯನ್‌ವಾಲಾ ಬಾಗ್‌ ದುರ್ಘ‌ಟನೆಯನ್ನು ನೆನಪಿಸುವಂತಿತ್ತು” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಕಾಣದ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಯುವಜನತೆಯನ್ನು ಎದುರುಹಾಕಿಕೊಂಡು ಯಾವುದೇ ದೇಶದಲ್ಲಿ ಸ್ಥಿರ ಸಮಾಜ ಕಟ್ಟಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಸಮಾಜಘಾತುಕ ಶಕ್ತಿಗಳನ್ನು ದಮನ ಮಾಡುವಲ್ಲಿ ಕೇಂದ್ರ ಎಚ್ಚರಿಕೆಯ ಹೆಜ್ಜೆಯಿಡಬೇಕು ಎಂದು ಆಗ್ರಹಿಸಿದ್ದಾರೆ.

ಪಾಕ್‌ಗೆ ತಿರುಗೇಟು
ಭಾರತದಲ್ಲಿ ಜಾರಿಯಾಗಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಗೊತ್ತುವಳಿಗೆ ಪಾಕಿಸ್ಥಾನದ ಸಂಸತ್ತು ಸೋಮವಾರ ಅಂಗೀಕಾರ ನೀಡಿರುವುದಕ್ಕೆ ಭಾರತ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, ‘ಪಾಕಿಸ್ಥಾನವು ತನ್ನ ದೇಶದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ತೋರುತ್ತಿರುವ ನಿಷ್ಕಾಳಜಿಯನ್ನು ಮರೆಮಾಚಲು ಮಾಡಿರುವ ಪ್ರಯತ್ನವಾಗಿದೆ’ ಎಂದಿದೆ.

ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಪಾಕಿಸ್ಥಾನದ ಉಗ್ರರು ಹಾಗೂ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಕೈವಾಡವಿದೆ.
— ಶಂಕರ ಲಾಲ್ವಾನಿ, ಇಂದೋರ್‌ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next