Advertisement

ನಿಲ್ಲದ ಪ್ರತಿಭಟನೆ,ಹಿಂಸೆ: ದಿಲ್ಲಿ, ಪಶ್ಚಿಮ ಬಂಗಾಲ, ಈಶಾನ್ಯ ರಾಜ್ಯದಲ್ಲಿ ನಿಲ್ಲದ ಕೋಪ

10:24 AM Dec 15, 2019 | Team Udayavani |

ಹೊಸದಿಲ್ಲಿ: ನೂತನವಾಗಿ ಜಾರಿಗೊಂಡಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಶುರುವಾಗಿದ್ದ ಪ್ರತಿಭಟನೆಗಳು ಹಾಗೂ ಹಿಂಸಾಚಾರ, ರಾಷ್ಟ್ರ ರಾಜಧಾನಿ ದಿಲ್ಲಿ, ಪಶ್ಚಿಮ ಬಂಗಾಲ, ತಮಿಳುನಾಡಿಗೂ ಆವರಿಸಿವೆ. ಮತ್ತೂಂದೆಡೆ, ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ 12 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ ಪ್ರಧಾನಿ ಶಿಂಜೋ ಅಬೆ ಭೇಟಿ ಕೂಡ ರದ್ದಾಗಿದೆ.

Advertisement

ಹೊಸದಿಲ್ಲಿಯಲ್ಲಿ: ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದಿರುವ ನೂತನ ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು, ರಾಜಧಾನಿ ಹೊಸದಿಲ್ಲಿಗೂ ವ್ಯಾಪಿಸಿದೆ. ಕಾಯ್ದೆಯನ್ನು ವಿರೋಧಿಸಿ, ಶುಕ್ರವಾರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾ ಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಆಗಮಿಸಿದ್ದ ಪೊಲೀಸರೊಂದಿಗೆ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳು ಮಾತಿನ ಚಕಮಕಿ ನಡೆಸಿದರಲ್ಲದೆ, ಒಂದು ಹಂತದಲ್ಲಿ ಕೈ ಮಿಲಾಯಿಸಿದರು. ಈ ಹಂತದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಚಾರ್ಜ್‌ ನಡೆಸಿದರು.

ಬಂಗಾಲದಲ್ಲಿ ವ್ಯಾಪಕ ಹಿಂಸೆ: ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿರುವ ಬೆಲ್ಡಾಂಗಾ ರೈಲು ನಿಲ್ದಾಣವನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಅವರನ್ನು ತಡೆಯಲು ಬಂದ ರೈಲ್ವೇ ಸುರಕ್ಷಾ ಪಡೆಯ ಸಿಬಂದಿಯ ಮೇಲೂ ಹಲ್ಲೆ ಮಾಡಲಾಗಿದೆ. ಹೌರಾ ಜಿಲ್ಲೆಯ ಉಲುಬೇರಿಯಾ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರತಿಭಟನ ಕಾರರು ರೈಲು ತಡೆ ಚಳವಳಿ ನಡೆಸಿದರು. ಪೂರ್ವ ಮಿಡ್ನಾಪುರ ದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಾಂತನ್‌ ಬಸು ಅವರ ಕಾರನ್ನು ಉದ್ರಿಕ್ತರು ಜಖಂಗೊಳಿಸಿದ್ದಾರೆ.

ಪ್ರವಾಸ ರದ್ದು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅರುಣಾಚಲ ಪ್ರದೇಶ ಹಾಗೂ ಮೇಘಾಲಯ ರಾಜ್ಯಗಳ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಪೂರ್ವನಿಗದಿಯಂತೆ ಅವರು ರವಿವಾರ, ಸೋಮವಾರದಂದು ಈ ರಾಜ್ಯಗಳಿಗೆ ಭೇಟಿ ನೀಡಬೇಕಿತ್ತು.

ಅಸ್ಸಾಂ ಸಿಎಂ ಎಚ್ಚರಿಕೆ: ಅಸ್ಸಾಂನಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಎಚ್ಚರಿಕೆ ನೀಡಿರುವ ಅಲ್ಲಿನ ಸಿಎಂ ಸರ್ಬಾನಂದ ಸೊನೊವಾಲ್‌, ವಿಧ್ವಂಸಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ಹೇಳಿದ್ದಾರೆ.

Advertisement

ಉಲ್ಫಾ ಎಚ್ಚರಿಕೆ: ಪ್ರತಿಭಟನೆಗಳನ್ನು ಹತ್ತಿಕ್ಕಲು ಯತ್ನಿಸಿದರೆ, ಅಸ್ಸಾಂ ಸರಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಉಲ್ಫಾ ಉಗ್ರವಾದಿಗಳ ಸಂಧಾನ ವಿರೋಧಿ ಪಾಳಯ ಎಚ್ಚರಿಕೆ ನೀಡಿದೆ.

ಇದೇ ವೇಳೆ ಅರುಣಾಚಲ ಪ್ರದೇಶದಲ್ಲಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಕಾಯ್ದೆ ವಿರುದ್ಧ ಪ್ರತಿಭಟಿಸಿದ ಕಾರಣಕ್ಕಾಗಿ 100 ಮಂದಿ ಯನ್ನು ವಶಕ್ಕೆ ಪಡೆಯಲಾಗಿದೆ. ಶಿಲ್ಲಾಂಗ್‌ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿ ಬುಧವಾರದಿಂದ ಜಾರಿಗೊಳಿಸಲಾಗಿದ್ದ ಕರ್ಫ್ಯೂವನ್ನು ಸಡಿಲಿಸಲಾಗಿದೆ.

ಶಿವಸೇನೆ ಟೀಕೆ: ‘ಭಾರತದಲ್ಲಿ ಹಿಂದೂಗಳನ್ನು ರಕ್ಷಿಸಲು ಇರುವ ಏಕೈಕ ಆಸರೆ ಎಂಬಂತೆ ಕೇಂದ್ರ ಸರಕಾರ ವರ್ತಿಸುತ್ತಿದೆ. ಹೊಸ ಪೌರತ್ವ ಕಾಯ್ದೆಯಿಂದ ಅನಾವಶ್ಯಕವಾದ ಯಾತನೆ ಯನ್ನು ನೀಡುವ ಮೂಲಕ ಕೇಂದ್ರ ಸರಕಾರ ಯಾವ ರೀತಿಯ ರಾಜಕಾರಣ ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಶಿವಸೇನೆ ಹೇಳಿದೆ.

ಗಮನಿಸುತ್ತಿದ್ದೇವೆ: ಭಾರತದಲ್ಲಿ ಹೊಸ ಪೌರತ್ವ
ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ವಿಶ್ವಸಂಸ್ಥೆ ಗಮನಿಸುತ್ತಿದೆ. ಸದ್ಯದಲ್ಲೇ ಮಾನವ ಹಕ್ಕುಗಳಿಗೆ ಯಾವುದೇ ಚ್ಯುತಿಗೊಳ್ಳದಂತೆ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಗುಟೆರೆಸ್‌ ಹೇಳಿದ್ದಾರೆ.

ಪಾಕಿಸ್ಥಾನದಿಂದ ಮತ್ತೆ ಟೀಕೆ: ಇಮ್ರಾನ್‌ ಖಾನ್‌ ಅವರ ಆಡಳಿತದಲ್ಲಿ ಪಾಕಿಸ್ಥಾನದ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ತೋರಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ಹೇಳಿಕೆಗೆ ಟೀಕಿಸಿ ರುವ ಪಾಕಿ ಸ್ಥಾನ, ಭಾರತದ ಹೊಸ ಪೌರತ್ವ ಕಾಯ್ದೆ ಯನ್ನು ಅಂತಾರಾಷ್ಟ್ರೀಯ ನಾಯಕರು ಹಾಗೂ ಖುದ್ದು ಭಾರತದ ನಾಯಕರೇ ಅಸಾಂವಿಧಾನಿಕ ಎಂದು ಕರೆದಿದ್ದಾರೆ. ಇದು ಮುಸ್ಲಿಂ ವಿರೋಧಿ ಎಂದು ಹೇಳಲಾಗಿದೆೆ ಎಂದಿದೆ. ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಟೀಕೆ ಮಾಡಿದ್ದ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಟ್ವೀಟ್‌ಗೆ ತಿರುಗೇಟು ನೀಡಿದ್ದರು.

ವಿವಾದಾತ್ಮಕ ಹೇಳಿಕೆ: ‘ವಿಭಜನೆ ಪ್ರಜಾಪ್ರಭುತ್ವ’ ಇಷ್ಟವಿರದವರು ಉತ್ತರ ಕೊರಿಯಾಕ್ಕೆ ಹೋಗಬಹುದು ಎಂದು ಟ್ವೀಟ್‌ ಮಾಡುವ ಮೂಲಕ ಮೇಘಾಲಯದ ರಾಜ್ಯಪಾಲ ತಥಂಗತಾ ರಾಯ್‌ ವಿವಾದಕ್ಕೀಡಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದ್ರಿಕ್ತರ ತಂಡವೊಂದು ರಾಜ ಭವನಕ್ಕೆ ನುಗ್ಗಲು ಯತ್ನಿಸಿದ್ದು ಅಲ್ಲಿನ ಭದ್ರತಾ ಪಡೆಗಳ ಮೇಲೆ ಹಲ್ಲೆ, ದಾಂಧಲೆ ನಡೆಸಿದ್ದಾರೆ.

‘ಹಿಂದೊಮ್ಮೆ ಈ ದೇಶವು ಧರ್ಮದ ಆಧಾರದಲ್ಲಿ ವಿಭಜನೆಯಾಗಿದ್ದನ್ನು ಹಾಗೂ ಪ್ರಜಾಪ್ರಭುತ್ವ ಎನ್ನುವುದು ವಿಭಜನೆಯ ಆವಶ್ಯಕತೆಯನ್ನು ಬೇಡುವಂಥ ವ್ಯವಸ್ಥೆ ಎನ್ನುವುದನ್ನು ಇಂದಿನ ವಿವಾದಾತ್ಮಕ ಸನ್ನಿವೇಶದಲ್ಲಿ ನಾವು ಮರೆಯಬಾರದು’ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಪೌರತ್ವ ಕಾಯ್ದೆ ತಿರಸ್ಕರಿಸುವಂತಿಲ್ಲ
ನೂತನ ಪೌರತ್ವ ಕಾಯ್ದೆಯು ಸಂವಿಧಾನದ 7ನೇ ಪರಿಚ್ಛೇದದ ಕೇಂದ್ರ ಪಟ್ಟಿಯ ಅಡಿಯಲ್ಲಿ ಜಾರಿಗೊಂಡಿರುವುದರಿಂದ ಈ ಕಾಯ್ದೆಯನ್ನು ಯಾವುದೇ ರಾಜ್ಯ ಸರಕಾರಗಳು ತಿರಸ್ಕರಿಸುವಂತಿಲ್ಲ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ನೂತನ ಪೌರತ್ವ ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಲ, ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಪಂಜಾಬ್‌ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದರ ಬೆನ್ನಿಗೇ ಕೇಂದ್ರ ಗೃಹ ಸಚಿವಾಲಯದಿಂದ ಈ ಉತ್ತರ ಬಂದಿದೆ.

ಪ್ರಧಾನಿ ಮೋದಿ – ಶಿಂಜೋ ಭೇಟಿ ರದ್ದು
ಇದೇ ತಿಂಗಳ 15ರಿಂದ 17ರವರೆಗೆ ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ ನಡೆಯಬೇಕಿದ್ದ ಭಾರತ-ಜಪಾನ್‌ ನಡುವಿನ ವಾರ್ಷಿಕ ಶೃಂಗ ಸಭೆ ರದ್ದಾಗಿದೆ. ಇದೇ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ಪ್ರಧಾನಿ ಶಿಂಜೋ ಅಬೆ ಭೇಟಿಯ ಕಾರ್ಯಕ್ರಮ ನಿಗದಿಯಾಗಿತ್ತು.

ಆದರೆ, ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಅಸ್ಸಾಂನಲ್ಲಿ ನೂತನ ಪೌರತ್ವ ಕಾಯ್ದೆಯ ವಿರುದ್ಧ ಭುಗಿಲೆದ್ದಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ಸರಕಾರಗಳ ನಿರ್ಧಾರದ ಮೇರೆಗೆ ಸಮ್ಮೇಳನಕ್ಕೆ ಬೇರೊಂದು ದಿನವನ್ನು ನಿಗದಿಪಡಿಸುವುದಾಗಿ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. ಮತ್ತೂಂಡೆದೆ, ಅಮೆರಿಕ, ಫ್ರಾನ್ಸ್‌ ಸರಕಾರಗಳು, ಭಾರತಕ್ಕೆ ಪ್ರವಾಸ ಹೊರಡುವ ತಮ್ಮ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next