Advertisement
ಬೆಂಗಳೂರು, ಮುಂಬಯಿ, ದಿಲ್ಲಿ ಸೇರಿದಂತೆ ಹಲವೆಡೆ ಕಾಯ್ದೆಯ ಪರ ಜಾಥಾಗಳು ಆರಂಭವಾಗಿವೆ. ಮುಂಬಯಿನ ಧಾರಾವಿಯಲ್ಲಿ ಕಾಯ್ದೆಯನ್ನು ವಿರೋಧಿಸಿ ಭಾನುವಾರ ಜಾಥಾ ನಡೆದರೆ, ಘಟ್ಕೋಪರ್, ನಾಗ್ಪುರ ಸೇರಿದಂತೆ ಬಿಜೆಪಿ ಪ್ರಬಲವಾಗಿರುವಂಥ ಪ್ರದೇಶಗಳಲ್ಲಿ ಸಿಎಎ ಪರ ಮೆರವಣಿಗೆಗಳನ್ನು ನಡೆಸಲಾಗಿದೆ.
Related Articles
Advertisement
ಪಿಎಫ್ಐ ಕೈವಾಡ ಎಂದ ಡಿಸಿಎಂ: ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದಲ್ಲಿ ಹೊರಗಿನವರ ಕೈವಾಡವಿದೆ ಎಂದು ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಆರೋಪಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟವರ ಪೈಕಿ ಪಶ್ಚಿಮ ಬಂಗಾಲದ ಮಾಲ್ಡಾ ಜಿಲ್ಲೆಯಿಂದ ಬಂದ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕಾರ್ಯಕರ್ತರು ಇದ್ದಾರೆ.
ಪಿಎಫ್ಐಗೆ ನಿಷೇಧಿತ ಸಿಮಿ ಜತೆ ಸಂಬಂಧವಿದೆ ಎಂದಿದ್ದಾರೆ ಶರ್ಮಾ. ಜತೆಗೆ, ಹಿಂಸಾಚಾರದಲ್ಲಿ 288 ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ 62 ಮಂದಿ ಗುಂಡೇಟಿನಿಂದ ಗಾಯಗೊಂಡವರು. ಪ್ರತಿಭಟನಾಕಾರರೇ ಅಕ್ರಮ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಗುಂಡು ಹಾರಿಸಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದೂ ಶರ್ಮಾ ಹೇಳಿದ್ದಾರೆ.
ಪೊಲೀಸರಿಂದಲೇ ಫೈರಿಂಗ್?: ಉ.ಪ್ರದೇಶ ಹಿಂಸಾಚಾರದ ವೇಳೆ ನಮ್ಮ ಬಂದೂಕುಗಳಿಂದ ಒಂದೇ ಒಂದು ಗುಂಡೂ ಹಾರಿಲ್ಲ ಎಂದು ಡಿಜಿಪಿ ಸಿಂಗ್ ಅವರು ಸ್ಪಷ್ಟನೆ ನೀಡಿದ ಬೆನ್ನಲ್ಲೇ ವಿಡಿಯೋವೊಂದು ಬಹಿರಂಗವಾಗಿದೆ. ಅದರಲ್ಲಿ ಕಾನ್ಪುರದಲ್ಲಿ ಪೊಲೀಸರೇ ತಮ್ಮ ರೈಫಲ್‌ಗಳಿಂದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯಗಳಿವೆ.
ಟಿಎಂಸಿ ನಾಯಕರು ವಶಕ್ಕೆ: ಮೃತರ ಕುಟುಂಬಗಳಿಗೆ ಭೇಟಿ ನೀಡಲೆಂದು ಆಗಮಿಸಿದ್ದ ತೃಣಮೂಲ ಕಾಂಗ್ರೆಸ್‌ನ ನಾಲ್ವರು ಸದಸ್ಯರ ನಿಯೋಗವನ್ನು ಲಕ್ನೋ ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಉ.ಪ್ರದೇಶದ ಬಿಜ್ನೋರ್‌ಗೆ ಭೇಟಿ ನೀಡಿ, ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರ ಕುಟುಂಬ ಸದಸ್ಯರಿಗೆ ಸಾಂತ್ವನ ನುಡಿದಿದ್ದಾರೆ.
ವಿದೇಶಿ ಪ್ರವಾಸಿಗರ ಹಿಂದೇಟು: ದೇಶದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಭಾರತಕ್ಕೆ ಭೇಟಿ ನೀಡಲು ವಿದೇಶಿ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಕ್ರಿಸ್‌ಮಸ್ ರಜೆಯ ಸಮಯವಾದರೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ ಭಾರತಕ್ಕೆ ತೆರಳುವುದು ಒಳಿತಲ್ಲ ಎಂದು ಅಮೆರಿಕ, ಯುಕೆ, ಯುಎಇ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರಿಗೆ ಸೂಚನೆ ನೀಡಿರುವ ಕಾರಣ, ಭಾರತದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಅನೇಕ ಪ್ರವಾಸಿಗರು ಕರೆ ಮಾಡಿ ತಮ್ಮ ಪ್ರವಾಸ ರದ್ದು ಪಡಿಸುತ್ತಿದ್ದಾರೆ ಎಂದು ಭಾರತೀಯ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಜ್ಯೋತಿ ಮಾಯಾಲ್ ತಿಳಿಸಿದ್ದಾರೆ. ಇನ್ನೊಂದೆಡೆ ವಿದೇಶಗಳಿಗೆ ತೆರಳುತ್ತಿರುವ ಭಾರತೀಯರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದೂ ಹೇಳಲಾಗಿದೆ.
ಅಯ್ಯಪ್ಪ ಭಕ್ತರಿಗೆ ದಾರಿ ಬಿಟ್ಟರು!ದೇಶದ ಹಲವು ಪ್ರದೇಶಗಳಲ್ಲಿ ಹಿಂಸಾಚಾರದ ಸುದ್ದಿಗಳು ಕೇಳಿಬರುತ್ತಿರುವ ನಡುವೆಯೇ ಸಾಮರಸ್ಯದ ಸಂದೇಶವೊಂದಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ಇಲ್ಲಿನ ಕೊಯಮತ್ತೂರಿನಲ್ಲಿ ಅಲ್ ಜಮಾತ್ ಜಿಲ್ಲಾ ಒಕ್ಕೂಟ ಮತ್ತು ಇತರೆ ಇಸ್ಲಾಮಿಕ್ ಸಂಘಟನೆಗಳು ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಸುಮಾರು 15 ಸಾವಿರ ಮಂದಿ ಇದರಲ್ಲಿ ಭಾಗಿಯಾಗಿದ್ದರು. ಸಂಜೆ ನಮಾಜ್‌ಗೆ ಸಮಯವಾದ ಕಾರಣ, ಪ್ರತಿಭಟನಕಾರರು ಮೆರವಣಿಗೆ ನಡೆಯುತ್ತಿದ್ದ ಸ್ಥಳದಲ್ಲೇ ನಮಾಜ್ ಮಾಡತೊಡಗಿದರು. ಅಷ್ಟರಲ್ಲಿ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಭಕ್ತರ ತಂಡವೊಂದು ಇರುಮುಡಿ ಕಟ್ಟು ಹೊತ್ತುಕೊಂಡು ಅಲ್ಲಿಗೆ ಬಂತು. ಕೂಡಲೇ ಪ್ರತಿಭಟನಾಕಾರರು ನಮಾಜ್‌ನ ನಡುವೆಯೇ ಅಯ್ಯಪ್ಪ ಭಕ್ತರಿಗೆ ದಾರಿ ಮಾಡಿಕೊಟ್ಟು, ಅವರಿಗೆ ತೆರಳಲು ಅನುವು ಮಾಡಿದರು. ಇದರ ವಿಡಿಯೋ ಈಗ ದೇಶಾದ್ಯಂತ ವೈರಲ್ ಆಗಿದೆ. ನಡ್ಡಾಗೆ ವಲಸಿಗರಿಂದ ಸಮ್ಮಾನ
ಮಧ್ಯಪ್ರದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ಥಾನದ ನೂರಾರು ವಲಸಿಗರು ಈ ಕಾಯ್ದೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಮ್ಮಾನಿಸಿದ್ದಾರೆ. ಇಂದೋರ್‌ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ವಲಸಿಗರು, ತಾವು ಧಾರ್ಮಿಕ ಕಾರಣಗಳಿಗಾಗಿ ಪಾಕ್‌ನಲ್ಲಿ ಎದುರಿಸಿದ ಸಂಕಷ್ಟಗಳನ್ನು ವಿವರಿಸಿದರು. ಸಿಎಎಯಿಂದಾಗಿ ನಮಗೆ ಭಾರತದ ಪೌರತ್ವ ಸಿಗಲಿದೆ ಎಂದು ಸಂಭ್ರಮಿಸಿದರು. ಪ್ರಧಾನಿ ಮೋದಿ, ಅಮಿತ್ ಶಾ ದೇಶದ ಯುವಜನತೆಯ ಭವಿಷ್ಯವನ್ನೇ ನಾಶ ಮಾಡಿದ್ದಾರೆ. ನಿರುದ್ಯೋಗ ಹಾಗೂ ಆರ್ಥಿಕತೆಯ ದುಸ್ಥಿಃತಿ ಬಗ್ಗೆ ಯುವಕರಿಗಿರುವ ಆಕ್ರೋಶದಿಂದ ತಪ್ಪಿಸಿಕೊಳ್ಳಲು ದ್ವೇಷದ ತೆರೆಯ ಹಿಂದೆ ಅವಿತು ಕುಳಿತಿದ್ದಾರೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ದೇಶದ ಶೇ.80ರಷ್ಟು ಮಂದಿಯೂ ಪೌರತ್ವ ಕಾಯ್ದೆಯ ಪರ ಬೀದಿಗಿಳಿದು ಹೋರಾಡಲು ನಿರ್ಧರಿಸಿದ್ದೇ ಆದಲ್ಲಿ, ಕಾಂಗ್ರೆಸ್‌ನ ಸ್ಥಿತಿ ಏನಾಗಬಹುದು ಎಂದು ಯೋಚಿಸಿ. ವಿಪಕ್ಷ ಕಾಂಗ್ರೆಸ್ ಭಾರತದಲ್ಲಿ ‘ಹೊಸ ಪಾಕಿಸ್ಥಾನ’ ಸೃಷ್ಟಿಸಲು ಸಂಚು ರೂಪಿಸಿದಂತಿದೆ.
– ಕೈಲಾಶ್ ವಿಜಯವರ್ಗೀಯ, ಬಿಜೆಪಿ ನಾಯಕ