ಶಿರಾ: ಕಸ ಸಂಗ್ರಹ ಸರಿಯಾಗಿ ನಡೆಯುತ್ತಿಲ್ಲ ಮತ್ತು ರಸ್ತೆಯಲ್ಲಿ ಗುಡಿಸಿದ ಕಸ ಹೊತ್ತೂಯ್ಯುತ್ತಿಲ್ಲ ಎಂದು ಆಪಾದಿಸಿ ಬಾಲಾಜಿ ನಗರ ಬಡಾವಣೆಯ ನಾಗರಿಕರು ಕಸ ರಸ್ತೆಗೆ ಸುರಿದು ನಡೆಸಿದಧರಣಿ ಪ್ರತಿಭಟನಾಕಾರರು ಹಾಗೂ ಡಿವೈಎಸ್‌ಪಿ ವಾಗ್ವಾದಕ್ಕೆ ಕಾರಣವಾಯಿತು.
ಶನಿವಾರ ಬೆಳಗ್ಗೆ ಕಸ ಸುರಿದು, ಮರಗಳನ್ನಿಟ್ಟು ಪ್ರತಿಭಟಿಸಿದ್ದು, ಈ ವೇಳೆ ಆ ದಾರಿಯಲ್ಲಿ ತೆರಳುತ್ತಿದ್ದ ಡಿವೈಎಸ್‌ಪಿ ಎಲ್.ಕುಮಾರಪ್ಪ ಪ್ರತಿ ಭಟನಾಕಾರರ ವರ್ತನೆಗೆ ಅಧಿಕಾರಿ ಆಕ್ರೋಶಿಸಿದರು. ಪ್ರತಿಭಟನೆ ನಡೆಸುವ ವಿಧಾನ ಇದಲ್ಲ. ಸಂಬಂಧಪಟ್ಟ ಕಚೇರಿ ಮುಂದಕ್ಕೆ ತೆರಳಿ ಪ್ರತಿಭಟನೆ ಮಾಡಿ. ಸಾರ್ವ ಜನಿಕರಿಗೆ ತೊಂದರೆ ಆಗುವಂತೆ ಪ್ರತಿಭಟಿಸಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಅಧಿಕಾರಿಯೊಂದಿಗೆ ವಾಗ್ವಾದಕ್ಕೆ ಇಳಿದ ಸ್ಥಳೀಯ ಬಿಜೆಪಿ ಮುಖಂಡ ವಿಜಯರಾಜ್, ಹಿಂದೆಲ್ಲಾ ನಗರಸಭೆಗೆ ಮನವಿ ಕೊಟ್ಟಿದೆ, ಪ್ರತಿಭಟನೆ ನಡೆಸಿದೆ. ಆದರೂ ನಗರಸಭೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು, ನಗರಸಭೆಗೆ ಅತ್ಯಂತ ಹೆಚ್ಚು ಕರ ಪಾವತಿಸುವ ಬಾಲಾಜಿನಗರ-ವಿದ್ಯಾನಗರ ಅವಳಿ ಬಡಾವಣೆಗಳ ಕಸ ಸಂಗ್ರಹಣೆಗೆ ನಗರಸಭೆ ಗಮನ ನೀಡುತ್ತಿಲ್ಲ ಎಂದು ದೂರಿದರು.
ಬಡಾವಣೆಯಲ್ಲಿ ಅಧಿಕಾರಿಗಳು, ವೈದ್ಯರು, ಶಿಕ್ಷಕರು, ದೊಡ್ಡ ದೊಡ್ಡ ವ್ಯವಹಾರಸ್ಥರೇ ನೆಲೆಸಿದ್ದು, ಎಲ್ಲರೂ ವಿದ್ಯಾವಂತರೇ ಆಗಿದ್ದಾರೆ. ಯಾರೊಬ್ಬರೂ ಮಾತನಾಡುವುದಿಲ್ಲ. ನಗರದಲ್ಲಿ ಕಂದಾಯ ಪಾವತಿಸದ ಅನೇಕ ಪ್ರದೇಶ ಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈ ಬಡಾವಣೆ ಹೈಟೆಕ್ ಸ್ಲಂ ಆಗಿದೆ ಎಂದರು.
ಪೌರಾಯುಕ್ತರಿಗೆ ತಿಳಿಸಿದರೆ, ಬೇರೆ ಸ್ಥಳದಲ್ಲಿದ್ದೇನೆ. ಬರಲು ಆಗುವುದಿಲ್ಲ ಎಂದು ಉತ್ತರಿಸುತ್ತಾರೆ. ಇನ್ನು ಆರೋಗ್ಯ ನಿರೀಕ್ಷಕರಿಗೆ ಕರೆ ಮಾಡಿದರೆ ಕಟ್ ಮಾಡುತ್ತಾರೆ. ನಗರಸಭೆಗೆ ಚುರುಕು ಮುಟ್ಟಿಸಲು, ಪ್ರತಿಭಟನೆಯಿಂದ ತೊಂದರೆಗೊಳಗಾದವರಿಗೆ ನಮ್ಮ ಕಷ್ಟವೂ ಗೊತ್ತಾಗಲಿ ಎಂದು ಉತ್ತರಿ ಸಿದರು. ಆರೋಗ್ಯ ನಿರೀಕ್ಷಕರಿಗೆ ಫೋನಾಯಿಸಿದ ಡಿವೈಎಸ್‌ಪಿ, ಸ್ಥಳೀಯ ಸಮಸ್ಯೆ ಮತ್ತು ಪ್ರತಿಭಟನೆ ಹಾಗೂ ನಗರಸಭೆ ಅಧಿಕಾರಿಗಳ ವೈಫಲ್ಯದ ಕುರಿತು ಜಿಲ್ಲಾಧಿಕಾರಿಗೆ ವರದಿ ಕಳುಹಿಸುತ್ತೇನೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿ ಪ್ರದೀಪ್ ಕುಮಾರ್, ಎರಡು ದಿನದಲ್ಲಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು. ಆದರೂ ಜಗ್ಗದ ಪ್ರತಿಭಟನಾಕಾರರು ಆಯುಕ್ತರು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಪೌರ ಕಾರ್ಮಿಕರು ವಾಹನಗಳಿಗೆ ಕಸ ತುಂಬಿದ ನಂತರ ಸಂಚಾರಕ್ಕೆ ಬಿಡುಗಡೆಗೊಳಿಸಲಾಯಿತು. ನಗರಸಭೆ ಮಾಜಿ ಸದಸ್ಯ ರಾಜಣ್ಣ ಇದ್ದರು.