Advertisement

ಸ್ವಚ್ಛತೆಗೆ ಹೊಸ ಆಯಾಮ ಬರೆದ ನಾಗರಿಕ ಸಮಿತಿ

07:56 PM Dec 25, 2021 | Team Udayavani |

ಸುರತ್ಕಲ್‌: ನಗರದ ಅಭಿವೃದ್ಧಿ ಮತ್ತು ಆರೋಗ್ಯ (ಸ್ವಚ್ಛತೆ, ನೈರ್ಮಲ್ಯ ಇತ್ಯಾದಿ)ವನ್ನು ಕಾಪಾಡುವಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ನಾಗರಿಕ ಸಮಿತಿಗಳು ಸೇರಿಕೊಂಡರೆ ಆಗುವ ಬದಲಾವಣೆಯೇ ಬೇರೆಯದು.

Advertisement

ಅ ಮಾತಿಗೆ ಉದಾ ಹರಣೆಯಂತೆ ಇದೆ ಸುರತ್ಕಲ್‌ ನ ನಾಗರಿಕ ಸಮಿತಿ. ಮೂರು ವರ್ಷಗಳಿಂದ ನಿರಂತರ ವಾಗಿ ಸುರತ್ಕಲ್‌ ಪ್ರದೇಶ ದಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ದುಡಿಯುತ್ತಿರುವ ಸಮಿತಿಯಿದು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೇಲ್ಸೇತುವೆ ನಿರ್ಮಿಸಿದ ಬಳಿಕ ಅದರ ಕೆಳಭಾಗದಲ್ಲಿ ಕಂಡು ಬಂದ ತ್ಯಾಜ್ಯ, ಗುಟ್ಕಾ ಪ್ಯಾಕೆಟ್‌ ರಾಶಿ, ಮಾಲಿನ್ಯ-ಹೀಗೆ ಜಂಕ್ಷನ್‌ ಭಾಗದಲ್ಲಿ ಸ್ವಚ್ಛತೆ ಕೊರತೆ ಕಂಡು ಬಂದಾಗ ಹಿರಿಯರು, ಪ್ರಾಜ್ಞರ ತಂಡವೊಂದು ವಿವಿಧ ಸಂಘಟನೆಗಳ ಜತೆ ಚರ್ಚಿಸಿ ಕ್ರಿಯಾಶೀಲವಾಗಿದ್ದೇ ಈ ಸಮಿತಿ. ಇವರಿಗೆ ಪ್ರೇರಣೆಯಾದದ್ದು ಮಂಗಳೂರು ರಾಮಕೃಷ್ಣ ಮಿಷನ್‌ ಅವರ ಸ್ವಚ್ಛತಾ ಕಾರ್ಯ.

ಮೊದಲ ಹೆಜ್ಜೆಯಾಗಿ ಮೇಲ್ಸೇತುವೆಯ ಕೆಳಭಾಗವನ್ನು ಸುಂದರಗೊಳಿಸಲು 2017ರ ಅ. 2ರಂದು ಮುಂದಾಯಿತು. ಸ್ವಚ್ಛತೆ, ಉದ್ಯಾನ ನಿರ್ಮಾಣವನ್ನು ದಾನಿಗಳು, ಉದ್ಯಮಿಗಳು, ಸುತ್ತಲಿನ ಕಂಪೆನಿಗಳು, ಸ್ಥಳೀಯ ಸಂಘ-ಸಂಸ್ಥೆಗಳನ್ನೆಲ್ಲಾ ಸೇರಿಸಿಕೊಂಡು 12 ತಿಂಗಳಲ್ಲಿ ಪೂರೈಸಿದರು. ನಳನಳಿಸುವ ಸಸ್ಯರಾಶಿಗಳ ಮಧ್ಯೆ ವಿಹಾರ ಮಾಡುವಂಥ ಫುಟ್‌ಪಾತ್‌ ನಿರ್ಮಿಸಲಾಗಿದೆ. ಈ ಯೋಜನೆ ಬಹಳಷ್ಟು ಜನರಿಗೆ ನಿರುಪಯುಕ್ತ ಸ್ಥಳದ ಬಳಕೆಗೆ ಉತ್ತೇಜನ ನೀಡಿದೆ.

ಅ ಬಳಿಕ ಕಸ ಹಾಕುವ ಸ್ಥಳಗುರುತಿಸಿ ಸ್ವಚ್ಛ ಗೊಳಿಸುವ ಕೆಲಸ ಆರಂಭಿಸಲಾಯಿತು. ಇದುವೇ ಸ್ವಚ್ಛ ಸುರತ್ಕಲ್‌ ಅಭಿಯಾನ. ಮಂಗಳೂರು ರಾಮಕೃಷ್ಣ ಮಠದ ಸ್ವಾಮೀಜಿ ಅವರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದರು.

ಪಾಲಿಕೆ ವತಿಯಿಂದ ಮನೆ ಮನೆ ತ್ಯಾಜ್ಯ ಸಂಗ್ರಹವಾಗುತ್ತಿದ್ದರೂ ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯುವ ಮಂದಿಗೆ ಕೊರತೆಯಿರಲಿಲ್ಲ.

Advertisement

ವಾಹನದಲ್ಲಿ ಹೋಗುತ್ತಿದ್ದಾಗ ಪ್ಲಾಸ್ಟಿಕ್‌ ಸಹಿತ ಕಸ ಬಿಸಾಡುವ ಸ್ಥಳಗಳೂ ಹೆಚ್ಚಾಗಿದ್ದವು. ಆಗ ಸಮಿತಿಯು 2018ರ ಅ. 2ರಂದು ಅಭಿಯಾನ ಅರಂಭಿಸಿತು. ಇದರ ಪ್ರಾಯೋಜಕತ್ವವನ್ನು ಮಂಗಳೂರಿನ ರಾಮಕೃಷ್ಣ ಮಿಷನ್‌ ವಹಿಸಿತ್ತು.  2ನೇ ಅಭಿಯಾನವನ್ನು ಸಮಿತಿಯು ರೋಟರಿ ಕ್ಲಬ್‌ ಸುರತ್ಕಲ್‌, ವಿದ್ಯಾದಾಯಿನಿ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ತರಬೇತಿ ಕೇಂದ್ರ (ವಿರಾಟ್‌) ನೇತೃತ್ವದಲ್ಲಿ ಎಂಆರ್‌ಪಿಎಲ್‌ ಸಹಕಾರ ದಲ್ಲಿ ನಡೆಯಿತು. ಊರಿನ ನೂರಕ್ಕೂ ಮಿಕ್ಕಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದರು. ಎರಡೂ ಅಭಿ ಯಾನಗಳ ಮೂಲಕ 60ಕ್ಕೂ ಮಿಕ್ಕಿ ಸ್ವಚ್ಛತಾ ಶ್ರಮದಾನ, 51 ಕಸ ಬೀಳುವ ಜಾಗಗಳನ್ನು ಗುರುತಿಸಿ, ಕಸ ಎಸೆಯುವವರಲ್ಲಿ ಅರಿವು ಮೂಡಿಸಿ, ಆ ಜಾಗವನ್ನು ಶುಚಿ ಗೊಳಿಸಿ ಗಿಡಗಳನ್ನು ನೆಡಲಾಯಿತು.

ತ್ಯಾಜ್ಯ ವಿಲೇವಾರಿಗಾಗಿ 40 ಸ್ವಚ್ಛತ ಸಂಪರ್ಕ ಅಭಿಯಾನಗಳನ್ನು ನಡೆಸಿ, ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ರಿಯಾಯಿತಿ ದರದಲ್ಲಿ 600ಕ್ಕೂ ಮಿಕ್ಕಿ ಮಡಿಕೆ ಗೊಬ್ಬರ ತಯಾರಿ ಘಟಕಗಳನ್ನು ವಿತರಿಸಲಾಯಿತು. 2 ಮಿಯಾವಾಕಿ ನಗರ ಅರಣ್ಯ ಗಳನ್ನು ಪ್ರಾ. ಆ. ಕೇಂದ್ರ ಕಾಟಿಪಳ್ಳ, ವಿದ್ಯಾದಾಯಿನಿ ಪ್ರೌಢಶಾಲೆಯ ಆವರಣದಲ್ಲಿ ಅಭಿವೃದ್ಧಿಪಡಿ ಸಲಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ನಡೆದ ಸ್ವಚ್ಛ ಸೋಚ್‌, ಸ್ವಚ್ಛ ಮನಸ್ಸು ಸರಣಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸುರತ್ಕಲ್‌ ಪೇಟೆಯಲ್ಲಿ ಪಾಳುಬಿದ್ದಿದ್ದ ಬಾವಿಯೊಂದನ್ನು ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆಗೊಳಿಸಲಾಯಿತು. ಇದೀಗ 3ನೇ ಅಭಿಯಾನಕ್ಕೆ ವೇದಿಕೆ ಸಜ್ಜಾಗಿದೆ.

ಸಹಕಾರದಿಂದ ಯಶಸ್ವಿ :

ರಾಮಕೃಷ್ಣ ಮಿಷನ್‌ನ ನಿಸ್ವಾರ್ಥ ಸ್ವಚ್ಛತ ಸೇವೆಯನ್ನು ಕಂಡು ಪ್ರೇರಿತರಾಗಿ ನಾವೂ ಸುರತ್ಕಲ್‌ ಭಾಗದಲ್ಲಿ ಅಭಿಯಾನ ಕೈಗೊಂಡಾಗ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಸ್ವಾಮೀಜಿ ಅವರೇ ನಮಗೆ ಪ್ರೇರಕರು. ಇದೀಗ ನಮ್ಮ ಸ್ವಚ್ಛತ ಕಾಯಕದಿಂದ ವಿವಿಧೆಡೆ ಅಭಿಯಾನ ನಡೆದು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿವಿಧ ಸಂಘ – ಸಂಸ್ಥೆಗಳ, ಜನರ ಕಾರ್ಯಕರ್ತರ ಸಹಕಾರದಿಂದ ಇದು ಇಂದು ಆಂದೋಲನವಾಗಿ ಬದಲಾಗಿದೆ. ಪ್ರೊ| ರಾಜ್‌ಮೋಹನ್‌ ರಾವ್‌, ಆಧ್ಯಕ್ಷರು, ನಾಗರಿಕ ಸಲಹಾ ಸಮಿತಿ ಸುರತ್ಕಲ್‌

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next