ಸುರತ್ಕಲ್ : ಇಲ್ಲಿನ ಟೋಲ್ ಗೇಟನ್ನು ಹಿಂಬಾಗಿಲ ಮೂಲಕ ಆರಂಭಿಸುವ ಹುನ್ನಾರಕ್ಕೆ ಟೋಲ್ ಗೇಟ್ ಸಮೀಪ ಉಪಾಹಾರ ಮಂದಿರ, ಶೌಚಾಲಯ ನಿರ್ಮಿಸುತ್ತಿರುವುದು ಸಾಕ್ಷಿಯಾಗಿತ್ತು. ಆ ಸಂದರ್ಭ ಡಿವೈಎಫ್‌ಐ ಸಹಿತ ಸ್ಥಳೀಯ ನಾಗರಿಕ ಸಮಿತಿಗಳ ಹೋರಾಟದಿಂದಾಗಿ ಕಾಮಗಾರಿಗಳು ಸ್ಥಗಿತವಾಗಿದ್ದವು. ಆದರೆ ಈಗ ಸಂಸದರ ನೇರ ಹಸ್ತಕ್ಷೇಪದಿಂದ ಮತ್ತೆ ಟೋಲ್ ಸುಂಕ ವಸೂಲಿ ಆರಂಭಿಸಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು. ಸುರತ್ಕಲ್ ಟೋಲ್‌ಗೇಟ್‌ನ್ನು ಸ್ಥಗಿತಗೊಳಿಸಿ, ಹೆದ್ದಾರಿಯಲ್ಲಿರುವ ಅಪಾಯಕಾರಿ ಹೊಂಡ-ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಟೋಲ್‌ಗೇಟ್ ಸಮೀಪ ಹೆಸರು ಸಹಿತ ಭಾವಚಿತ್ರ ಹಾಕಿ ದೇಶದ ನಂಬರ್ ವನ್ ಸಂಸದ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ, ಕೇರಳ ಹಾಗೂ ಕರ್ನಾಟಕದ ನೆರೆ ಬಗ್ಗೆ ಮಾತನಾಡಿ, ಗಮನ ಸೆಳೆದಿರುವುದು ಅಭಿನಂದನಾರ್ಹ. ಆದರೆ ಜಿಲ್ಲೆಯ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ಇರುವುದು ಖೇಧಕರ. ಹೆದ್ದಾರಿಗಳು ಹೊಂಡಗಳಿಂದ ತುಂಬಿದ್ದು, ದುರಸ್ತಿ ಕಾರ್ಯ ನಡೆಸುವುದು ಹಾಗೂ ಹತ್ತು ಕಿ.ಮೀ. ಅಂತರದಲ್ಲಿರುವ ಮೂರ್‍ನಾಲ್ಕು ಟೋಲ್ ಸುಂಕ ಹಾಕುವುದನ್ನು ತಡೆಯಲು ಇಂದಿಗೂ ಅವರಿಂದ ಸಾಧ್ಯವಾಗಿಲ್ಲ ಎಂದರು.
ಕಾರ್ಪೋರೇಟರ್ ರೇವತಿ ಪುತ್ರನ್ ಮಾತನಾಡಿ, ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಪಡೆಯುವ ಸಂಸದರು, ಸ್ವಯಂ ವರ್ಚಸ್ಸಿನಿಂದ ಮತ ಪಡೆಯಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕೇವಲ ಬಾಯಿಮಾತಿನಲ್ಲಿ ಮಾಡಿದರೆ ಸಾಲದು ಜನತೆಗೆ ಪ್ರಯೋಜನ ಲಭಿಸುವಂತಿರಬೇಕು. ಸಂಸದರು ಮತ್ತೆ ಜಯಗಳಿಸಿದರೆ ಮತ್ತಷ್ಟು ಟೋಲ್ ವಸೂಲಾತಿ ಕೇಂದ್ರಗಳು ಆರಂಭವಾಗಬಹುದು ಎಂದರು.
ಬಲಿಷ್ಠ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ
ದಯಾನಂದ ಶೆಟ್ಟಿ ಪಂಜಿಮೊಗರು ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲು ಪಾಲಿಕೆ ಸಭೆಯ ಚರ್ಚಿಗೆ ಇಂದಿಗೂ ಬಂದಿಲ್ಲ. ಮಾತೆತ್ತಿದರೆ ಬಲಿಷ್ಠ ದೇಶ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ. ಹತ್ತು ವರ್ಷಗಳಲ್ಲಿ ಬಲಿಷ್ಠ ರಸ್ತೆ ನಿರ್ಮಿಸಲೂ ಅವರಿಗೆ ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.
ಜಯಕರ್ನಾಟಕ ಮುಖಂಡ ವೈ. ರಾಘವೇಂದ್ರ ರಾವ್, ಡಿವೈಎಫ್‌ಐ ಮುಖಂಡ ಇಮ್ತಿಯಾಝ್, ಸಂತೋಷ್ ಬಜಾಲ್, ಅಜ್ಮಲ್ ಕಾನಾ, ನವೀನ್ ಕೊಂಚಾಡಿ, ಮುಸ್ತಫಾ ಬೈಕಂಪಾಡಿ, ಮೂಸಬ್ಬ ಪಕ್ಷಿಕೆರೆ, ರಹೀಂ ಪಕ್ಷಿಕೆರೆ, ದಿನೇಶ್ ಆರ್. ಕೆ., ಸಂದೀಪ್ ಕಿನ್ನಿಗೋಳಿ, ಮುನಾವರ್ ಕುತ್ತಾರ್, ಕಮಲಾಕ್ಷ ಸಾಲ್ಯಾನ್, ಶಿವ ಪಂಜಿಮೊಗರು, ಉಮರ್ ಫಾರೂಕ್, ಜಾನ್ ಡಿ’ಸೋಜಾ, ಅಬೂಬಕರ್ ಬಾವಾ, ನಾಗರಿಕ ಸಮಿತಿಯ ಗಂಗಾಧರ ಬಂಜನ್ ಮೊದಲಾದವರು ಉಪಸ್ಥಿತರಿದ್ದರು. ಬಿ.ಕೆ. ಇಮ್ತಿಯಾಝ್ ಪ್ರಾಸ್ತಾವಿಸಿದರು. ಶ್ರೀನಾಥ್ ಕುಲಾಲ್ ಅವರು ಕಾರ್ಯಕ್ರಮ ಸ್ವಾಗತಿಸಿದರು.