ನವದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕೇಂದ್ರೀಯ ಉದ್ಯಮ ಭದ್ರತಾ ದಳ (ಸಿ.ಐ.ಎಸ್.ಎಫ್) ಸಿಬಂದಿಗಳು ಗಾಲಿ ಕುರ್ಚಿ ಅವಲಂಬಿತ ಮಹಿಳೆಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಜೀವನಸ್ಪೂರ್ತಿ ಭಾಷಣಕಾರ್ತಿ ಮತ್ತು ವಿಶಿಷ್ಟ ಚೇತನರ ಹಕ್ಕುಗಳ ಹೋರಾಟಗಾರ್ತಿಯಾಗಿರುವ ವಿರಾಲಿ ಮೋದಿ ಎಂಬ ಮಹಿಳೆಯೇ ಸಿ.ಐ.ಎಸ್.ಎಫ್ ಸಿಬಂದಿಗಳ ಕಿರುಕುಳಕ್ಕೊಳಗಾದವರಾಗಿದ್ದಾರೆ.
ವಿರಾಲಿ ಅವರು ದೆಹಲಿಯಿಂದ ಮುಂಬಯಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತೆಗಿದ್ದ ಸಿ.ಐ.ಎಸ್.ಎಫ್ ಅಧಿಕಾರಿಗಳು ವಿರಾಲಿಗೆ ಗಾಲಿ ಕುರ್ಚಿಯಿಂದ ಎದ್ದೇಳುವಂತೆ ತಾಕೀತು ಮಾಡಿದ್ದಾರೆ. ಅದಕ್ಕೆ ಅವರು ನಿರಾಕರಿಸಿದಾಗ ಅವರನ್ನು ನಿಂದಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಸಿ.ಐ.ಎಸ್.ಎಫ್ ಸಿಬಂದಿಯಲ್ಲಿ ಒಬ್ಬರು ಇನ್ನೊಬ್ಬ ಸಿಬಂದಿಯ ಬಳಿ ‘ಡ್ರಾಮಾ ಕರ್ ರಹೀ ಹೈ’ (ನಾಟಕ ಮಾಡುತ್ತಿದ್ದಾಳೆ) ಎಂದು ಹೇಳುತ್ತಿರುವುದು ಕೇಳಿ ವಿರಾಲಿ ಅವರು ಕಣ್ಣೀರಾದರು. ಬಳಿಕ ವಿರಾಲಿ ಅವರನ್ನು ಗಾಲಿ ಕುರ್ಚಿಯಿಂದ ಎದ್ದೇಳುವಂತೆ ಭದ್ರತಾ ಸಿಬಂದಿಗಳು ತಾಕೀತು ಮಾಡಿದ್ದಾರೆ.
ವಿರಾಲಿ ಮೋದಿ ಅವರು ಕಳೆದ 13 ವರ್ಷಗಳಿಂದ ಗಾಲಿ ಕುರ್ಚಿಯನ್ನು ಅವಲಂಬಿಸಿದ್ದಾರೆ. ಅವರು ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಮೆರಿಕಾ ಪ್ರಜೆಯಾಗಿರುವ ವಿರಾಲಿ ಅವರು ಹೇಳುವಂತೆ ಆಕೆಗೆ ಇದುವರೆಗೆ ಯಾವ ವಿಮಾನ ನಿಲ್ದಾಣದಲ್ಲಿಯೂ ಇಂತಹ ಅವಮಾನದ ಘಟನೆಗಳು ಆಗಿಲ್ಲವಂತೆ.
ವಿರಾಲಿ ಅವರು ಇಂಧಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿಯ ನಿಯಮಗಳ ಪ್ರಕಾರ ಅವರಿದ್ದ ಗಾಲಿ ಕುರ್ಚಿಯನ್ನು ನೀಡುವಂತೆ ಭದ್ರತಾ ಸಿಬಂದಿಗಳು ತಿಳಿಸಿದ್ದಾರೆ. ಬಳಿಕ ಅವರನ್ನು ಪೋರ್ಟರ್ ಒಂದರ ಮೂಲಕ ತಪಾಸಣಾ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ವಿರಾಲಿ ಅವರಿಗೆ ನಿಲ್ಲುವಂತೆ ಭದ್ರತಾ ಸಿಬಂದಿ ತಾಕೀತು ಮಾಡಿದ್ದಾರೆ.
ಈ ರೀತಿ ವಿಮಾನ ನಿಲ್ದಾಣದಲ್ಲಿ ತನಗಾದ ಕಹಿ ಅನುಭವವನ್ನು ವಿರಾಲಿ ಅವರು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ ಮತ್ತು ಈ ಕುರಿತಾಗಿ ಸಿ.ಐ.ಎಸ್.ಎಫ್. ಹಿರಿಯ ಅಧಿಕಾರಿಗಳಿಗೆ ವಿರಾಲಿ ಅವರು ಲಿಖಿತ ದೂರು ನೀಡಿದ್ದಾರೆ.