ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಕಾನ್‌ಸ್ಟೆಬಲ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸುರೇಶ್ ವಿ.ಗಾಯಕ್‌ವಾಡ್ (29) ಮೃತ ಕಾನ್‌ಸ್ಟೆಬಲ್. 2009ರಿಂದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಆಗಿದ್ದ ಸುರೇಶ್ ತ್ರಿಪುರಾದ ಅಗರ್ತಲಾ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ಅವರು ವಿವಾಹಿತರಾಗಿದ್ದರೂ, ಕೆಐಎನ ಸಿಐಎಸ್‌ಎಫ್ ಕ್ವಾಟ್ರಸ್‌ನಲ್ಲಿ ಒಬ್ಬರೇ ನೆಲೆಸಿದ್ದರು. ವಿಮಾನ ನಿಲ್ದಾಣದ ಏಳನೇ ವೀಕ್ಷಣಾ ಗೋಪುರದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ತನಕ ಸುರೇಶ್ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಸುರೇಶ್ ಎಕೆ-47 ಮಾದರಿಯ ಇನ್ಸಾಸ್ ರೈಫಲ್ ತೆಗೆದುಕೊಂಡು ಭದ್ರತೆಗೆ ತೆರಳಿದ್ದರು. ಪ್ರತಿದಿನ ಬೆಳಗ್ಗೆ 9.30ರಲ್ಲಿ ಸಿಐಎಸ್‌ಎಫ್ ಗಸ್ತು ವಾಹನ ಬಂದಾಗ ಗೋಪುರ ಮೇಲಿಂದ ಇಳಿದು ಗಸ್ತು ಸಿಬ್ಬಂದಿ ಜತೆ ಟೀ ಕುಡಿಯುತ್ತಿದ್ದರು.
ಸೋಮವಾರ ಬೆಳಗ್ಗೆ 9.15ಕ್ಕೆ ಗಸ್ತು ವಾಹನದಲ್ಲಿ ಪೇದೆ ವೆಂಕಟೇಶ್ ಎಂಬುವರು ಬಂದಾಗ ಸುರೇಶ್ ವೀಕ್ಷಣ ಗೋಪುರದಿಂದ ಇಳಿದು ಕೆಳಗೆ ಬಂದಿರಲಿಲ್ಲ. ಹೀಗಾಗಿ ವೆಂಕಟೇಶ್ ಗೋಪುರದ ಮೇಲೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸುರೇಶ್ ಒದ್ದಾಡುತ್ತಿದ್ದರು. ತಕ್ಷಣ ಕೆಐಎ ವೈದ್ಯರನ್ನು ಕರೆಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕೊಂಡೊಯ್ಯಲು ಯತ್ನಿಸಲಾಯಿತಾದರೂ ಅಷ್ಟರಲ್ಲಿ ಸುರೇಶ್ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಕಾರಣ?: ವಿವಾಹಿತರಾಗಿರುವ ಸುರೇಶ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಪತ್ನಿ ವಿಚ್ಚೇಧನ ಕೋರಿ ಮಹಾರಾಷ್ಟ್ರದಲ್ಲಿನ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಕೇಸ್‌ಗೆ ಹಾಜರಾಗಲು ಸುರೇಶ್ ಆಗಾಗೆ ರಜೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಕಳೆದ ನ್ಯಾಯಾಲಯದ ಅಂತಿಮ ತೀರ್ಪು ಇದೆ ಎಂದು ಹೇಳಿ ಸುರೇಶ್ ರಜೆ ಹಾಕಿ ಮಹಾರಾಷ್ಟ್ರಕ್ಕೆ ತೆರಳಿದ್ದರು.
ಅಲ್ಲಿಂದ ಬಂದ ಬಳಿಕ ತೀರ್ಪು ಏನಾಯ್ತು ಎಂದು ಯಾರ ಬಳಿಯೂ ಹೇಳಿಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕಾನ್‌ಸ್ಟೆಬಲ್ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಶವ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೆಐಎ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.