Advertisement

ಆಡಳಿತ ಮತ್ತು ಸಿಬಂದಿ ಸುಧಾರಣೆ ಇಲಾಖೆಯಿಂದ ಸುತ್ತೋಲೆ

10:03 AM Feb 11, 2020 | sudhir |

ಸಾಹೇಬ್ರು ಕಾಫಿಗೆ ಹೋಗಿದ್ದಾರೆ ಎನ್ನುವುದು ನಮ್ಮ ಸರಕಾರಿ ಕಚೇರಿಗಳಲ್ಲಿ ಸಿಗುವ ಒಂದು ಸಾಮಾನ್ಯ ಉತ್ತರ. ಕಾಫಿ, ಟೀಗೆ ಹೋಗಲು ಅವರಿಗೆ ಹೊತ್ತುಗೊತ್ತು ಇಲ್ಲ. ಖಾಲಿ ಕುರ್ಚಿಗಳು ಸರಕಾರಿ ಕಚೇರಿಗಳ ಒಂದು ಸಾಮಾನ್ಯ ನೋಟ. ಈ ಹಿನ್ನೆಲೆಯಲ್ಲಿ ನೌಕರರ ಬಿಡುವಿಗೆ ಲಗಾಮು ತೊಡಿಸುವುದು ಅಪೇಕ್ಷಣೀಯವೂ ಹೌದು.

Advertisement

ಸರಕಾರಿ ನೌಕರರು ಕಾಫಿ, ಟೀ ಎಂದು ಕಚೇರಿ ಸಮಯದಲ್ಲಿ ಬಿಡುವು ಪಡೆದುಕೊಂಡು ಕಾಲ ಹರಣ ಮಾಡುವುದನ್ನು ನಿಯಂತ್ರಿಸಲು ಸರಕಾರ ಮುಂದಾಗಿದೆ.ಆಡಳಿತ ಮತ್ತು ಸಿಬಂದಿ ಸುಧಾರಣೆ ಇಲಾಖೆ ಈ ಸಂಬಂಧ ವಿಧಾನಸೌಧ, ವಿಕಾಸ ಸೌಧ ಮತ್ತು ಎಂ.ಎಸ್‌.ಬಿಲ್ಡಿಂಗ್‌ನಲ್ಲಿರುವ ಕಚೇರಿಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಹಲವಾರು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದೆ. ಸರಕಾರಿ ನೌಕರರ ಕಾರ್ಯದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಉಪಕ್ರಮ.

ಸಾಹೇಬ್ರು ಕಾಫಿಗೆ ಹೋಗಿದ್ದಾರೆ ಎನ್ನುವುದು ನಮ್ಮ ಸರಕಾರಿ ಕಚೇರಿಗಳಲ್ಲಿ ಸಿಗುವ ಒಂದು ಸಾಮಾನ್ಯ ಉತ್ತರ. ಕಾಫಿ, ಟೀಗೆ ಹೋಗಲು ಅವರಿಗೆ ಹೊತ್ತು ಗೊತ್ತು ಇಲ್ಲ. ಖಾಲಿ ಕುರ್ಚಿಗಳು ಸರಕಾರಿ ಕಚೇರಿಗಳ ಒಂದು ಸಾಮಾನ್ಯ ನೋಟ. ಈ ಹಿನ್ನೆಲೆಯಲ್ಲಿ ನೌಕರರ ಬಿಡುವಿಗೆ ಲಗಾಮು ತೊಡಿಸುವುದು ಅಪೇಕ್ಷಣೀಯವೂ ಹೌದು. ಇದಕ್ಕಾಗಿ ಎಲ್ಲ ಕಚೇರಿಗಳಲ್ಲಿ ಹಾಜರಾತಿಯ ದಾಖಲಾತಿಯೊಂದನ್ನು ಇಡಲು ಸೂಚಿಸಲಾಗಿದೆ. ಕಚೇರಿ ಅವಧಿಯಲ್ಲಿ ಪ್ರತಿಸಲ ಕುರ್ಚಿ ಬಿಟ್ಟು ಹೊರ ಹೋಗುವಾಗ ಅದರಲ್ಲಿ ಹೊರಗೆ ಹೋಗುವ ಸಮಯ ಮತ್ತು ಒಳಗೆ ಬರುವ ಸಮಯವನ್ನು ದಾಖಲಿಸಬೇಕು. ಅಲ್ಲದೆ ಹೀಗೆ ಹೊರ ಹೋಗಬೇಕಾದರೆ ಮೇಲಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು.

ಆದರೆ ಈ ಡಿಜಿಟಲ್‌ ಯುಗದಲ್ಲಿ ದಾಖಲಾತಿ ಇಡುವ ಹಳೇ ಸಂಪ್ರದಾಯ ಏಕೆ ಎನ್ನುವುದು ಆಶ್ಚರ್ಯವುಂಟು ಮಾಡುತ್ತಿದೆ. ಇದರ ಬದಲಾಗಿ ಹಾಜರಾತಿಗಿರುವಂತೆ ಇದಕ್ಕೂ ಬಯೋಮೆ ಟ್ರಿಕ್‌ನಂಥ ಡಿಜಿಟಲ್‌ ವ್ಯವಸ್ಥೆಯನ್ನೇ ಮಾಡಬಹುದಲ್ಲ.ಇದರಿಂದ ಪ್ರತಿ ಸಲ ಹೋಗುವ ಮತ್ತು ಬರುವ ಸಮಯ ಬರೆಯುವ ಹೆಚ್ಚುವರಿ ಕೆಲಸ ತಪ್ಪಬಹುದು.

ನಮ್ಮ ಸರಕಾರಿ ನೌಕರರು ಆಲಸಿಗಳು ಎಂಬ ಸಾರ್ವತ್ರಿಕವಾದ ಅಭಿಪ್ರಾಯವಿದೆ. ಆದರೆ ಇದು ಪೂರ್ತಿ ನಿಜವಲ್ಲ. ಸರಕಾರಿ ಇಲಾಖೆಗಳಲ್ಲಿ ದಕ್ಷರೂ, ಪ್ರಾಮಾಣಿಕರೂ ಆಗಿರುವ ಸಾಕಷ್ಟು ಅಧಿಕಾರಿಗಳೂ ಇದ್ದಾರೆ. ಆದರೆ ಇಷ್ಟೇ ಪ್ರಮಾಣದಲ್ಲಿ ಇರುವ ಆಲಸಿಗಳಿಂದಾಗಿ ಇಡೀ ಸಿಬಂದಿ ವರ್ಗಕ್ಕೆ ಕಳಂಕ ತಟ್ಟಿದೆ. ಸರಕಾರಿ ನೌಕರಿಗೆ ಸೇರಿದರೆ ಸಾಕು ಕೆಲಸ ಮಾಡಬೇಕೆಂದಿಲ್ಲ ಎಂದು ಹೆಚ್ಚಿನವರ ಭಾವನೆ. ಹಾಗೆಂದು ಇಂಥ ಮನೋಭಾವ ಉಂಟಾಗಲು ಪೂರ್ತಿಯಾಗಿ ನೌಕರರೇ ಕಾರಣವಲ್ಲ. ಇದರಲ್ಲಿ ಆಳುವವರ ಪಾಲೂ ಇದೆ ಎನ್ನುವುದನ್ನು ಮರೆಯಬಾರದು. ಅಸಮರ್ಪಕ ನೇಮಕಾತಿ ನೀತಿ ನಿಯಮಾವಳಿಗಳು, ಪ್ರಾಮಾಣಿಕರಿಗೆ ಕಿರುಕುಳ, ತರ್ಕ ರಹಿತ ವರ್ಗಾವಣೆಗಳು ಹೀಗೆ ಆಡಳಿತದ ಕಡೆಯಿಂದಲೂ ಸಾಕಷ್ಟು ಲೋಪ ದೋಷಗಳಿವೆ. ಇದು ದಶಕಗಳಿಂದ ಜಡ್ಡುಗಟ್ಟಿರುವ ಒಂದು ಅವ್ಯವಸ್ಥೆ.

Advertisement

ಕೆಲ ಹಂತದ ಸಿಬಂದಿಗಳಲ್ಲಿ ದಕ್ಷತೆ ಬರಬೇಕಾದರೆ, ಅವರ ಮೇಲಧಿಕಾರಿಗಳು ದಕ್ಷರಾಗಿರಬೇಕು. ಒಟ್ಟಾರೆ ವ್ಯವಸ್ಥೆ ಸರಿಯಾಗಬೇಕಾದರೆ ಮೊದಲು ಮೇಲಿನ ಹಂತವನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಾಂಗ ವ್ಯವಸ್ಥೆಯಲ್ಲಿ ಆಗಿರುವ ಕೆಲವೊಂದು ಗುಣಾತ್ಮಕವಾದ ಬದಲಾವಣೆಗಳನ್ನು ಉದಾಹರಿಸಬಹುದು. ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬರುವುದು, ಅನಂತರ ಟೀ, ಕಾಫಿ ಎಂದು ಮಧ್ಯಾಹ್ನದ ತನಕ ಕಾಲ ತಳ್ಳುವುದು. ಊಟದ ವಿರಾಮದಲ್ಲಿ ಮನೆಗೆ ಹೋದವರು ವಾಪಾಸು ಬರುವ ಯಾವುದೇ ಖಾತರಿಯಿರುತ್ತಿರಲಿಲ್ಲ.

ಇದು ಕೇಂದ್ರ ಸರಕಾರದ ಆಡಳಿತ ಕಚೇರಿಗಳಲ್ಲಿ 2014ರಿಂದ ಮುಂಚೆ ಕಂಡು ಬರುತ್ತಿದ್ದ ದೃಶ್ಯ. ಆದರೆ ಮೋದಿ ಪ್ರಧಾನಿಯಾದ ಬಳಿಕ ತಾವೇ ಸ್ವತಹ ಬೆಳಗ್ಗೆ 9ಕ್ಕೂ ಮೊದಲೇ ಕಚೇರಿಗೆ ಬರುವ ಅಭ್ಯಾಸ ರೂಢಿಸಿಕೊಂಡರು. ಸಚಿವರು ಕೂಡ ಈ ಮೇಲ್ಪಂಕ್ತಿಯನ್ನು ಅನುಸರಿಸಲು ತೊಡಗಿದ ಬಳಿಕ ಕಚೇರಿಗಳ ಕಾಯಕ ಸಂಸ್ಕೃತಿಯೇ ಬದಲಾಯಿ. ಸಚಿವರೇ ಸಮಯಕ್ಕೆ ಸರಿಯಾಗಿ ಬರುವಾಗ ಅವರ ಕೈಕೆಳಗಿನ ಅಧಿಕಾರಿಗಳು ತಡ ಮಾಡಲು ಸಾಧ್ಯವೇ? ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳೆಲ್ಲ ಸಚಿವರಿಗಿಂತ ಮೊದಲೇ ಕಚೇರಿಯಲ್ಲಿರುವುದು ಅನಿವಾರ್ಯವಾಯಿತು. ಸಂಜೆ 6ಕ್ಕಿಂತ ಮೊದಲು ಯಾರೂ ಕಚೇರಿ ಬಿಡುವ ಹಾಗೇ ಇರಲಿಲ್ಲ. ಹೀಗೆ ಮೋದಿ ಸರಕಾರ ತಾನೇ ಮಾಡಿ ತೋರಿಸಿದ ಪರಿಣಾಮವಾಗಿ ಇಂದು ಅಧಿಕಾರಶಾಹಿಯಲ್ಲಿ ತುಸುವಾದರೂ ದಕ್ಷತೆ ತರಲು ಸಾಧ್ಯವಾಗಿದೆ. ರಾಜ್ಯದಲ್ಲೂ ಈ ಮೇಲ್ಪಂಕ್ತಿಯನ್ನು ಅನುಸರಿಸಬೇಕು. ಸಚಿವರೇ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಿದರೆ ಅವರ ಕೈಕೆಳಗಿನ ಅಧಿಕಾರಿಗಳೂ ಪಾಲಿಸುತ್ತಾರೆ. ಅಲ್ಲದೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಪದೇ ಪದೆ ವರ್ಗಾಯಿಸಿ ಕಿರುಕುಳ ನೀಡುವಂಥ ಪ್ರವೃತ್ತಿಗಳಿಗೆ ಕಡಿವಾಣ ಹಾಕುವುದು ಕೂಡ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next