Advertisement

ಕನ್ನಡ ಪರ ಹೋರಾಟಗಳಲ್ಲಿ ಒಂದಾಗುವ ಚಿತ್ರರಂಗ

01:22 AM May 25, 2019 | Team Udayavani |

ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು, ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ಈ ಸಾಲಿನ “ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹೋರಾಟದಲ್ಲಿ ನಾನೊಬ್ಬನೇ ಪಾಲ್ಗೊಳ್ಳಲಿಲ್ಲ, ಇಡೀ ಚಿತ್ರರಂಗವೇ ಕುಟುಂಬದ ರೀತಿಯಲ್ಲಿ ಭಾಗವಹಿಸಿತ್ತು ಎಂದು ಸ್ಮರಿಸಿದರು.

ಕೆಲವೊಮ್ಮೆ ನದಿ ನೀರಿನ ಸಮಸ್ಯೆ ಸೇರಿದಂತೆ ಕನ್ನಡಪರ ಹೋರಾಟಗಳಲ್ಲಿ ಬಣ್ಣದ ಲೋಕದವರು ಬಂದಿಲ್ಲ ಎಂದು ದೂರುತ್ತಾರೆ. ಕನ್ನಡ ಪರ ಹೋರಾಟಗಳಲ್ಲಿ ಬಣ್ಣದ ಲೋಕದವರಿಗಿಂತಲೂ ಶಾಸಕರು, ಸಂಸದರು ಭಾಗವಹಿಸಬೇಕು. ಅವರು ಹೋರಾಟದ ಅಖಾಡಕ್ಕಿಳಿದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದರು.

ಜಯಂತಿ ಅಮ್ಮ, ಬಾಂಡ್‌ ಶೈಲಿಯ ಪಾತ್ರಗಳಿಂದ ಹಿಡಿದು ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಪ್ಪಾಜಿ ಅವರನ್ನು ರಾಜ್‌ ಎಂದು ಕರೆಯುತ್ತಿದ್ದ ಬಣ್ಣದ ಲೋಕದ ಏಕೈಕ ಮಹಿಳೆ ಅಂದರೆ ಅದು, ಜಯಂತಿ ಅಮ್ಮ. ಅಪ್ಪಾಜಿ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ ಇವರಿಗೆ ಅಪ್ಪಾಜಿ ಹೆಸರಿನ ದತ್ತಿ ಪ್ರಶಸ್ತಿ ನೀಡುತ್ತಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಜಯಂತಿ, ಕನ್ನಡ ಸಾಹಿತ್ಯದ ಬಗ್ಗೆ ನನಗೆ ಗೌರವವಿದೆ. ಶ್ರೇಷ್ಠ ಕಾದಂಬರಿಕಾರರ ಚಿತ್ರಗಳಲ್ಲಿ ನಟಿಸಿದ ಸಂತಸವಿದೆ. ಬಣ್ಣದ ಲೋಕಕ್ಕೆ ಬರುವ ಮೊದಲು ಕನ್ನಡ ಸ್ಪಷ್ಟವಾಗಿ ಬರುತ್ತಿರಲಿಲ್ಲ. ಆಗ ನನಗೆ ಕನ್ನಡ ಕಲಿಸಿಕೊಟ್ಟ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ರಾಜ್‌ ಹೆಸರಿನ ದತ್ತಿ ಪ್ರಶಸ್ತಿಯನ್ನು ನನ್ನ ಮಗನ (ಶಿವರಾಜ್‌ಕುಮಾರ್‌) ಕೈಯಿಂದಲೇ ಪಡೆದಿರುವುದು ಮತ್ತಷ್ಟು ಖುಷಿ ಕೊಟ್ಟಿದೆ ಎಂದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಮಾತನಾಡಿ, ಗೋಕಾಕ್‌ ಚಳವಳಿ ಸೇರಿದಂತೆ ಅನೇಕ ಕನ್ನಡ ಪರ ಹೋರಾಟಗಳಲ್ಲಿ ಡಾ.ರಾಜ್‌ಕುಮಾರ್‌ ಮುಂಚೂಣಿಯಲ್ಲಿದ್ದರು. ಆದರೆ ಈಗ ಕನ್ನಡ ಭಾಷೆ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್‌ಕುಮಾರ್‌ ಅವರ ಸ್ಥಾನ ತುಂಬುವವರು ಬೇಕಾಗಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಇದ್ದರು.

ಕನ್ನಡ ಸಾಹಿತ್ಯ ಎಂದರೆ ಪ್ರೀತಿ: ರಾಜ್‌ಕುಮಾರ್‌ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದಾಗಮ ಪ್ರಶಸ್ತಿ ಜತೆ ಒಂದು ಲಕ್ಷ ರೂ.ನಗದು ಕೂಡ ಬಂದಿತ್ತು. ಆಗ ಈ ಮೊತ್ತವನ್ನು ಏನು ಮಾಡಬೇಕು ಎಂಬುವುದೇ ರಾಜ್‌ಕುಮಾರ್‌ ಅವರಿಗೆ ತಿಳಿಯಲಿಲ್ಲ. ಈ ಸಂಬಂಧ ಪಾರ್ವತಮ್ಮ ಅವರ ಜತೆಗೂ ಚರ್ಚೆ ಮಾಡಿದ್ದರು.

ನಂತರ ಚಿತ್ರ ನಿರ್ದೇಶಕರೊಬ್ಬರ ಸಲಹೆಯಂತೆ ಆ ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿ ದತ್ತಿ ಪ್ರಶಸ್ತಿ ಸ್ಥಾಪಿಸಿದರು. ಕನ್ನಡ ಸಾಹಿತ್ಯ ಅಂದರೆ ರಾಜಕುಮಾರ್‌ ಅವರಿಗೆ ಪ್ರೀತಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ನಿರ್ಮಾಪಕಿ ಪಾರ್ವ ತಮ್ಮ ರಾಜ್‌ಕುಮಾರ್‌ ಅವರ ಸಹೋದರ ಎಸ್‌.ಎ.ಚನ್ನೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next