Advertisement
ನನ್ನ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ “ವೀರ ಸಂಕಲ್ಪ’ ನನ್ನ ಮೊದಲ ಚಿತ್ರ. ಅದು 1962 ರಲ್ಲಿ ಶುರುವಾಗಿ 1964 ರಲ್ಲಿ ಬಿಡುಗಡೆಯಾಯ್ತು. ಅಲ್ಲಿಂದ ಇಲ್ಲಿಯವರೆಗೂ ಬಣ್ಣದ ಬದುಕು ಸಾಗಿ ಬಂದಿದೆ. ಈವರೆಗೆ ನಾನು ಹಿಂದಿರುಗಿ ನೋಡಿಲ್ಲ. ಸಿನಿಮಾ ನನ್ನ ಬದುಕು ಎಂದು ನಂಬಿದವನು ನಾನು. ನಾನಿಲ್ಲಿ ಬಹಳಷ್ಟು ಏಳು-ಬೀಳು ಕಂಡಿದ್ದೇನೆ, ನೋವು-ನಲಿವು ಉಂಡಿದ್ದೇನೆ, ಸಾಕಷ್ಟು ಸಕ್ಸಸ್ ಮತ್ತು ಫೇಲ್ಯೂರ್ ನೋಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಇಂತಹವನ ಲೈಫಲ್ಲೂ ಗಾಳಿ, ಬಿರುಗಾಳಿ, ಸಿಡಿಲು, ಗುಡುಗು, ಮಿಂಚು ಬಂದಿದೆ. ಅವೆಲ್ಲವನ್ನೂ ಅನುಭವಿಸಿ, ದಾಟಿ ಬಂದಿದ್ದೇನೆ ಮತ್ತು ಬದುಕಿದ್ದೇನೆ. ಸಿನಿಮಾ ಸುಲಭವಾದ ಬದುಕಲ್ಲ. ಅದಕ್ಕೆ ಆದಂತಹ ಸಾಕಷ್ಟು ಕಷ್ಟಗಳಿವೆ. ಯಾರ ಮನೆಯಲ್ಲೂ ಕೂಡ ಸಿನಿಮಾಗೆ ಹೋಗು ಅನ್ನೋದಿಲ್ಲ. ಬದಲಾಗಿ ಆ ರಂಗಕ್ಕೆ ಯಾಕೆ ಹೋಗ್ತಿàಯಾ ಅನ್ನುವವರೇ ಹೆಚ್ಚು. ಅಂತಹ ರಂಗದಲ್ಲಿ ನಾನು 55 ವರ್ಷ ಪೂರೈಸಿದ್ದೇನೆ ಎಂಬುದೇ ಖುಷಿಯ ವಿಷಯ.”ವೀರ ಸಂಕಲ್ಪ’ ನಂತರ ನನಗೆ ಸಾಲು ಸಾಲು ಸಿನಿಮಾಗಳು ಹುಡುಕಿ ಬಂದವು.
Related Articles
Advertisement
ಇವರೆಲ್ಲರೂ ನನ್ನ ಸಿನಿ ಜರ್ನಿಯಲ್ಲಿ ಜೊತೆಯಾದವರು. ಎಲ್ರೂ ನನ್ನ ಸಿನಿಮಾ ಅಂತ ಕಾಲ್‌ಶೀಟ್ ಕೊಟ್ಟು ಬೆನ್ನುತಟ್ಟಿದವರು. ಅವರಿಲ್ಲ ಅಂದಿದ್ದರೆ, ಈ ಕುಳ್ಳ ಇರುತ್ತಿರಲಿಲ್ಲ. ಎಲ್ಲರೂ ಶೇರ್ ಹೋಲ್ಡರ್ ಆಫ್ ದ್ವಾರಕೀಶ್ ಚಿತ್ರ. ಅಂತ ಕೆಲಸ ಮಾಡಿದವರು. ಅವೆಲ್ಲರಿಗೂ ನಾನು ಚಿರಋಣಿ. ಮದ್ರಾಸ್‌ನಲ್ಲಿ ಎಂಜಿಆರ್ ಅವರ ತಮಿಳು ಚಿತ್ರ ನೋಡಿದ್ದೆ. ಅದು ಸಿಂಗಾಪುರದಲ್ಲಿ ಚಿತ್ರೀಕರಣವಾಗಿತ್ತು. ಕನ್ನಡದವರು ನಾವೇಕೆ ವಿದೇಶದಲ್ಲೂ ಶೂಟಿಂಗ್ ಮಾಡಬಾರದು ಅಂತ ಯೋಚಿಸಿದೆ. ಅಂಥದ್ದೊಂದು ಐಡಿಯಾವನ್ನು ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಬಳಿ ಹೇಳಿದೆ. ಆಗ ಅವರು, “ದ್ವಾರಕೀಶ್ ನಿಮ್ಮ ಜೊತೆ ನಾನಿದ್ದೇನೆ’ ಅಂತ ಸಾಥ್ ಕೊಟ್ಟರು.
“ಸಿಂಗಾಪುರ್‌ನಲ್ಲಿ ರಾಜಾಕುಳ್ಳ’ ಎಂಬ ಸಿನಿಮಾ ಆಯ್ತು. ಮೊದಲು ಟೈಟಲ್ ಇಟ್ಟು ಆಮೇಲೆ ಕಥೆ ಮಾಡಿ ತೆಗೆದ ಚಿತ್ರ “ಸಿಂಗಾಪುರ್‌ನಲ್ಲಿ ರಾಜಾಕುಳ್ಳ’. ಲೊಕೇಷನ್ ನೋಡಿ ಅದಕ್ಕೆ ತಕ್ಕಂತಹ ಕಥೆ ಮಾಡಿದ್ವಿ. ಅಲ್ಲೊಂದು ಪಬ್ ನೋಡಿ, ಪಬ್ ಸೀನ್ ಮಾಡಿದ್ವಿ. ದೊಡ್ಡ ಬಿಲ್ಡಿಂಗ್ ನೋಡಿ, ಅಲ್ಲೊಂದು ಫೈಟ್ ಸೀನ್ ಇಟ್ವಿ. ಹೀಗೆ ಎಲ್ಲವೂ ನೋಡಿಕೊಂಡು ಮಾಡಿದ ಕಥೆ ಅದು. ಕನ್ನಡದಲ್ಲಿ ಸೂಪರ್ ಹಿಟ್ ಆಯ್ತು. ಇನ್ನು, ಕುಳ್ಳ ಸೀರಿಸ್ ಚಿತ್ರಗಳೂ ಬಂದವು. “ಕುಳ್ಳ ಏಜೆಂಟ್ 000′ ಸಿನಿಮಾ ಮಾಡೋಕೆ ಸ್ಫೂರ್ತಿ ಆಗಿದ್ದು, ಒಬ್ಬ ಮೆಡಿಕಲ್ ರೆಪ್! ಅವನು ಹೋಗುವಾಗ ಕೈಯಲ್ಲೊಂದು ಸೂಟ್‌ಕೇಸ್ ಹಿಡಿದು ಹೋಗುತ್ತಿದ್ದ. ಅದನ್ನು ನೋಡಿ, “ಜೇಮ್ಸ್ ಬಾಂಡ್’ ನೆನಪಾದ. ನಾನೇಕೆ ಬಾಂಡ್ ಸಿನಿಮಾ ಮಾಡಬಾರದು ಅಂತ ಆ ಚಿತ್ರ ಮಾಡಿದೆ. ನಾನು ಪರ್ಸನಾಲಿಟಿ ಇಲ್ಲ ಸೊನ್ನೆ, ಬುದ್ಧಿ ಇಲ್ಲ ಸೊನ್ನೆ, ಹೈಟ್ ಇಲ್ಲ ಸೊನ್ನೆ. ಹಾಗಾಗಿ “ಕುಳ್ಳ ಏಜೆಂಟ್ 000′ ಅಂತ ಟೈಟಲ್ ಇಟ್ಟಿದ್ದೆ. ನನಗೆ “ಆಪ್ತಮಿತ್ರ’ ದೊಡ್ಡ ಸಕ್ಸಸ್ ಕೊಡುತ್ತೆ ಅಂತ ಯಾವತ್ತೂ ಅನಿಸಿರಲಿಲ್ಲ. ಒಳ್ಳೆಯ ಚಿತ್ರ ಮಾಡಿದ ಖುಷಿ ಇತ್ತು. ದೊಡ್ಡಮಟ್ಟದಲ್ಲಿ ಸಕ್ಸಸ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಆದರೆ, ಸಿನಿಮಾ ಸಕ್ಸಸ್ ಆಗುತ್ತೆ ಅಂತ ಸೌಂದರ್ಯಗೆ ಮಾತ್ರ ಗೊತ್ತಿತ್ತು. ಆಕೆ ಧೈರ್ಯ ಕೊಟ್ಟಿದು. “ಮಾಮ ಯೋಚನೆ ಮಾಡಬೇಡಿ, ಈ ಚಿತ್ರ ಗೆಲ್ಲುತ್ತೆ. ಕ್ಲೈಮ್ಯಾಕ್ಸ್ ಒಂದೇ ಸಾಕು’ ಅಂದಿದ್ದಳು. ಅದು ನಿಜವಾಯ್ತು. ಮೊದಲ ಸಲ “ನೀ ಬರೆದ ಕಾದಂಬರಿ’ ಚಿತ್ರ ನಿರ್ದೇಶಿಸಿದೆ. ಮೊದಲ ನಿರ್ದೇಶನ ಹೇಗಿರುತ್ತೆ ಹೇಳಿ? ಅದು ಸೂಪರ್ ಹಿಟ್ ಆಯ್ತು. ಆಗ ಜಯಪ್ರದ ಕಾಲ್ ಮಾಡಿ, “”ಶರಾಬಿ’ ಚಿತ್ರದ ರೈಟ್ಸ್ ತಗೊಳ್ಳಿ. ನಾನು ಮಾಡ್ತೀನಿ’ ಅಂದ್ರು. ಜಯಪ್ರದ ನಾಯಕಿ, ವಿಷ್ಣುವರ್ಧನ್ ನಾಯಕ ಒಳ್ಳೇ ಜೋಡಿಯಾಗುತ್ತೆ ಅಂತ “ಶರಾಬಿ’ ರೈಟ್ಸ್ ತಂದೆ. ಆಗ ಜಯಪ್ರದ ಮಲಯಾಳಂ ಸಿನಿಮಾದಲ್ಲಿ ಬಿಜಿಯಾದರು. ಮೂರು ತಿಂಗಳು ಪೋಸ್ಟ್‌ಪೋನ್ ಮಾಡಿ, ಮಲಯಾಳಿ ಸಿನಿಮಾ ಮುಗಿಸಿ ಬರಿ¤àನಿ ಅಂದ್ರು. ಆದರೆ, ವಿಷ್ಣು ಡೇಟ್ ಸಿಕ್ಕಿತ್ತು. ನಾನು ನಾಯಕಿಗೇಕೆ ಕಾಯಬೇಕು ಅಂತ ಜಯಪ್ರದ ಬಿಟ್ಟು, ಜಯಸುಧ ಅವರನ್ನು ಹಾಕಿ ಸಿನಿಮಾ ತೆಗೆದೆ. ಅದೇ “ನೀ ತಂದ ಕಾಣಿಕೆ’. ಮೊದಲ ಪ್ರೊಜೆಕ್ಷನ್ ಹಾಕಿದೆ. ಪ್ರದರ್ಶಕರು, ವಿತರಕರು ಒಳ್ಳೇ ಆಫರ್ ಕೊಟ್ಟರು. ನಾನು ಕೊಡಲಿಲ್ಲ. ಆದರೆ, ಗೋವಿಂದ ಗೋವಿಂದ..!? ಎಷ್ಟೋ ಸಲ, ಸೋತಾಗ ಚಿತ್ರರಂಗದ ಸಹವಾಸವೇ ಬೇಡ ಅನಿಸಿದ್ದುಂಟು. ಹಾಗಂತ, ಶನಿವಾರ ಅನಿಸಿದರೆ, ಸೋಮವಾರ ಸಿನಿಮಾ ಮಾಡಿದ್ದೂ ಉಂಟು. ನಾನು ನನ್ನನ್ನು ಚೆನ್ನಾಗಿ ಕಂಡುಕೊಂಡಿದ್ದು ನಿರ್ದೇಶಕನಾಗಿ. ಯಾಕೆಂದರೆ, ಕಥೆ, ಪಾತ್ರ ಎಲ್ಲವೂ ನಿರ್ದೇಶಕನ ಕೈಯಲ್ಲಿದೆ. ನಿರ್ದೇಶಕ ಎಂಥದ್ದೇ ಚಿತ್ರ ಮಾಡಲಿ, ಮೊದಲ ಟಿಕೆಟ್ ಪಡೆದು ಒಳಗೆ ಹೋಗಿ ಚಿತ್ರ ನೋಡ್ತಾನಲ್ಲ, ಅವನಿಗೆ ಗೊತ್ತಿರುತ್ತೆ, ಈ ಚಿತ್ರ ಗೆಲ್ಲುತ್ತೋ, ಇಲ್ಲವೋ ಅಂತ. ಅಂತಹ ರಂಗದಲ್ಲಿ ನಾನು 55 ವರ್ಷ ಕಾಲ ಕಳೆದಿದ್ದೇನೆ. ಒಂದು ಮಾತಂತೂ ನಿಜ, “ಸಿನಿಮಾದ ಗೆಲುವು ಗೊತ್ತಿಲ್ಲದ ಹುಟ್ಟು’!
– ವಿಜಯ್ ಭರಮಸಾಗರ