ಕನ್ನಡದ ಕೆಲ ಸ್ಟಾರ್‌ನಟರ ಕೈಯಲ್ಲಿ ಸಾಮಾನ್ಯವಾಗಿ ಮೂರು, ಅಥವಾ ನಾಲ್ಕು ಚಿತ್ರಗಳು ಇದ್ದೇ ಇರುತ್ತವೆ. ಇದು ಹೊಸ ಸುದ್ದಿಯೇನಲ್ಲ. ಆದರೆ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಕೈಯಲ್ಲಿ ಎಷ್ಟು ಚಿತ್ರಗಳಿವೆ ಬರೋಬ್ಬರಿ ಒಂಭತ್ತು ಚಿತ್ರಗಳಿವೆ ಅಂದರೆ ನಂಬಲೇಬೇಕು. ಹೌದು, ಇದು ಅಚ್ಚರಿಯಾದರೂ ನಿಜ. ಪ್ರಶಸ್ತಿ ಬಂದಿದ್ದೇ ತಡ, ಸಂಚಾರಿ ವಿಜಯ್ ಅವರ ಸಿನಿಮಾ ಸಂಚಾರ ಬಲು ಜೋರಾಗಿಯೇ ಸಾಗಿದೆ. ಅವರೀಗ ಸಿಕ್ಕಾಪಟ್ಟೆ ಬಿಜಿಯೂ ಹೌದು.
ಅವರೀಗ ಒಪ್ಪಿಕೊಂಡಿರುವ ಒಂಭತ್ತು ಚಿತ್ರಗಳ ಪೈಕಿ ನಾಲ್ಕು ಚಿತ್ರಗಳು ಈ ವರ್ಷವೇ ಬಿಡುಗಡೆಯಾಗುತ್ತವೆ ಅನ್ನೋದು ವಿಶೇಷ. ಅವರೀಗ “ನನ್ ಮಗಳೇ ಹೀರೋಯಿನ್’, “ಕೃಷ್ಣ-ತುಳಸಿ’,”ಪಾದರಸ’, “ವರ್ತಮಾನ’, “ಪಿರಂಗಿಪುರ’, “ಮೇಲೊಬ್ಬ ಮಾಯಾವಿ’, “ವರ್ತಮಾನ’, “ತಲೆದಂಡ’ ಹಾಗೂ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಪೈಕಿ “ನನ್ ಮಗಳೇ ಹೀರೋಯಿನ್’ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇನ್ನುಳಿದಂತೆ “ಕೃಷ್ಣ-ತುಳಸಿ’, “ವರ್ತಮಾನ’, “ಪಾದರಸ’ ಚಿತ್ರಗಳು ಈ ವರ್ಷವೇ ಬಿಡುಗಡೆಯಾಗಲಿವೆ. ಇನ್ನು, ವಿಜಯ್ ಹೊಸದಾಗಿ ಒಪ್ಪಿಕೊಂಡಿರುವ ಸಿನಿಮಾಗಳೆಂದರೆ “ಆಟಕ್ಕುಂಟು ಲೆಕ್ಕಕ್ಕಿಲ್ಲ’, “ತಲೆದಂಡ’ ಮತ್ತು “ಆರನೇ ಮೈಲಿ’. ಇದರ ಜತೆಗೆ ಹಿರಿಯ ನಿರ್ದೇಶಕ ಭಗವಾನ್ ಅವರು ನಿರ್ದೇಶಿಸಲಿರುವ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರಕ್ಕೆ ಮಯೂರಿ ನಾಯಕಿ, ರಾಮಚಂದ್ರ ಎಂಬುವವರು ನಿರ್ದೇಶಕರು ಇದನ್ನು ಹೊರತುಪಡಿಸಿದರೆ, ಇನ್ನುಳಿದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಇನ್ನು, ಈಗಾಗಲೇ ಪೋಸ್ಟರ್ ಮೂಲಕವೇ ಕನ್ನಡದಲ್ಲಿ ಹೊಸ ಸಂಚಲನ ಮೂಡಿಸಿದ “ಪಿರಂಗಿಪುರ’ ಚಿತ್ರಕ್ಕೆ ತಯಾರಿ ನಡೆಯುತ್ತಿದೆ. ಇಷ್ಟರಲ್ಲೇ ಚಿತ್ರೀಕರಣಕ್ಕೆ ತಂಡ ಹೊರಡಲಿದೆ. ಅದೇನೆ ಇರಲಿ, ಒಮ್ಮೆಲೆ ಇಷ್ಟೊಂದು ಚಿತ್ರಗಳನ್ನು ಸಂಚಾರಿ ವಿಜಯ್ ಹೇಗೆ ಮ್ಯಾನೇಜ್ ಮಾಡ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತೆ. ಒಂದೇ ಹಂತದಲ್ಲಿ ಎರಡು, ಅಥವಾ ಮೂರು ತಿಂಗಳೊಳಗೆ ಒಂದೊಂದು ಸಿನಿಮಾ ಮುಗಿಸಿ, ಅದರ ಡಬ್ಬಿಂಗ್ ಕೆಲಸ ಮುಗಿಸಿಕೊಂಡು ಬೇರೊಂದು ಚಿತ್ರದ ಚಿತ್ರೀಕರಣಕ್ಕೆ ಅಣಿಯಾಗುತ್ತಾರೆ.
ಅವರಿಗೆ ಹೊಸಬರೇ ಕಥೆ ಹಿಡಿದು ಬರುತ್ತಿರುವುದು ಹೊಸ ಬೆಳವಣಿಗೆಯಾದರೆ, ಪ್ರಯೋಗಾತ್ಮಕ ಚಿತ್ರಗಳೇ ಹೆಚ್ಚು ಬರುತ್ತಿರುವುದು ಇನ್ನೊಂದು ವಿಶೇಷ. ಇದು ಕನ್ನಡ ಚಿತ್ರಗಳ ಸುದ್ದಿಯಾದರೆ, ತಮಿಳು ಹಾಗೂ ಮಲಯಾಳಂ ಚಿತ್ರರಂಗದಿಂದಲೂ ವಿಜಯ್‌ಗೆ ಸಾಕಷ್ಟು ಅವಕಾಶಗಳು ಬಂದಿದ್ದುಂಟು. ಆದರೆ, ವಿಜಯ್ ಅತ್ತ ವಾಲಲಿಲ್ಲ.
“ಇಲ್ಲೇ ಬಿಜಿಯಾಗಿರುವಾಗ, ಅತ್ತ ಯಾಕೆ ಹೋಗುವುದಾದರೂ ಯಾಕೆ ಎನ್ನುವ ವಿಜಯ್, ನನಗೆ ಯಾವ ಭಾಷೆ ಎಂಬುದು ಮುಖ್ಯವಲ್ಲ. ನಾನು ಎಲ್ಲೇ ಹೋದರೂ, ಏನಾದರೊಂದು ಹೊಸತನ್ನು ಕೊಡಬೇಕು ಎಂಬ ಆಸೆ. ಅದು ನಮ್ಮಲ್ಲೇ ಸಿಗುವಾಗ, ಬೇರೆ ಕಡೆ ಹೋಗುವ ಯೋಚನೆಯೇ ಇಲ್ಲ. ನನಗೆ ನಮ್ಮ ನೆಲ, ನಮ್ಮ ಜಾಗ ಇಷ್ಟ. ಇಲ್ಲೇ ಸೇಫ್ ಆಗಿದ್ದೇನೆ. ಈಗಂತೂ ಖುಷಿಯಾಗಿದ್ದೇನೆ’ ಎಂದಷ್ಟೇ ಹೇಳುತ್ತಾರೆ ವಿಜಯ್.