Advertisement

ಸಿನೆಮಾ: ಪೂರ್ಣಾಸನಕ್ಕೆ  ಇನ್ನೂ ಸಿಗದ ಅನುಮತಿ 

12:05 AM Feb 01, 2022 | Team Udayavani |

ಬೆಂಗಳೂರು: ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯ ಬಳಿಕವಾದರೂ ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶಕ್ಕೆ ಅವಕಾಶ ಸಿಗಬಹುದು ಎಂದುಕೊಂಡಿದ್ದ ಚಿತ್ರರಂಗದ ನಿರೀಕ್ಷೆ ಹುಸಿಯಾಗಿದೆ.

Advertisement

ಬಾರ್‌, ಪಬ್‌, ರೆಸ್ಟೋರೆಂಟ್‌, ಸಾರಿಗೆ, ಮಾರ್ಕೆಟ್‌… ಹೀಗೆ ಎಲ್ಲ ಕಡೆ ಪೂರ್ಣ ಪ್ರಮಾಣದ ಅವಕಾಶ ನೀಡಿದ ಸರಕಾರ ಚಿತ್ರರಂಗದ ವಿಚಾರದಲ್ಲಿ ಯಾಕೆ ಈ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಸಿನೆಮಾ ರಂಗದವರ ಪ್ರಶ್ನೆ. ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಪೂರ್ಣ ಪ್ರವೇಶಾತಿಗೆ ಮನವಿ ಮಾಡಿದ ವಾಣಿಜ್ಯ ಮಂಡಳಿಯ ನಿಯೋಗಕ್ಕೆ ಭರವಸೆಯಷ್ಟೇ ಸಿಕ್ಕಿದೆ. ನಿಖರವಾಗಿ ಚಿತ್ರಮಂದಿರ ಶೇ.100ರಷ್ಟು ಯಾವಾಗ ತೆರೆಯುತ್ತದೆ ಎಂದು ಹೇಳಿಲ್ಲ. ಇದರಿಂದಾಗಿ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಗೆ ತಯಾರಿ ಮಾಡಿಕೊಂಡಿರುವ ಸಿನೆಮಾ ತಂಡಗಳಲ್ಲಿ  ಆತಂಕ ಮೂಡಿದೆ.

ಒಂದು ಕಡೆ ಪಂಚರಾಜ್ಯಗಳ ಚುನಾವಣ ರ್‍ಯಾಲಿಗಳಲ್ಲೂ ಒಂದು ಸಾವಿರ ಮಂದಿಗೆ ಸೇರಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಒತ್ತೂತ್ತಾಗಿ ಜನ ಸಂಚರಿಸುತ್ತಿದ್ದಾರೆ.  ಹೀಗಿರುವಾಗ ಚಿತ್ರಮಂದಿರ ಗಳಿಗೆ ಮಾತ್ರ  50:50 ನಿಯಮವನ್ನು ಮುಂದುವರಿಸುತ್ತಿದೆ ಎಂಬ ಪ್ರಶ್ನೆಗೆ ಸರಕಾರದಿಂದ ಉತ್ತರ ಸಿಕ್ಕಿಲ್ಲ.

ಎರಡು ವರ್ಷಗಳಿಂದ ಕನ್ನಡ ಚಿತ್ರರಂಗ ಸಂಪೂರ್ಣ ನಲುಗಿ ಹೋಗಿದೆ. ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಪರಿಸ್ಥಿತಿಯಂತೂ ತೀರಾ ಹದಗೆಟ್ಟಿದೆ. ಇತ್ತ ಸಿನೆಮಾವನ್ನೇ ನಂಬಿ ಸಾಲ ಮಾಡಿರುವ ನಿರ್ಮಾಪಕರು ಸಿನೆಮಾ ಬಿಡುಗಡೆ ಮಾಡಲಾಗದೆ ಪರದಾಡುತ್ತಿದ್ದಾರೆ. ಸಿನೆಮಾವೊಂದು ಬಿಡುಗಡೆಯಾದರೆ ವಿತರಕನಿಂದ ಹಿಡಿದು ಚಿತ್ರಮಂದಿರ, ಅಲ್ಲಿನ ಸಿಬಂದಿ, ಅಕ್ಕಪಕ್ಕದ  ವ್ಯಾಪಾರ ಸಂಸ್ಥೆಗಳಿಗೂ  ಸಹಾಯವಾಗುತ್ತದೆ.

ಇದನ್ನೂ ಓದಿ:ಸಚಿವ ಆನಂದ ಸಿಂಗ್ ಡಿಕೆಶಿ ಮಾತುಕತೆಗೆ ರಾಜಕೀಯ ಮಹತ್ವವಿಲ್ಲ:ಸಚಿವ ಬಿ.ಶ್ರೀರಾಮುಲು

Advertisement

 ಸರತಿಯಲ್ಲಿವೆ 200ರಷ್ಟು ಚಿತ್ರಗಳು
ಸಿನೆಮಾಗಳನ್ನು ಸೆನ್ಸಾರ್‌ ಮಾಡಿಸಿಟ್ಟುಕೊಂಡ ತಂಡಗಳ ಪಟ್ಟಿ ದೊಡ್ಡದಿದ್ದು, ಸದ್ಯ 200ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಗೆ ಕಾಯುತ್ತಿವೆ. ಇದರಲ್ಲಿ ಸ್ಟಾರ್‌ ಸಿನೆಮಾಗಳೂ ಸೇರಿವೆ. ಕೋಟಿಗಟ್ಟಲೆ ಬಂಡವಾಳ ಹಾಕಿರುವ ಸಿನೆಮಾಗಳನ್ನು  ಶೇ. 50 ಪ್ರಮಾಣದ ಪ್ರೇಕ್ಷಕರಲ್ಲಿ ಬಿಡುಗಡೆ  ಮಾಡಲು ಯಾರೂ ಸಿದ್ಧರಿಲ್ಲ.

ರಾಜ್ಯದಲ್ಲಿ 615ಕ್ಕೂ ಹೆಚ್ಚು ಏಕ ಪರದೆ ಚಿತ್ರಮಂದಿರಗಳಿವೆ. ಇವುಗಳಲ್ಲಿ 8,000 ಉದ್ಯೋಗಿಗಳಿದ್ದು, ಅವರ ವೇತನಕ್ಕೆ ಮಾಲಕರು ವಾರ್ಷಿಕ 10 ಕೋಟಿ ರೂ. ಮೀಸಲಿಡಬೇಕಾಗುತ್ತದೆ.  ಇವುಗಳ ಜತೆಗೆ ಆಸ್ತಿ ತೆರಿಗೆ ವಿದ್ಯುತ್‌ ಬಿಲ್‌, ಥಿಯೇಟರ್‌ ಒಳಾಂಗಣ ನಿರ್ವಹಣೆ ಇತ್ಯಾದಿಗಳಿಗಾಗಿ  ವಾರ್ಷಿಕವಾಗಿ 9 ಕೋ. ರೂ.ಗೂ ಹೆಚ್ಚು ಮೊತ್ತ ಬೇಕಾಗುತ್ತದೆ.

ಎಲ್ಲ ಕ್ಷೇತ್ರಗಳಿಗೂ ಪೂರ್ಣಪ್ರಮಾಣದಲ್ಲಿ ಅವಕಾಶ ಕೊಟ್ಟು,ಚಿತ್ರರಂಗಕ್ಕೆ ಯಾಕೆ ಕೊಡುತ್ತಿಲ್ಲ? ಮುಖ್ಯಮಂತ್ರಿಗಳು ಯಾವಾಗಲೂ ಚಿತ್ರರಂಗದ ಪರವಾಗಿಯೇ ಇದ್ದು, ಚಿತ್ರರಂಗಕ್ಕೂ ಅವಕಾಶ ಕೊಡುವ ನಿರೀಕ್ಷೆ ಹಾಗೂ ನಂಬಿಕೆ ಇದೆ.
– ಶಿವರಾಜ್‌ಕುಮಾರ್‌, ನಟ

ವಿಮಾನದಲ್ಲಿ  ಅಕ್ಕಪಕ್ಕ ಕುಳಿತುಕೊಳ್ಳಬಹುದು, ಬಾರ್‌-ಪಬ್‌ಗಳಲ್ಲೂ ಶೇ.100 ಆಸನಗಳಿಗೆ ಅವಕಾಶವಿದೆ.  ಧಾರ್ಮಿಕ ಕೇಂದ್ರಗಳಲ್ಲೂ ಜನ ಒಟ್ಟಾಗಿರಬಹುದು. ಅಲ್ಲೆಲ್ಲೂ ಬಾರದ ಕೊರೊನಾ ವೈರಸ್‌ ಚಿತ್ರಮಂದಿರದಲ್ಲಿ ಮಾತ್ರ ಕುರ್ಚಿ ಬಿಟ್ಟು ಕುರ್ಚಿಯಲ್ಲಿ  ಕುಳಿತುಕೊಂಡಿರುವುದು  ವಿಪರ್ಯಾಸ!
– ಸುನಿ, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next