ಗ್ರಾಮೀಣ ಪ್ರದೇಶದಿಂದ ಪೇಟೆಗೆ ಬಂದು ಸಿನೆಮಾ ನೋಡುವುದು ತುಂಬಾ ದುಬಾರಿ. ಅಷ್ಟೇ ಅಲ್ಲದೆ ಪೇಟೆ ಮಲ್ಟಿಫ್ಲೆಕ್ಸ್‌ಗಳ ಸಿನೆಮಾ ವೀಕ್ಷಣೆ ದರ ಗ್ರಾಮೀಣ ಪ್ರದೇಶದವರಿಗೆ ಕಷ್ಟ ಸಾಧ್ಯ. ಮನೆ ಪಕ್ಕದಲ್ಲಿಯೇ ಥಿಯೇಟರ್ ಇದ್ದರೆ, ಅವರದ್ದೇ ಭಾಷೆಯ ಸಿನೆಮಾ ವೀಕ್ಷಿಸಲು ಗ್ರಾಮೀಣ ಪ್ರದೇಶದ ಜನತೆ ಬಂದೇ ಬರುತ್ತಾರೆ ಎಂಬುದು ಲೆಕ್ಕಾಚಾರ.
ಇಂತಹ ಲೆಕ್ಕಾಚಾರದೊಂದಿಗೆ ಗ್ರಾಮೀಣ ಭಾಗದಲ್ಲಿ ಸಿನೆಮಾ ಥಿಯೇಟರ್ ಮಾಡಬೇಕು ಎಂಬುದು ಈಗ ತುಳುಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಅವರ ಯೋಚನೆ.
ಕುಡ್ಲದಲ್ಲಿ ಸಿನೆಮಾಗಳಿಗೆ ಥಿಯೇಟರ್ ಸಿಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆ. ಇದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ “ಬ್ರಹ್ಮಾವರ್ ಸಿನೆಮಾಸ್’ ಎಂಬ ಹೊಸ ಸಿನೆಮಾ ಥಿಯೇಟರ್‌ಗಳನ್ನು ಶುರು ಮಾಡುವ ಯೋಜನೆಯನ್ನು ಅವರು ಹಾಕಿದ್ದಾರೆ.
ಹಿಂದೆ ಕರಾವಳಿಯಲ್ಲಿ ಸುಮಾರು 30 ಸಿಂಗಲ್ ಥಿಯೇಟರ್‌ಗಳಿದ್ದವು. ನಮಗೆ ಸುಮಾರು 40 ಥಿಯೇಟರ್‌ಗಳ ಆವಶ್ಯಕತೆ ಇದೆ. ಈಗ ಮಲ್ಟಿಫ್ಲೆಕ್ಸ್ ಸೇರಿದಂತೆ 12 ಥಿಯೇಟರ್‌ಗಳಿವೆ. ಇದನ್ನು ಗಮನಿಸಿಕೊಂಡು ಹೊಸ 10 ಥಿಯೇಟರ್‌ಗಳನ್ನು ಏಕಕಾಲದಲ್ಲಿ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಹೆಬ್ರಿ, ಕಿನ್ನಿಗೋಳಿ, ಪಡುಬಿದ್ರೆ, ಹಿರಿಯಡ್ಕ, ಮುಡಿಪು, ಬಜಪೆ, ಉಪ್ಪಿನಂಗಡಿ, ನೆಲ್ಯಾಡಿ, ವಿಟ್ಲ, ಮೇಲ್ಕಾರ್‌ಗಳಲ್ಲಿ ಮೊದಲ ಸುತ್ತಿನಲ್ಲಿ ಥಿಯೇಟರ್ ಮಾಡುವುದು ಅವರ ಯೋಚನೆ. ಇಲ್ಲಿ ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಕೂರುವ ಸೌಲಭ್ಯ, ಹವಾನಿಯಂತ್ರಿತ ವ್ಯವಸ್ಥೆಗಳಿರುತ್ತವೆ. ಸುಮಾರು 60ರಿಂದ 70 ಮಂದಿಗೆ ಕುಳಿ ತು ಕೊ ಳ್ಳುವ ವ್ಯವ ಸ್ಥೆಯ ಹಾಲ್‌ಗಳನ್ನು ಗುರುತಿಸಲಾಗಿದೆ. ಸ್ಥಳೀಯವಾಗಿ ಇರುವ ಅತ್ಯುತ್ತಮ ಕಟ್ಟಡಗಳಲ್ಲಿ ಹಾಲ್‌ಗಳನ್ನು ಲೀಸ್‌ಗೆ ಪಡೆದುಕೊಂಡು ಥಿಯೇಟರ್ ಆರಂಭಿಸುವುದು ಅವರ ಯೋಚನೆ. ಇಲ್ಲಿ ಟಿಕೇಟ್ ದರ ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಇರುವುದಿಲ್ಲ. ಬದಲಾಗಿ ಸಿಂಗಲ್ ಥಿಯೇಟರ್‌ನಂತೆ ಕಡಿಮೆ ಇರುತ್ತದೆ. ಎಲ್ಲ ಥಿಯೇಟರ್‌ಗಳನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಮಾಡಲು ಯೋಚಿಸಲಾಗಿದೆ.
ಹಿಂದೆ ಹಳ್ಳಿಗಳಲ್ಲಿ ಸಿನೆಮಾಗಳು ಚೆನ್ನಾಗಿ ಓಡುತ್ತಿದ್ದವು. ಆದರೆ ಈಗ ನಗರದಲ್ಲಿ ಎರಡು ಅಥವಾ ಮೂರು ವಾರಕ್ಕಿಂತ ಹೆಚ್ಚು ಕಾಲ ಸಿನೆಮಾಕ್ಕೆ ಥಿಯೇಟರ್ ಸಿಗುವುದು ಕಷ್ಟ. ಒಳ್ಳೆಯ ಸಿನೆಮಾ ಮಾಡಿದರೂ, ವೀಕ್ಷಕರಿಲ್ಲದೇ ಬೇಗನೆ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ. ಇದಕ್ಕಾಗಿ ಒಂದು ಪರ್ಯಾಯ ಮಾರ್ಗ ಹೊಸ ಥಿಯೇಟರ್‌ಗಳ ಸ್ಥಾಪನೆ. ಸಿನೆಮಾಕ್ಕೆ ದುಡ್ಡು ಹಾಕುವ ಬದಲು ಥಿಯೇಟರ್‌ಗೆ
ದುಡ್ಡು ಹಾಕೋಣ ಎಂಬುದು ರಾಜೇಶ್ ಬ್ರಹ್ಮಾವರ ಅಭಿಪ್ರಾಯ.
- ದಿನೇಶ್ ಇರಾ