ಒಂದು ಗ್ರಾಮ. ಆ ಗ್ರಾಮದ ಪಟೇಲನ ಮಗಳನ್ನೊಬ್ಬ ಪ್ರೀತಿಸೋ ಅದೇ ಗ್ರಾಮದ ಹುಡುಗ. ಇಬ್ಬರ ಪ್ರೀತಿಗೆ ಪಟೇಲನ ವಿರೋಧ. ಭಯಗೊಳ್ಳುವ ಆ ಪ್ರೇಮಿಗಳು, ಊರು ತೊರೆದು ಬೆಂಗಳೂರಿಗೆ ಪಲಾಯನ. ಗೊತ್ತಿಲ್ಲದ ನಗರದಲ್ಲಿ ಪಡುವ ಕಷ್ಟ, ಎದುರಾಗುವ ತೊಂದರೆಗಳೇ ಚಿತ್ರದ ಸಾರಾಂಶ. – ಇಂಥದ್ದೊಂದು ಕಥೆ ಇಟ್ಟುಕೊಂಡು, ಬಹುತೇಕ ಹೊಸಬರೇ ಸೇರಿಕೊಂಡು “ಪ್ರೀತಿಯ ಅಂಬಾರಿ’ ಎಂಬ ಚಿತ್ರ ಮಾಡುತ್ತಿದ್ದಾರೆ.
ನವೆಂಬರ್ ಮೊದಲ ವಾರದಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಆ ಬಗ್ಗೆ ಹೇಳಲೆಂದೇ ಚಿತ್ರತಂಡವನ್ನು ಪತ್ರಕರ್ತರ ಮುಂದೆ ಕರೆ ತಂದಿದ್ದರು ನಾಯಕ ಕಮ್ ನಿರ್ದೇಶಕ ವಿಜಿ ಕೀಲಾರ. ಮೊದಲು ಮಾತಿಗಿಳಿದ ವಿಜಿ ಕೀಲಾರ ಹೇಳಿದ್ದಿಷ್ಟು. “ಇದೊಂದು ಪುಟ್ಟ ಕಥೆ. ಇದು ನನ್ನ ಮೊದಲ ಪ್ರಯತ್ನ. ನಾನೇ ನಾಯಕ, ನಾನೇ ನಿರ್ದೇಶಕ. ನನ್ನೊಂದಿಗೆ ಇರುವ ಎಲ್ಲರಿಗೂ ಮೊದಲ ಪ್ರಯತ್ನವಿದು.
ಎಲ್ಲಾ ಚಿತ್ರಗಳಲ್ಲೂ ಪ್ರೀತಿ ಸಹಜ. ಹಾಗೆಯೇ ಇಲ್ಲೂ ಪ್ರೀತಿ ಇದೆ. ಹಾಗಂತ ಅದು ವಿಶೇಷವಾದದ್ದೇನೂ ಅಲ್ಲ. ಆದರೆ, ನೈಜತೆ ಇಟ್ಟುಕೊಂಡು ಚಿತ್ರ ಮಾಡಲು ಹೊರಟಿದ್ದೇನೆ. ಮಾಸ್ ಮತ್ತು ಕ್ಲಾಸ್ ಇವೆರೆಡರ ಮಿಶ್ರಣ ಇಲ್ಲಿರಲಿದೆ. ನನಗೆ ಹೆಚ್ಚು ಅನುಭವ ಇಲ್ಲ. ಆದರೆ, ಹೀರೋ ಆಗಬೇಕು ಅಂತ ಐದು ವರ್ಷಗಳ ಕಾಲ ಸೈಕಲ್ ತುಳಿದೆ. ಅದೆಷ್ಟೋ ಸಲ ಅವಕಾಶ ಕೇಳಿಕೊಂಡು ಹೋದರೂ, ಹೇಳಿಕೊಳ್ಳವ ಅವಕಾಶ ಸಿಗಲಿಲ್ಲ.
ಕೊನೆಗೆ ನಾನೇ ಒಂದು ಕಥೆ ಮಾಡಿ, ಚಿತ್ರ ಮಾಡುವ ಯೋಚನೆ ಮಾಡಿದೆ. ಆ ಯೋಚನೆಯೇ “ಪ್ರೀತಿಯ ಅಂಬಾರಿ’. ಮೈಸೂರು, ಮಂಡ್ಯ ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಮಂಡ್ಯ ಭಾಷೆಯೊಂದಿಗೆ ಚಿತ್ರ ಮೂಡಿಬರಲಿದೆ’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಆನಂದ ಕೆಬ್ಬಳ್ಳಿ ಮತ್ತು ಮಂಜುನಾಥ ನಿರ್ಮಾಪಕರು. ಈ ಪೈಕಿ ಫೈನಾನ್ಸ್ ಮಾಡಿಕೊಂಡಿರುವ ಮಂಜುನಾಥ್‌ಗೆ, ಒಂದು ಸಿನಿಮಾ ಮಾಡುವ ಯೋಚನೆ ಇತ್ತು.
ವಿಜಿ ಕೀಲಾರನ ಪ್ರತಿಭೆ ನೋಡಿ, ಅವಕಾಶ ಕೊಟ್ಟಿದ್ದೇನೆ ಅಂದರು. ಆನಂದ ಕೆಬ್ಬಳ್ಳಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಅವರಿಗೆ ವಿಜಿ ಕೀಲಾರ ದೂರದ ಸಂಬಂಧಿ. ಹಾಗಾಗಿ, ಈ ಚಿತ್ರಕ್ಕೆ ಕೈ ಜೋಡಿಸಿದ್ದಾರಂತೆ. ಚಿತ್ರಕ್ಕೆ ಕೌಶಿಕ್ ಸಂಗೀತ ನೀಡುತ್ತಿದ್ದಾರೆ. ಅವರಿಗಿದು ಮೊದಲ ಚಿತ್ರ. ಎರಡು ಹಾಡಿಗೆ ಗೀತೆ ರಚಿಸಿರುವ ಕೌಶಿಕ್, ಯಾರ ಬಳಿಯೂ ಕೆಲಸ ಕಲಿತಿಲ್ಲ. ಆದರೆ, ಆಲ್ಬಂ ಕೆಲಸ ನೋಡಿ, ನಿರ್ದೇಶಕರು ನಂಬಿಕೆ ಇಟ್ಟು ಕೆಲಸ ಕೊಟ್ಟಿದ್ದಾರಂತೆ.
ನಾಯಕಿ ದಿವ್ಯಾಗೆ ಇದು ಮೊದಲ ಚಿತ್ರ. ಅವರಿಗೆ ನಟನೆ ಮಾಡುವ ಆಸೆ ಇತ್ತು. ಮೊದಲು ಅಭಿನಯ ತರಂಗದಲ್ಲಿ ಒಂದು ವರ್ಷ ನಟನೆ ತರಬೇತಿ ಪಡೆದು ಇಲ್ಲಿ ನಾಯಕಿಯಾಗಿದ್ದಾರೆ. ಒಳ್ಳೆಯ ಕಥೆ, ಪಾತ್ರವಿದೆ. ಹೊಸಬರ ತಂಡಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಅಂದರು ದಿವ್ಯಾ. ಜಗದೀಶ್ ಇಲ್ಲಿ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ “ತಿಥಿ’ ಖ್ಯಾತಿಯ ತಮ್ಮಣ್ಣ, ಸವಿತಾ ಕೃಷ್ಣಮೂರ್ತಿ ಇತರೆ ಹೊಸ ಕಲಾವಿದರು ನಟಿಸುತ್ತಿದ್ದಾರೆ. ನಾಗೇಶ್ ಆಚಾರ್ಯ ಕ್ಯಾಮೆರಾ ಹಿಡಿಯಲಿದ್ದಾರೆ.