“ವಾರಕ್ಕೆ ಮೂರ್‍ನಾಲ್ಕು ಸಿನಿಮಾಗಳು ಬಿಡುಗಡೆಯಾದರೆ ಚಿತ್ರದ ಚಿತ್ರಮಂದಿರಗಳು ಸಿಗುವುದಿರಲಿ, ಪೋಸ್ಟರ್ ಅಂಟಿಸುವುದಕ್ಕೂ ಜಾಗ ಸಿಗುವುದಿಲ್ಲ. ಇನ್ನು ಜನ ಚಿತ್ರ ನೋಡದಿದ್ದರೆ, ನಮ್ಮ ಕೋಟಿ ಕನಸುಗಳು ನುಚ್ಚುನೂರಾಗುತ್ತವೆ. ಅದಕ್ಕಾಗಿ ನೀವು ನನ್ನನ್ನು ಹರಸಿ. ಆ ಭಗವಂತ ನಿಮ್ಮ ಜೊತೆಯಲ್ಲಿರುತ್ತಾನೆ …’
ಎಂದು ಒಂದು ತಿಂಗಳ ಹಿಂದೆಯೇ ಜಾಹೀರಾತು ನೀಡಿದ್ದರು ನಿರ್ದೇಶಕ ವಿಜಯ್ ಮಹೇಶ್. ಈ ಮೂಲಕ ಜೂನ್ 30ಕ್ಕೆ ಬೇರೆ ಯಾರೂ ಚಿತ್ರ ಬಿಡುಗಡೆ ಮಾಡದೆಯೇ, ಆಶೀರ್ವದಿಸಿ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು. ಆದರೂ ಅವರ “ನಾನೊಬ್ನೆ ಒಳ್ಳೆವ್ನು’ ಚಿತ್ರದ ಜೊತೆಗೆ ಈ ವಾರ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ.
“ಹೇಳ್ಳೋದು ನಮ್ಮ ಕರ್ತವ್ಯ. ಕೇಳ್ಳೋದು, ಬಿಡೋದು ಬೇರೆ ನಿರ್ಮಾಪಕರಿಗೆ ಬಿಟ್ಟಿದ್ದು’ ಎನ್ನುವ ವಿಜಯ್ ಇದೊಂದು ಒಳ್ಳೆಯ ಸಿನಿಮಾ ಎಂಬುದನ್ನು ಹೇಳಲು ಮರೆಯುವುದಿಲ್ಲ. ದುಡ್ಡು ಕೊಟ್ಟು ಬರುವ ಪ್ರೇಕ್ಷಕರಿಗೆ ಯಾವ ರೀತಿಯಲ್ಲೂ ಚಿತ್ರ ಮೋಸ ಮಾಡುವುದಿಲ್ಲ. ಜನ ಧೈರ್ಯವಾಗಿ ಬಂದು ಸಿನಿಮಾ ನೋಡಬಹುದು. ಚಿತ್ರದಲ್ಲಿ ಒಂಬತ್ತು ಹಾಡುಗಳಿವೆ. ಅದರಲ್ಲಿ ಎರಡು ಹಾಡುಗಳನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಿದ್ದೇವೆ. ಇನ್ನೆರೆಡು ಹಾಡನ್ನು ಒರಿಜಿನಲ್ ಮಳೆಯಲ್ಲೇ 12 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ.
ಈ ಚಿತ್ರದಲ್ಲಿ ಅವರೊಂದು ಸಂದೇಶ ಹೇಳುವುದಕ್ಕೆ ಹೊರಟಿದ್ದಾರಂತೆ. ಕಾಲೇಜು ಇರುವುದು ಮಜಾ ಮಾಡುವುದಕ್ಕಲ್ಲ, ಸಾಧನೆ ಮಾಡುವುದಕ್ಕೆ ಎಂದು ಅವರು ಯುವಕರಿಗೆ ಹೇಳಿದರೆ, ಸಣ್ಣ-ಸಣ್ಣ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವುದರಿಂದ ಏನೆಲ್ಲಾ ಅನಾಹುತಗಳಾಗುತ್ತದೆ ಎಂಬ ಸಂದೇಶವನ್ನು ಯುವತಿಯರಿಗೆ ಹೇಳುತ್ತಿದ್ದಾರೆ. “ಚಿತ್ರದಲ್ಲಿ ಸಂದೇಶದ ಜೊತೆಗೆ ಪಂಚಿಂಗ್ ಡೈಲಾಗು, ಟಪ್ಪಾಂಗುಚ್ಚಿ, “ಮುಂಗಾರು ಮಳೆ’ಯ ಹಸಿರು ವಾತಾವರಣ’ ಎಲ್ಲವೂ ಇದೆ ಎನ್ನುತ್ತಾರೆ ಅವರು.
“ನಾನೊಬ್ನೆ ಒಳ್ಳೆವ್ನು’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಅವರೇ ಹೊತ್ತಿದ್ದಾರೆ. ಟಿ.ಎಂ. ಬಸವರಾಜ್ ನಿರ್ಮಾಣ ಮಾಡಿದರೆ, ಚಿತ್ರದಲ್ಲಿ ವಿಜಯ್ ಜೊತೆಗೆ ಸೌಜನ್ಯ, ರವಿತೇಜ, ಆ್ಯನಿ ಪ್ರಿನ್ಸ್, ಮೂರ್ತಿ ಮುಂತಾದವರು ನಟಿಸಿದ್ದಾರೆ. ಸುಧೀರ್ ಶಾಸಿŒ ಅವರ ಸಂಗೀತ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.