Advertisement

ಸಿನಿಮಾ ಸೋಲು: ಜಾಹಿರಾತು ಸಂಸ್ಥೆ ಮಾಲೀಕನ ಅಪಹರಿಸಿದ ಚಿತ್ರ ತಂಡ ಸೆರೆ!

12:05 PM May 28, 2017 | Team Udayavani |

ಬೆಂಗಳೂರು: ಸಿನಿಮಾಕ್ಕೆ ಸೂಕ್ತ ರೀತಿಯಲ್ಲಿ ಪ್ರಚಾರ ಮಾಡದ ಜಾಹಿರಾತು ಸಂಸ್ಥೆಯ ಮಾಲೀಕನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಸಿನಿಮಾ ನಿರ್ದೇಶಕ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಾರೆ. ಇತ್ತೀಚೆಗೆ ತೆರೆ ಕಂಡಿದ್ದ ನಟ ವಿಜಯರಾಘವೇಂದ್ರ ಅವರ “ಎರಡು ಕನಸು’ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ಮದನ್‌, ಸಹ ನಿರ್ದೇಶಕ ಚಲಪತಿ, ಕಿರಣ್‌, ಮೂರ್ತಿ ಹಾಗೂ ಮೋಹನ್‌ ಬಂಧಿತ ಆರೋಪಿಗಳು.  

Advertisement

“ಎರಡು ಕನಸು’ ಚಿತ್ರವನ್ನು ಮದನ್‌ ನಿರ್ದೇಶಿಸಿ, ನಿರ್ಮಿಸಿದ್ದರು. ಸಿನಿಮಾದ ಪ್ರಚಾರದ ಹೊಣೆಯನ್ನು 16 ಲಕ್ಷ ರೂ.ಗಳಿಗೆ “ರವಿ ಅಕ್ಷಯ್‌ ಅಡ್ವಟೈಸಿಂಗ್‌’ ಸಂಸ್ಥೆಯ ಮಾಲೀಕ ಪರಮೇಶ್‌ಗೆ ವಹಿಸಲಾಗಿತ್ತು. ಆದರೆ, ಬಿಡುಗಡೆಯಾದ ಒಂದೆರಡು ದಿನಗಳಲ್ಲೇ ಸಿನಿಮಾ ಸೋತಿತ್ತು. ಇದರಿಂದ ಅಸಮಾಧಾನಗೊಂಡ ಮದನ್‌, ಸೂಕ್ತ ರೀತಿಯಲ್ಲಿ ಚಿತ್ರಕ್ಕೆ ಪ್ರಚಾರ ಸಿಗದಿದ್ದರಿಂದಲೇ ಸೋಲಾಗಿದೆ ಎಂದು ಭಾವಿಸಿ, ಪರಮೇಶ್‌ಜೊತೆ ಜಗಳವಾಡಿದ್ದ.

ಪ್ರಚಾರಕ್ಕೆ ನೀಡಿದ್ದ 16 ಲಕ್ಷದ ಪೈಕಿ 8 ಲಕ್ಷವನ್ನು ವಾಪಸ್‌ ಕೊಡುವಂತೆ ತಿಳಿಸಿದ್ದ. ಆದರೆ, ಮೂರು ಲಕ್ಷ ರೂ.ಗಳನ್ನು ಕೊಡುವುದಾಗಿ ಆರಂಭದಲ್ಲಿ ಒಪ್ಪಿದ್ದ ಪರಮೇಶ್‌, ನಂತರ ಫೋನ್‌ ಕರೆಗಳಿಗೂ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಮದನ್‌, ಸಹ ನಿರ್ದೇಶಕ  ಚಲಪತಿ ಜತೆ ಈ ವಿಚಾರ ಚರ್ಚೆ ನಡೆಸಿ ಅಪಹರಿಸಿಯಾದರೂ ಹಣ  ವಸೂಲಿ ಮಾಡಬೇಕೆಂದು ನಿರ್ಧರಿಸಿದ್ದ. 

ಚಲಪತಿ ಅದಾಗಲೇ “ವೇಗ’ ಎಂಬ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದ. ಈ ಚಿತ್ರಕ್ಕೆ ಪ್ರಚಾರ ಮಾಡುವ ನೆಪ ಮುಂದಿಟ್ಟುಕೊಂಡು ಆರೋಪಿಗಳು ಚಲಪತಿ ಮೂಲಕ ಪರಮೇಶ್‌ಗೆ ಕರೆ ಮಾಡಿದ್ದರು. ಇದರ ಬಗ್ಗೆ ಚರ್ಚಿಸಲು ಬಸವೇಶ್ವರನಗರದ ಪುಷ್ಪಾಂಜಲಿ ಟಾಕೀಸ್‌ ಬಳಿ ಬರುವಂತೆಯೂ ಪರಮೇಶ್‌ಗೆ ತಿಳಿಸಿದ್ದರು.

ಸ್ಥಳಕ್ಕೆ ಬಂದ ಪರಮೇಶ್‌ನನ್ನು ಚಲಪತಿ ಹಾಗೂ ಇತರೆ ಆರೋಪಿಗಳು ಕಾರಿನಲ್ಲಿ ಅಪಹರಿಸಿ ದೇವನಹಳ್ಳಿಯ ಕಾಡಯರಪ್ಪನಹಳ್ಳಿಯ ತೋಟದ ಮನೆಗೆ ಕರೆದೊಯ್ದು ಮೂರು ದಿನಗಳ ಕಾಲ ಗೃಹ ಬಂಧನದಲ್ಲಿರಿಸಿ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದರು. ಬಳಿಕ ಪರಮೇಶ್‌ ತಂದೆ ಗುರುಸಿದ್ದಯ್ಯ ಅವರಿಗೆ ಕರೆ ಮಾಡಿ 8 ಲಕ್ಷ ರೂ. ತರುವಂತೆ ಬೇಡಿಕೆ ಇಟ್ಟಿದ್ದರು.

Advertisement

ಇದರಿಂದ ಆತಂಕಕ್ಕೊಳಗಾದ ಗುರುಸಿದ್ದಪ್ಪ ಮಾಗಡಿ ರಸ್ತೆ ಠಾಣೆಗೆ ಮೇ.26ರಂದು ಅಪಹರಣದ ಬಗ್ಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

ದಾರಿ ತಪ್ಪಿಸಿದ ಅಪಹರಣಕಾರರು
ಮಾಗಡಿ ರಸ್ತೆ ಠಾಣೆ ಮತ್ತು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳು ಗುರುಸಿದ್ದಪ್ಪ ಅವರಿಗೆ ಕರೆ ಮಾಡಿದ ಲೋಕೇಷನ್‌ ಮೊದಲು ಪತ್ತೆ ಹಚ್ಚಿದ್ದಾರೆ. ಬಳಿಕ ಹಣ ತರುತ್ತಿರುವುದಾಗಿ ಗುರುಸಿದ್ದಪ್ಪ ಅವರ ಮೂಲಕ ಅಪಹರಣಕಾರರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಗುರುಸಿದ್ದಪ್ಪ ಅವರ ತೊದಲು ಮಾತಿನಿಂದ ಅನುಮಾನಗೊಂಡ ಆರೋಪಿಗಳು, ಮೊದಲಿಗೆ ಹೆಬ್ಟಾಳದ ಫ್ಲೈಓವರ್‌ ಬಳಿ ಬರುವಂತೆ ಸೂಚಿಸಿದ್ದರು.

ಕೆಲ ಸಮಯದ ಬಳಿಕ ನೆಲಮಂಗಲ ಬಳಿಯ ಕನ್ನಮಂಗಲ ಗೇಟ್‌ ಬಳಿ ಬರುವಂತೆ ಹೇಳಿದ್ದಾರೆ. ತಕ್ಷಣ ಸುಮಾರು 10ಕ್ಕೂ ಅಧಿಕ ಮಂದಿಯ ಪೊಲೀಸರ ತಂಡ ಗುರುಸಿದ್ದಪ್ಪ ಅವರು ಹೋಗುವ ಮೊದಲೇ ಸ್ಥಳದಲ್ಲಿ ಬಿಡುಬಿಟ್ಟಿತ್ತು. ಹಣದ ನಿರೀಕ್ಷೆಯಲ್ಲಿ ಬಂದಿದ್ದ ಐವರು ಆರೋಪಿಗಳನ್ನು ಕೂಡಲೇ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next