ಇನ್ನೇನು ಎಲ್ಲರೂ ಏಳಬೇಕು ಎನ್ನುವಷ್ಟರಲ್ಲಿ ಒಂದು ಪ್ರಶ್ನೆ ಎದುರಾಯಿತು. ಚಿತ್ರದಲ್ಲಿ ಸ್ವಲ್ಪ ಗೊಂದಲ ಜಾಸ್ತಿಯಾಯಿತು. ಯಾಕೆ ಆ ಗೊಂದಲ ಎಂಬ ಪ್ರಶ್ನೆ ಬರುತ್ತಿದ್ದಂತೆಯೇ, ಇಟ್ಟಿದ್ದ ಮೈಕನ್ನು ಮೇಲಕ್ಕೆತ್ತುಕೊಂಡರು ಸೂರಿ. “ಸಿನಿಮಾ ಎಂದರೆ ಹೀಗೇ ಇರಬೇಕು ಅಂತೇನಿಲ್ಲ. ನಾನು ಮಾಡಿರುವ ಪ್ರಯೋಗ ಹೊಸದೇನಲ್ಲ. ತುಂಬಾ ಆಗಿದೆ. “ಕಡ್ಡಿಪುಡಿ’ ಚಿತ್ರದಿಂದ ನಾನು ಈ ತರಹದ ಪ್ಯಾಟರ್ನ್ ಪ್ರಯತ್ನ ಮಾಡುತ್ತಿದ್ದೀನಿ.
ಅದಕ್ಕೆ ಕಾರಣವೂ ಇದೆ. ಚಿತ್ರದ ಕಥೆ ಬಹಳ ಥಿನ್ ಆಗಿದೆ. ಅದನ್ನು ಬೇರೆ ತರಹ ಹೇಳುವ ಪ್ರಯತ್ನ ಮಾಡಬೇಕು. ಸಿನಿಮಾ ಎಂದರೆ ಬೆಚ್ಚಿಬೀಳಿಸಬೇಕು. ಒಂದು ಸಾಧಾರಣ ಕಥೆ ಬೆಚ್ಚಿಬೀಳಿಸಬೇಕು ಎಂದರೆ, ಬೇರೆ ತರಹದ ಪ್ರಯೋಗಗಳನ್ನು ಮಾಡಬೇಕು. ಇದರಿಂದ ಚಿತ್ರದ ಮಾರ್ಕೆಟ್ ಹೇಗಿತ್ತು, ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ಅನ್ನೋದು ಮುಖ್ಯ ಅಲ್ಲ. ಜನರಿಗೆ ತಲುಪಿತಾ ಅನ್ನೋದಷ್ಟೇ ಮುಖ್ಯ’ ಎನ್ನುತ್ತಾರೆ ಸೂರಿ.
ಅಂದ ಹಾಗೆ, ಸೂರಿ ಮಾತನಾಡಿದ್ದು ಚಿತ್ರದ ಸಂತೋಷಕೂಟದಲ್ಲಿ. ಅದನ್ನು ಸಂತೋಷಕೂಟ ಎನ್ನಬೇಕೋ ಅಥವಾ ಧನ್ಯವಾದ ಕೂಟ ಎನ್ನಬೇಕೋ ಗೊತ್ತಿಲ್ಲ. ಏಕೆಂದರೆ, ಚಿತ್ರತಂಡದವರೆಲ್ಲರೂ ಅಂದು ಥ್ಯಾಂಕ್ಸ್ ಹೇಳ್ಳೋದಕ್ಕೆ ಬಂದಿದ್ದರು. ಹಾಗೆಯೇ ಥ್ಯಾಂಕ್ಸ್ ಹೇಳಿದರು ಕೂಡಾ. ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ, ಪ್ರಚಾರ ಕೊಟ್ಟ ಮಾಧ್ಯಮದವರಿಗೆ, ಸಹಕಾರ ಕೊಟ್ಟ ಚಿತ್ರತಂಡದವರಿಗೆ … ಹೀಗೆ ಎಲ್ಲರೂ ಇನ್ನೊಬ್ಬರಿಗೆ ಧನ್ಯವಾದ ಹೇಳುವುದಕ್ಕೆ ತಮ್ಮ ಮಾತುಗಳನ್ನು ಮೀಸಲಾಗಿಟ್ಟರು.
ಅಂದು ನಿರ್ದೇಶಕ ಸೂರಿ ಜೊತೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್, ಸಂಗೀತ ನಿರ್ದೇಶಕ ಚರಣ್ ರಾಜ್, ಛಾಯಾಗ್ರಾಹಕ ಮಹೇಂದ್ರ ಸಿಂಹ, ಚಿತ್ರಕ್ಕೆ ಸಂಭಾಷಣೆಗಳನ್ನು ಬರೆದು ಮಂಜು ಮಾಸ್ತಿ, ನಟರಾದ ಶಿವರಾಜಕುಮಾರ್, ವಸಿಷ್ಠ ಸಿಂಹ, ಧನಂಜಯ್, ಮಾನ್ವಿತಾ ಹರೀಶ್, ಭಾವನಾ ಮೆನನ್, ಸುಧೀರ್ ಸೇರಿದಂತೆ ಹಲವರು ಹಾಜರಿದ್ದರು. ಎಲ್ಲರೂ ಚಿತ್ರ ರೂಪುಗೊಂಡಿದ್ದರ ಜೊತೆಗೆ, ಈಗ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದರು.
ಇನ್ನು “ಟಗರು 2′ ಚಿತ್ರದ ಬಗ್ಗೆಯೂ ಮಾತು ಬಂತು. ಈ ಬಗ್ಗೆ ಮೊದಲು ಮಾತನಾಡಿದ ಶಿವರಾಜಕುಮಾರ್, “ಏನೋ ಗಿಮಿಕ್ ಮಾಡಿದ್ದಾರೆ. ಮುಂದುವರೆದ ಭಾಗ ಬಂದರೆ ಚೆನ್ನಾಗಿರುತ್ತದೆ. ನನ್ನ ಹತ್ತಿರ ಒಂದಿಷ್ಟು ವಿಷಯಗಳಿವೆ. ಇವೆಲ್ಲಾ ಮುಗಿದ ಮೇಲೆ ಸೂರಿ ಜೊತೆಗೆ ಮಾತಾಡುತ್ತೀನಿ’ ಎಂದರು. ಇನ್ನು ಇದೇ ವಿಷಯವನ್ನು ಸೂರಿ ಬಳಿ ಕೇಳಿದಾಗ, “ಶಿವರಾಜಕುಮಾರ್ ಅವರ ಪಾತ್ರವನ್ನು ಎಷ್ಟು ಬೇಕಾದರೂ ಮುಂದುವರೆಸಬಹುದು’ ಎಂದು ಹೇಳುವ ಮೂಲಕ ಪತ್ರಿಕಾಗೋಷ್ಠಿ ಮುಗಿಸಿದರು.