Advertisement

ಸಿನಿಮಾ ಪ್ರೇರಿತ ಆಭರಣ ಚೋರರ ಸೆರೆ

10:17 AM Mar 24, 2018 | Team Udayavani |

ಬೆಂಗಳೂರು: ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಧಾರಾವಾಹಿಗಳು, ಸಿನಿಮಾಗಳು ಮತ್ತು ಪೊಲೀಸ್‌ ಕಥೆ ಆಧಾರಿತ ಚಿತ್ರಗಳನ್ನು ನೋಡಿಕೊಂಡು ಚೆಮ್ಮನೂರು ಜ್ಯುವೆಲ್ಲರ್ಸ್‌ ಸೇರಿ ಇತರೆ ಚಿನ್ನಾಭರಣ ಮಳಿಗೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಸಹೋದರರು ಸೇರಿ ನಾಲ್ಕು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

2011ರಿಂದ 2018ರ ಜನವರಿವರೆಗೆ ಚೆಮ್ಮನೂರು, ಸಂತೋಷ್‌ ಜ್ಯುವೆಲ್ಲರಿ ಹಾಗೂ ಚಿಕ್ಕಬಳ್ಳಾಪುರದ ಚಿನ್ನಾಭರಣ ಮಳಿಗೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಕೊತ್ತನೂರಿನ ಸಾಮ್ರಾಟ್‌ ಅಲಿಯಾಸ್‌ ಶಿವಮೂರ್ತಿ(30), ಈತನ ಸಹೋದರ ಶಂಕರ್‌ (26) ಹಾಗೂ ಕದ್ದ ವಸ್ತುಗಳ ವಿಲೇವಾರಿಗೆ ನೆರವಾಗುತ್ತಿದ್ದ ನಿವೇಶ್‌ ಕುಮಾರ್‌ (29), ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಗದೀಶ್‌ (34) ಅವರನ್ನು ಬಂಧಿಸಲಾಗಿದೆ. 

ಆರೋಪಿಗಳ ಬಂಧನದಿಂದಾಗಿ 2011ರಿಂದ 2018ರವರೆಗೆ ನಡೆದಿದ್ದ ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿ ವಿವಿಧ ಚಿನ್ನಾಭರಣ ಮಳಿಗೆಗಳ ದರೋಡೆ ಪ್ರಕರಣಗಳು ಪತ್ತೆಯಾಗಿವೆ. ಇವರಿಂದ 8 ಕೆ.ಜಿ. ಚಿನ್ನಾಭರಣ, ನಾಲ್ಕು ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜ್ಯೋತಿಷಿ ಕಳ್ಳನಾದ: ನಗರದ ಜ್ಯೋತಿಷಿಯೊಬ್ಬರ ಮಕ್ಕಳಾಗಿರುವ ಶಿವಮೂರ್ತಿ ಮತ್ತು ಶಂಕರ್‌ ಕ್ರಮವಾಗಿ 23 ಮತ್ತು 19ನೇ ವಯಸ್ಸಿನಿಂದಲೇ ಕಳವು ಕೃತ್ಯ ಆರಂಭಿಸಿದ್ದರು. ಶಿವಮೂರ್ತಿ 8ನೇ ತರಗತಿ ಫೇಲಾಗಿದ್ದು, ಶಂಕರ್‌ ಬಿ.ಕಾಂ ಪದವಿಧರನಾಗಿದ್ದಾನೆ. ಜ್ಯೋತಿಷ್ಯ ವೃತ್ತಿಯಲ್ಲಿ ನಿರೀಕ್ಷೆಯಂತೆ ಐಷಾರಾಮಿ ಜೀವನ ನಡೆಸಲು ಸಾಧ್ಯವಾಗದೆ, ಅಪರಾಧ ಕಥೆ ಆಧಾರಿತ ಸಿನಿಮಾಗಳನ್ನು ವೀಕ್ಷಿಸಿ, ಅವುಗಳಲ್ಲಿನ ಪೊಲೀಸರ ತನಿಖಾ ವಿಧಾನಗಳನ್ನು ತಿಳಿದುಕೊಂಡು ಅಪರಾಧ ಕೃತ್ಯಕ್ಕೆ ಇಳಿದಿದ್ದ. ಅನಂತರ ಕೃತ್ಯಕ್ಕೆ ತಮ್ಮನನ್ನೂ ಬಳಸಿಕೊಂಡಿದ್ದ.

ಕೃತ್ಯವೆಸಗುವ ಮೊದಲು ಶಿವು ಒಬ್ಬನೇ ಚಿನ್ನಾಭರಣ ಮಳಿಗೆಗೆ ಹೋಗಿ ಸುತ್ತಾಡಿ ಪರಾರಿಯಾಗುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದ. ನಂತರ ತಾನೇ ಒಂದು ಸಂಚು ರೂಪಿಸುತ್ತಿದ್ದ. ಬಳಿಕ ಆರೋಪಿ ತನ್ನ ಸ್ಕಾರ್ಪಿಯೋ ಕಾರನ್ನು ಮಳಿಗೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ನಿಲುಗಡೆ ಮಾಡುತ್ತಿದ್ದ. ಕಾರ್‌ನಲ್ಲಿದ್ದ ಹೆಲ್ಮೆಟ್‌, ಬುಲೆಟ್‌ ಪ್ರೂಫ್ ಜಾಕೆಟ್‌, ಕೈ ವಸ್ತ್ರಗಳನ್ನು ಧರಿಸಿ ಸಹೋದರ ತರುತ್ತಿದ್ದ ಬೈಕ್‌ನಲ್ಲಿ ಕೃತ್ಯವೆಸಗಿ ಪರಾರಿಯಾಗುತ್ತಿದ್ದ. ಮೊದಲಿಗೆ ಸಹೋದರರಿಬ್ಬರು ಸೇರಿ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಸಂತೋಷ್‌ ಜ್ಯುವೆಲ್ಲರ್ಸ್‌, ಪೀಣ್ಯ, ಸುಬ್ರಹ್ಮಣ್ಯನಗರದ ಚೆಮ್ಮನೂರು ಜ್ಯುವೆಲ್ಲರ್ಸ್‌ ಮಳಿಗೆ ಕಳವು ಮಾಡಿದ್ದಾರೆ.

Advertisement

ಪೆಟ್ರೋಲ್‌ ಬಾಂಬ್‌ ಬಳಕೆ: ಚಿನ್ನಾಭರಣ ಮಳಿಗೆಗಳಿಗೆ ನಡೆದು ಹೋಗುತ್ತಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೈಗೆ ಸಿಕ್ಕ ಚಿನ್ನಾಭರಣ ದೋಚುತ್ತಿದ್ದರು. ಯಾರಾದರೂ ತಮ್ಮನ್ನು ಹಿಡಿಯಲು ಯತ್ನಿಸಿದರೆ ಆರೋಪಿ ಶಿವು, ಪೆಟ್ರೋಲ್‌ ಬಾಂಬ್‌ ಎಸೆಯುತ್ತಿದ್ದರು. ಆಗ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ. ಬಳಿಕ ಕಾರಿನಲ್ಲಿ ಚಿನ್ನಾರಭಣದೊಂದಿಗೆ ಪರಾರಿಯಾಗುತ್ತಿದ್ದ. ಕೃತ್ಯದ ವೇಳೆ ಮೊಬೈಲ್‌ ಬಳಸುತ್ತಿರಲಿಲ್ಲ. ಅಲ್ಲದೆ, ಕೃತ್ಯಕ್ಕೆಂದು ಮಹರಾಷ್ಟ್ರದ ಸಾಂಗ್ಲಿ ಮತ್ತು ಗೌರಿಬಿದನೂರಿನಲ್ಲಿ ಎರಡು ಬೈಕ್‌ ಕಳವು ಮಾಡಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ
 
ಸಿಸಿಟಿವಿಯಲ್ಲಿ ಸೆರೆಯಾಗಿ ಸಿಕ್ಕಿಬಿದ್ದರು
ರಾಜಾಜಿನಗರದಲ್ಲಿ ದರೋಡೆ ಯತ್ನಿಸಿ ವಿಫ‌ಲವಾದ ಹಿನ್ನೆಲೆಯಲ್ಲಿ ಪರಾರಿಯಾಗುತ್ತಿದ್ದ ವೇಳೆ ಅಲ್ಲಿನ ಸ್ಥಳೀಯ ಸಿಸಿಟಿವಿಯಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿತ್ತು. ಹೀಗೆ ಆರೋಪಿಗಳು ಪರಾರಿಯಾಗುವ ಮಾರ್ಗದ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದೇವನಹಳ್ಳಿಯ ವಿನಾಯಕ ನಗರದ ಲೇಔಟ್‌ನಲ್ಲಿ ಕೊನೆಯ ದೃಶ್ಯ ಸಿಕ್ಕಿತ್ತು. ಬಳಿಕ ಅಲ್ಲಿನ ಎಲ್ಲ ಮನೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಾಯಿತು. ಆಗ ಮೂವರು ಯುವಕರು ಬಾಡಿಗೆ ಪಡೆದು ಕೆಲ ತಿಂಗಳುಗಳ ಕಾಲ ಇಲ್ಲೇ ಇದ್ದರು. ಆದರೆ, ಕೆಲ ದಿನಗಳ ಹಿಂದಿನಿಂದ ನಾಪತ್ತೆಯಾಗಿ ದ್ದಾರೆ ಎಂದು ಮನೆ ಮಾಲೀಕರೊಬ್ಬರು ಮಾಹಿತಿ ನೀಡಿದರು. ಈ ಮಾಹಿತಿ ಅನ್ವಯ ಕಳೆದ ಒಂದೂವರೆ ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರುಗಳ ಒಡೆಯರು!
ಆರೋಪಿ ಶಿವು ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಟೊಯೊಟೊ ಫಾರ್ಚ್ಯುನರ್‌ ಮತ್ತು ಐ20 ಕಾರುಗಳನ್ನು ಖರೀದಿಸಿದ್ದಾನೆ. ತನ್ನ ಲ್ಯಾಪ್‌ಟಾಪ್‌ ಹಾಗೂ ಪೆನ್‌ಡ್ರೈವ್‌ನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್‌, ಫ್ರೆಂಚ್‌, ಚೀನಿ ಸೇರಿದಂತೆ ವಿವಿಧ ಭಾಷೆಯ ಅಪರಾಧ ಹಾಗೂ ಪೊಲೀಸ್‌ ತನಿಖಾ ಸಿನಿಮಾಗಳನ್ನು ಸಂಗ್ರಹಿಸಿದ್ದಾನೆ. ಇವುಗಳನ್ನು ನೋಡಿಯೇ ಆತ ಪ್ರೇರಣೆಗೊಂಡು ಕೃತ್ಯವೆಸಗುತ್ತಿದ್ದ. ಡಾಲರ್‌ ತರುತ್ತಿದ್ದ ಶ್ರೀಲಂಕಾದಲ್ಲಿ ಕದ್ದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಶಿವು, ಅಮೆರಿಕನ್‌ ಡಾಲರ್‌ನೊಂದಿಗೆ ನಗರಕ್ಕೆ ಬರುತ್ತಿದ್ದ. ಜತೆಗೆ ಜ್ಯೋತಿಷಿ ವೇಷದಲ್ಲಿ ಹೋಗುತ್ತಿದ್ದರಿಂದ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳ ಕಣ್ಣಿಗೆ ಬೀಳುತ್ತಿರಲಿಲ್ಲ. ಅಲ್ಲದೇ, ವಿದೇಶಕ್ಕೆ ಹೋಗುವ ವೇಳೆ ನಿಯಮದ ಪ್ರಕಾರವೇ ನಿಗದಿತ ಪ್ರಮಾಣದಲ್ಲಿ ಚಿನ್ನ ಕೊಂಡೊಯ್ಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next